ಅಂಕೋಲದ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಕೋಟಿ ಹಣ ಪತ್ತೆ.! ತಲ್ಲತ್ ಗ್ಯಾಂಗ್‌ನ ಇಬ್ಬರ ಬಂಧನ.
ASHWASURYA/SHIVAMOGGA
news.ashwasurya.in
ಅಶ್ವಸೂರ್ಯ/ಮಂಗಳೂರು : ಕಳೆದ ಒಂದು ತಿಂಗಳ ಹಿಂದೆ ಅಂಕೋಲದ ರಾಮನಗುಳಿ ಹೆದ್ದಾರಿ ಬದಿಯ ನಿರ್ಜನ ಪ್ರದೇಶದಲ್ಲಿ ಮಂಗಳೂರಿನ ಪ್ರಸಿದ್ಧ ಜ್ಯುವೆಲ್ಲರಿ ಮಾಲೀಕರಾಗಿರುವ ರಾಜೇಶ ಪವಾರ್ ಎಂಬುವವರಿಗೆ ಸೇರಿದ್ದ ಕಾರಿನಲ್ಲಿ 1.14 ಕೋಟಿ ನಗದು ಪತ್ತೆಯಾಗಿತ್ತು.! ಇದಾದ ಕೆಲವು ದಿನದ ಬಳಿಕ ರಾಜೇಶ್ ಪವಾರ್ ಮತ್ತು ಕಾರಿನ ಚಾಲಕರು ಅಂಕೋಲಾ ಠಾಣೆಗೆ ತೆರಳಿ ದರೋಡೆ ಕುರಿತು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಕಾರವಾರ ಪೊಲೀಸರು ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ತಲ್ಲತ್ ಗ್ಯಾಂಗ್‌ನ ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ. ಬಳಿಕ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಂಗಳೂರಿಗೆ ಬರುತ್ತಿದ್ದ ಕಾರನ್ನು ಅಂಕೋಲಾ ಬಳಿಯ ರಾಮನಗುಳಿ ಎಂಬಲ್ಲಿ ಅಡ್ಡಗಟ್ಟಿ ಒಂದೂವರೆ ಕೋಟಿ ರೂಪಾಯಿ ದೋಚಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮಂಗಳೂರು ಹೊರವಲಯದ ಅಡ್ಯಾರ್, ಬಜಾಲ್‌ನಲ್ಲಿ ಸಕ್ರಿಯವಾಗಿರುವ ತಲ್ಲತ್ ಗ್ಯಾಂಗ್‌ನ ಸದಸ್ಯರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ದರೋಡೆ ಕುರಿತು ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಈ ಇಬ್ಬರ ಬಂಧನದ ಬಳಿಕ ಮತ್ತೂ ಕೆಲವೊಂದು ಮಹತ್ವದ ಮಾಹಿತಿ ತಿಳಿದಿದೆ. ಈ ದರೋಡೆ ಸಂಬಂಧಿತ ತಲ್ಲತ್ ಗ್ಯಾಂಗ್‌ನ ಪ್ರಮುಖ ಆರೋಪಿಗಳು ತಲೆಮರಿಸಿಕೊಂಡಿದ್ದು, ತೀವ್ರ ತನಿಖೆ ನಡೆಯುತ್ತಿದೆ.ಪೊಲೀಸರು ಇನ್ನಷ್ಟು ಮಾಹಿತಿ ಕಲೆಹಾಕಲು ಮುಂದಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ.