ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ-ಗೃಹಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನ ಕಾರ್ಯಕ್ರಮ

ಶಿವಮೊಗ್ಗ :
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಮಹಾನಗರಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಆ.30 ರಂದು ಬೆಳಿಗ್ಗೆ 11 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪನವರು ನೆರವೇರಿಸುವರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹಾಗೂ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಮತ್ತು ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷರಾದ ಡಿ.ಸುಧಾಕರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ(ಚೆನ್ನಿ) ಅವರು ಅಧ್ಯಕ್ಷತೆ ವಹಿಸುವರು. ಸಂಸದರು, ವಿಧಾನಸಭಾ ಮತ್ತು ವಿಧಾನ ಪರಿಷತ್ ಶಾಸಕರು, ಮಹಾನಗರಪಾಲಿಕೆ ಮಹಾಪೌರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ.ಸಿಇಓ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು, ಅಧಿಕಾರಿಗಳು ಪಾಲ್ಗೊಳ್ಳುವರು.

ಮಹಿಳಾ ಸಬಲೀಕರಣದ ದಿಟ್ಟ ಹೆಜ್ಜೆ-ಗೃಹಲಕ್ಷ್ಮಿ ಯೋಜನೆ

ಮಹಿಳಾ ಆರ್ಥಿಕ ಸಬಲೀಕರಣದತ್ತ ದಿಟ್ಟ ಹೆಜ್ಜೆ ಗೃಹಲಕ್ಷ್ಮಿ ಯೋಜನೆಯಾಗಿದೆ. ಕುಟುಂಬ ನಿರ್ವಹಣೆಯಲ್ಲಿ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಆಕೆ ಆರ್ಥಿಕವಾಗಿ ಸಬಲವಾದಲ್ಲಿ ಕುಟುಂಬ ನಿರ್ವಹಣೆ ಉತ್ತಮ ಗುಣಮಟ್ಟದಿಂದ ಕೂಡಿರುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಮನೆ ಯಜಮಾನಿಗೆ ಪ್ರತಿ ತಿಂಗಳು ರೂ.2000 ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು 2023-24 ನೇ ಸಾಲಿನಿಂದ ಜಾರಿಗೆ ತಂದಿದೆ.
ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆರ್ಥಿಕವಾಗಿ ಸದೃಢರಾದ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಸಬಲತೆ ಸಾಧ್ಯವಾಗುತ್ತದೆ. ಉದ್ಯೋಗ, ವೃತ್ತಿಯಲ್ಲಿ ತೊಡಗದೇ ಇರುವ ಅನೇಕ ಮಹಿಳೆಯರು ತಾವು ಬಯಸಿದ ವಸ್ತು/ಸೇವೆ ಪಡೆಯಲು ಇಂದಿಗೂ ತಂದೆ/ಗಂಡನ ಮೇಲೆ ಅವಲಂಬಿತರಾಗಿದ್ದು ಸರ್ಕಾರದ ಈ ಯೋಜನೆಯು ಅವರನ್ನು ಆರ್ಥಿಕವಾಗಿ ಸಲಬರನ್ನಾಗಿಸುತ್ತದೆ
ಜಿಲ್ಲೆಯಲ್ಲಿ ಜುಲೈ 18 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿ. ಜಿಲ್ಲೆಯಲ್ಲಿ 4,23,570 ಅರ್ಹ ಫಲಾನುಭವಿಗಳಿದ್ದು ಈವರೆಗೆ 3,60,294 ಮಹಿಳೆಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಶೇ.85.06 ಪ್ರಗತಿಯಾಗಿದ್ದು ರಾಜ್ಯದಲ್ಲಿ 14ನೇ ಸ್ಥಾನದಲ್ಲಿದ್ದೇವೆ. ಈಗಲೂ ದಣಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೇ.100 ಗುರಿ ಸಾಧಿಸಲು ಜಾಗೃತಿ ಹಾಗೂ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಆಗಸ್ಟ್ 30 ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆಗೆ ಮೈಸೂರಿನಲ್ಲಿ ಚಾಲನೆ ನೀಡುವರು. ಅಂದು ರಾಜ್ಯಾದ್ಯಂತ ಏಕಕಾಲದಲ್ಲಿ ನೋಂದಣಿಯಾಗಿರುವ ಮಹಿಳಾ ಫಲಾನುಭವಿಗಳ ಖಾತೆಗೆ ಜಿಲ್ಲಾ ಮಟ್ಟದಿಂದಲೇ ಡಿಬಿಟಿ ಮೂಲಕ ನೇರವಾಗಿ ಮೊದಲ ಕಂತಿನ ಹಣ ಜಮೆಯಾಗಲಿದೆ. ಜಿಲ್ಲಾ ಮಟ್ಟದ ಕಾರ್ಯಕ್ರಮವು ಆ.30 ರ ಬೆಳಿಗ್ಗೆ 11 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದ್ದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪನವರು ಕಾರ್ಯಕ್ರಮವನ್ನು ಉದ್ಘಾಟಿಸುವರು.

ಸೌಲಭ್ಯಕ್ಕೆ ಯಾರು ಅರ್ಹರು?

