ಬಿಜೆಪಿ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟರೆ ಬೆಂಗಳೂರು ಉತ್ತರಕ್ಕೆ ಸುಮಲತಾ ಅಂಬರೀಶ್?

ಬಿಜೆಪಿ ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟರೆ ಬೆಂಗಳೂರು ಉತ್ತರಕ್ಕೆ ಸುಮಲತಾ ಅಂಬರೀಶ್?

ಬೆಂಗಳೂರು, ಸೆ.8- ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಾಗಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಹಾಲಿ ಸಂಸದೆ ಸುಮಲತಾ ಅಂಬರೀಶ್ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಮಂಡ್ಯ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಬೇಕೆಂದು ಜೆಡಿಎಸ್ ಬೇಡಿಕೆ ಇಟ್ಟಿರುವ ಕಾರಣಕ್ಕೆ ಸುಮಲತಾ ಅಂಬರೀಶ್ ಅವರನ್ನು ಬೆಂಗಳೂರು ಉತ್ತರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪಕ್ಷ ಒಲವು ತೋರಿದೆ ಕಾರಣ
ಹಾಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿ.ವಿ.ಸದಾನಂದಗೌಡ ಮುಂದಿನ ಲೋಕಸಭೆ ಚುನಾವಣೆಗೆ ಸ್ರ್ಪಧಿಸುವ ಸಾದ್ಯತೆ ಕಡಿಮೆ ಇರುವುದರಿಂದ ಸುಮಲತಾ ಅವರನ್ನೇ ಅಭ್ಯರ್ಥಿ ಮಾಡಲು ಬಿಜೆಪಿ ನಿರ್ಧರಿಸಿದಂತೆ ಕಾಣುತ್ತಿದೆ. ನಾನು ಮಂಡ್ಯ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡುವುದಿಲ್ಲ ಎಂದು ಈ ಹಿಂದೆ ಸುಮಲತಾ ಅಂಬರೀಶ್ ಹೇಳಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಾಗುತ್ತಿರುವ ಕಾರಣ ಕ್ಷೇತ್ರ ಬದಲಾವಣೆ ಅನಿವಾರ್ಯ ಎಂದು ಬಿಜೆಪಿ ನಾಯಕರು ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ.
ಅಲ್ಲದೆ ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 7 ಹಾಗೂ ಜೆಡಿಎಸ್ ಒಂದು ಕ್ಷೇತ್ರವನ್ನು ಗೆದ್ದಿತ್ತು. ಇಲ್ಲಿ ಒಂದೇ ಒಂದು ಕ್ಷೇತ್ರವನ್ನೂ ಸಹ ಬಿಜೆಪಿ ಗೆದ್ದಿಲ್ಲವಾದರೂ ಶೇಕಡವಾರು ಮತಗಳಿಕೆಯಲ್ಲಿ ಹೆಚ್ಚಳ ಮಾಡಿಕೊಂಡಿತ್ತು. ಒಂದು ವೇಳೆ ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ ಜಿಲ್ಲೆಯ ಮೇಲೆ ಹಿಡಿತ ಕೈ ತಪ್ಪಲಿದೆ ಎಂಬ ಆತಂಕದಲ್ಲಿರುವ ಜೆಡಿಎಸ್ ಈ ಕ್ಷೇತ್ರವನ್ನು ನಮಗೇ ಬಿಟ್ಟು ಕೊಡಬೇಕೆಂದು ಪಟ್ಟು ಹಿಡಿದಿದೆ ಹೀಗಾಗಿ ಸುಮಲತಾ ಅಂಬರೀಶ್ ಅವರನ್ನು ಬೆಂಗಳೂರು ಉತ್ತರದಿಂದ ಅಭ್ಯರ್ಥಿ ಮಾಡುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಬದಲಾಗುವ ರಾಜಕಾರಣದಲ್ಲಿ ಕ್ಷೇತ್ರ ಬಿಟ್ಟು ಕೊಡಲು ಸುಮಲತಾ ಒಪ್ಪದೆ ಹೊದರೆ ಜೆಡಿಎಸ್ ಪಟ್ಟು ಹಿಡಿದು ಕುಳಿತರೆ ಆಗ ಬಿಜೆಪಿ ತಲೆಬಾಗಲೆ ಬೇಕು ಆ ಸಂಧರ್ಭದಲ್ಲಿ ಸುಮಲತಾ ಅಂಬರೀಶ್ ರೇಬಲ್ ಆದರೆ ಕಾಂಗ್ರೆಸ್ ಸೇರಿ ತಮ್ಮ ಕ್ಷೇತ್ರದಿಂದಲೆ ಸ್ಫರ್ದಿಸಲು ಬಹುದು ಅಥವಾ ಮೊದಲಿನಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯು ಇದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಗೆ ಬರುವ ಕೆ.ಆರ್.ಪುರಂ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿಲೇಔಟ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಬಿಗಿದೆ. ಹೆಬ್ಬಾಳ, ಬ್ಯಾಟರಾಯನಪುರ ಮತ್ತು ಪುಲಿಕೇಶಿನಗರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಕ್ಷೇತ್ರ ಪುನರ್ ವಿಂಗಡಣೆಯಾದ ನಂತರ ಬೆಂಗಳೂರು ಉತ್ತರ ಬಿಜೆಪಿಯ ಭದ್ರಕೋಟೆಯಾಗಿರುವುದರಿಂದ ಸುಮಲತಾ ಅಂಬರೀಶ್ ಅವರನ್ನೇ ಕಣಕ್ಕಿಳಿಸಿದರೆ ಗೆಲುವು ಸುಲಭವಾಗಿ ದಕ್ಕಬಹುದೆಂದು ಬಿಜೆಪಿ ಲೆಕ್ಕಾಚಾರ ಹಾಕಿ ಕುಳಿತಿದೆ.
ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅಂಬರೀಶ್ ಅಭ್ಯರ್ಥಿಯಾಗಲು ಜೆಡಿಎಸ್ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಬಹುತೇಕ ಹಾಲಿ ಮತ್ತು ಮಾಜಿ ಶಾಸಕರು ಅವರನ್ನು ಟೀಕಿಸುತ್ತಿದ್ದಾರೆ. ಈ ಎಲ್ಲವನ್ನೂ ಅಳೆದು ತೂಗಿರುವ ಬಿಜೆಪಿ ಸುಮಲತಾ ಅಂಬರೀಶ್ ಅವರನ್ನು ಬೆಂಗಳೂರು ಉತ್ತರಕ್ಕೆ ಕರೆತರುವ ಸಿದ್ದತೆಯಲ್ಲಿದೆ ಎಂದು ತಿಳಿದುಬಂದಿದೆ.
ಸುಮಲತಾ ಅಂಬರೀಶ್ ಬಿಜೆಪಿ-ಜೆಡಿಎಸ್ ಒಮ್ಮತದ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರದಿಂದ
ಕಣಕ್ಕಿಳಿಯುವುದು ಖಚಿತವಾಗಿದೆ.

ಸುಧೀರ್ ವಿಧಾತ,ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!