


ಎಸ್ ಎಸ್ ಎಲ್ ಸಿ ಫಲಿತಾಂಶ: ಶೇ.62.34 ಫಲಿತಾಂಶ, 2024-25ರ ಪರೀಕ್ಷೆ -1 ರಲ್ಲಿ ಅಪೂರ್ಣ ಫಲಿತಾಂಶ ಪಡೆದಿದ್ದಂತಹ ಶಾಲಾ ಅಭ್ಯರ್ಥಿಗಳಿಗೆ ಪರೀಕ್ಷೆ-2ಕ್ಕೆ ಶುಲ್ಕವಿಲ್ಲ.
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಬೆಂಗಳೂರು: 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು ಪರೀಕ್ಷೆ ಬರೆದಿದ್ದ 8,42,173 ವಿದ್ಯಾರ್ಥಿಗಳಲ್ಲಿ 5,24,984 ಮಕ್ಕಳು ಉತ್ತೀರ್ಣರಾಗುವ ಮೂಲಕ ಶೇ.62.34 ಫಲಿತಾಂಶ ದಾಖಲಾಗಿದೆ.
ಅಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷಾ ಪಾರದರ್ಶಕತೆ ಹೆಚ್ಚಿಸಲು ಸರ್ಕಾರ ವೆಬ್ಕಾಸ್ಟಿಂಗ್ ವ್ಯವಸ್ಥೆ ಜಾರಿಗೆ ತಂದ ಬಳಿಕ 2024-25ನೇ ಸಾಲಿನಲ್ಲಿ ಫಲಿತಾಂಶ ಶೇಕಡ 8 ರಷ್ಟು ಪ್ರಮಾಣದಲ್ಲೇ ಏರಿಕೆಯಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಶುಕ್ರವಾರ ಮಲ್ಲೇಶ್ವರದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಿದರು.
ಹದಿನೈದು ಹೆಣ್ಣು ಮಕ್ಕಳು ಸೇರಿದಂತೆ 22 ವಿದ್ಯಾರ್ಥಿಗಳು ಈ ಬಾರಿ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ.
ಶಾಲಾವಾರು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ಶೇ.75.59 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಸರ್ಕಾರಿ ಶಾಲೆಗಳಲ್ಲಿ ಶೇ.62.7, ಅನುದಾನಿತ ಶಾಲೆಗಳಲ್ಲಿ ಶೇ.58.97ರಷ್ಟು ಮಕ್ಕಳು ತೇರ್ಗಡೆಹೊಂದಿದ್ದಾರೆ. ಮಾಧ್ಯಮವಾರು ಕನ್ನಡ ಮಾಧ್ಯಮದಲ್ಲಿ ಓದಿದವರಲ್ಲಿ ಶೇ.57.61, ಆಂಗ್ಲ ಮಾಧ್ಯಮದವರು ಶೇ.78.38ರಷ್ಟು ಮಂದಿ ಉತ್ತಿರ್ಣರಾಗಿದ್ದಾರೆ.
2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ಫಲಿತಾಂಶದ ಸುಧಾರಿತ ಅಂಶಗಳು.
2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶವು ಹಿಂದಿನ ಫಲಿತಾಂಶಕ್ಕಿಂತ ಶೇಕಡ 8% ರಷ್ಟು ಸುಧಾರಣೆಯಾಗಿದೆ.

2024-25ರ ಪರೀಕ್ಷೆ -1 ರಲ್ಲಿ ಅಪೂರ್ಣ ಫಲಿತಾಂಶ ಪಡೆದಿದ್ದಂತಹ ಶಾಲಾ ಅಭ್ಯರ್ಥಿಗಳಿಗೆ ಪರೀಕ್ಷೆ-2ಕ್ಕೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಆದರೆ ಖಾಸಗಿ ಅಭ್ಯರ್ಥಿಗಳು, ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸತಕ್ಕದ್ದು.
ಈ ಬಾರಿಯ ಉತ್ತೀರ್ಣರಾಗಿರುವ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಶೇ.60ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಪ್ರಥಮ ದರ್ಜೆ ಹಾಗೂ ಗಣ್ಯತೆಯೊಂದಿಗೆ ತೇರ್ಗಡೆಯಾಗಿರುತ್ತಾರೆ.
2024-25ನೇ ಸಾಲಿನಲ್ಲಿ 625ಕ್ಕೆ 625 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳ ಸಂಖ್ಯೆ 22. ಕಳೆದ ವರ್ಷ 02 ವಿದ್ಯಾರ್ಥಿಗಳು ಮಾತ್ರ 625ಕ್ಕೆ 625 ಅಂಕಗಳನ್ನು ಪಡೆದಿದ್ದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಸಹಯೋಗದೊಂದಿಗೆ Karnataka one mobile app ಮೂಲಕ 2025 ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಸ್ಕ್ಯಾನ್ ಪ್ರತಿ, ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ Android mobile ನಲ್ಲಿ Play store ಮೂಲಕ App download ಮಾಡಿಕೊಳ್ಳಬಹುದು.