  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡುವ ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
  • ವೃದ್ದಾಪ್ಯ ವೇತನ, ವಿಧವಾ ಮಾಸಾಶನ, ವಿಶೇಷಚೇತನರ ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ಯಾವುದೇ ಮಾಸಾಶನ ಪಡೆಯುತ್ತಿದ್ದರೂ ಈ ಯೋಜನೆಯಡಿ ಮನೆಯೊಡತಿ 2 ಸಾವಿರ ರೂಪಾಯಿ ಪಡೆಯಲು ಅರ್ಹತೆ ಹೊಂದಿರುತ್ತಾಳೆ.
  • ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ/ಜಿಎಸ್‍ಟಿ ರಿಟನರ್ಸ್ ಸಲ್ಲಿಸುವವರಾಗಿದ್ದಲ್ಲಿ ಅರ್ಹರಾಗುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ:
ಫಲಾನುಭವಿಗಳು ಗ್ರಾಮ ಒನ್, ಆನ್‍ಲೈನ್ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ನಾಡ ಕಚೇರಿಗಳಲ್ಲಿ ಖುದ್ದಾಗಿ ಅರ್ಜಿ ಸಲ್ಲಿಸಬಹುದು. ಹಾಗೂ ಪ್ರಜಾ ಪ್ರತಿನಿಧಿ ಮೂಲಕ ಸಹ ಪೋರ್ಟಲ್‍ನಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.
ಅರ್ಜಿದಾರರು ರೇಷನ್ ಕಾರ್ಡ್ ಸಂಖ್ಯೆ, ಮನೆಯ ಯಜಮಾನಿಯ ಹಾಗೂ ಪತಿಯ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. ತಾಯಿ ಕುಟುಂಬದ ಮುಖ್ಯಸ್ಥೆಯಾಗಿದ್ದರೆ ಮತ್ತು ಇತ್ತೀಚೆಗೆ ಅವರು ನಿಧನರಾಗಿದ್ದರೆ, ಪಡಿತರ ಚೀಟಿಯಲ್ಲಿ ಯಜಮಾನಿ ಯಾರೆಂಬುದು ಅಗತ್ಯ ತಿದ್ದುಪಡಿಯಾದ ನಂತರ ನೊಂದಾಯಿಸಬಹುದು.
ಇನ್ನು ಫಲಾನುಭವಿಗಳು ಸರ್ಕಾರಿ ವಲಯದಲ್ಲಿ ಕೆಲಸ ಮಾಡಿದ್ದರೆ, ಈಗ ಅವರು ನಿವೃತ್ತರಾಗಿ ಪಿಂಚಣಿ ಪಡೆಯುತ್ತಿದ್ದರೂ ಕೂಡ ಈ ಯೋಜನೆಗೆ ನೋಂದಾಯಿಸಿಕೊಳ್ಳಬಹುದು. ಆದರೆ ಅವರು ಆದಾಯ ತೆರಿಗೆಯನ್ನು ಪಾವತಿಸುವವರಾಗಿರಬಾರದು.
ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ಘೋಷಿತರಾಗಿರುವ ಮಂಗಳಮುಖಿಯರು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಪಡಿತರ ಚೀಟಿಯಲ್ಲಿ ಪತಿಯು ಕುಟುಂಬದ ಮುಖ್ಯಸ್ಥ ಎಂದಿರುವುದನ್ನು ಕುಟುಂಬದ ಯಜಮಾನಿ ಮಹಿಳೆ ಎಂದು ಬದಲಾಯಿಸಿ ನೊಂದಾಯಿಸಿಕೊಳ್ಳಬಹುದು. ಈ ಯೋಜನೆಗೆ ಫಲಾನುಭವಿಗಳು ನೋಂದಣಿ ಮಾಡಿಕೊಳ್ಳಲು ಯಾವುದೇ ಗಡುವನ್ನು ನಿಗದಿ ಮಾಡಿರುವುದಿಲ್ಲ.

ಗೃಹಲಕ್ಷ್ಮಿ ಯೋಜನೆ ಕುರಿತು ಯಾವುದೇ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಉಚಿತ ಟಾಲ್‍ಫ್ರೀ ಸಹಾಯವಾಣಿ ಸಂಖ್ಯೆ 1902 ಗೆ ಕರೆ ಮಾಡಬಹುದು.

ಮಹಿಳೆಯರ ಮಾತು…
ಗೃಹಲಕ್ಷ್ಮಿ ಯೋಜನೆಗೆ ನಾನು ಈಗಾಗಲೇ ನೊಂದಾಯಿಸಿಕೊಂಡಿದ್ದೇನೆ. ಆ.30 ರಂದು ನನ್ನ ಬ್ಯಾಂಕ್ ಖಾತೆಗೆ ರೂ. 2000 ಹಣ ಬರಲಿದೆ. ನನ್ನ ಮೊದಲ ತಿಂಗಳ ಹಣದಿಂದ ನನ್ನ ತಾಯಿ ಮತ್ತು ನನ್ನ ಮಗಳಿಗೆ ಬಟ್ಟೆ ಕೊಡಿಸುತ್ತೇನೆ. ಸರ್ಕಾರ ನೀಡಲಿರುವ ಈ ಮೊತ್ತ ನನ್ನಂತಹವರ ಅನೇಕ ಅವಶ್ಯಕತೆಗಳನ್ನು ಪೂರೈಸಲಿದೆ.

            - ನಳಿನ,ಅಬ್ಬಲಗೆರೆ                             
 
               ನಾನೀಗಾಗಲೇ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದು, ಈ ಯೋಜನೆ ಕುರಿತು ಮಹಿಳೆಯರಲ್ಲಿ ಭವಿಷ್ಯದ ಭರವಸೆ ಮೂಡಿದೆ. ಈ ಹಣವನ್ನು ಉಳಿತಾಯಕ್ಕಾಗಿ, ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸದ್ಬಳಕೆ ಮಾಡಿಕೊಳ್ಳುತ್ತೇವೆ.
                                                                    
              - ಮಾಲಾ, ಹರಿಗೆ

ವಿಶೇಷ ಲೇಖನ:
ಭಾಗ್ಯ ಎಂ.ಟಿ, ವಾರ್ತಾ ಸಹಾಯಕರು
ವಾರ್ತಾ ಇಲಾಖೆ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!