ಶಕ್ತಿ ಯೋಜನೆ : ಸಬಲೀಕರಣಗೊಂಡ ಮಹಿಳೆಯರ ಪಯಣ

ಶಕ್ತಿ ಯೋಜನೆ : ಸಬಲೀಕರಣಗೊಂಡ ಮಹಿಳೆಯರ ಪಯಣ

ಮಹಾತ್ಮಾ ಗಾಂಧಿಯವರು ಮಹಿಳಾ ಸ್ವಾತಂತ್ರ್ಯಕ್ಕೆ ಅನನ್ಯವಾದ ಪ್ರಾಶಸ್ತ್ಯ ನೀಡಿದ್ದರು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹಿಳೆಯರ ಸ್ವಾತಂತ್ರ್ಯ ಹಾಗೂ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿಗೆ ತಂದಿದೆ.
ಮಹಿಳೆ ಕಟ್ಟುಪಾಡುಗಳನ್ನು ಮೀರಿ ಹೊರ ಬರುತ್ತಿದ್ದಾಳೆ. ಕುಟುಂಬವನ್ನು ಮುನ್ನಡೆಸುವ ಈಕೆ, ಸಮಾಜದಲ್ಲಿ ನಿರ್ಭೀತಿಯಿಂದ ಹೆಜ್ಜೆ ಇಡಲು ಟೊಂಕ ಕಟ್ಟಿ ನಿಂತಿದ್ದಾಳೆ. ಇದೆಲ್ಲ ಸಾಧ್ಯವಾಗುತ್ತಿರುವುದು ಸರ್ಕಾರದ ಮಹಿಳಾ ಸಬಲೀಕರಣ ಯೋಜನೆಗಳಿಂದ.
ಶಕ್ತಿ ಯೋಜನೆ ಮೂಲಕ ರಾಜ್ಯ ಸರ್ಕಾರವು ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಜೂನ್ 11 ರಂದು ಜಾರಿಗೆ ಬಂದ ಶಕ್ತಿ ಯೋಜನೆಯಿಂದ ಓದುವ ಹೆಣ್ಣು ಮಕ್ಕಳ ಕನಸುಗಳಿಗೆ ರೆಕ್ಕೆ ಮೂಡಿದಂತಾಗಿದೆ.
ಸರ್ಕಾರದ ಶಕ್ತಿ ಯೋಜನೆಗೆ ಅಭೂತಪೂರ್ವವಾದ ಪ್ರತಿಕ್ರಿಯೆ ಮತ್ತು ಸಕಾರಾತ್ಮಕ ಸ್ಪಂದನೆ ದೊರಕಿದೆ. ಮಹಿಳೆಯರು ದೂರದ ಪಟ್ಟಣಗಳಿಗೆ ತೆರಳಿ ಹೆಚ್ಚಿನ ಆದಾಯದ ಉದ್ಯೋಗ ಹೊಂದಲು ಸಹಕಾರಿಯಾಗಿದೆ.
ಈ ಯೋಜನೆಯಡಿಯಲ್ಲಿ ಮಹಿಳೆಯರು ನಗರ ಸಾರಿಗೆ, ಸಾಮಾನ್ಯ ಹಾಗೂ ವೇಗದೂತ ಸರ್ಕಾರಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಎಂದೂ ಮನೆಯಿಂದ ಹೊರಬರದ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದ್ದು, ದೇವಾಲಯಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಶಿಕ್ಷಣ, ಉದ್ಯೋಗ, ಪ್ರವಾಸ ಮುಂತಾದ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ. ಪ್ರಯಾಣ ವೆಚ್ಚದ ಉಳಿತಾಯದಿಂದ ಮಹಿಳೆಯರಿಗೆ ದೈನಂದಿನ ಬದುಕಿನಲ್ಲಿ ಮತ್ತಷ್ಟು ಬಲ ತುಂಬಿದ್ದು, ಹೆಚ್ಚಿನ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

   ಜೂನ್ 11 ರಿಂದ ಶಕ್ತಿ ಯೋಜನೆ ಜಾರಿಗೆ ಬಂದಿದ್ದು, ಈ ಮಾಹೆಯಲ್ಲಿ ಶಿವಮೊಗ್ಗ ವಿಭಾಗದಲ್ಲಿ ಒಟ್ಟು 1239661 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದು ರೂ.42535743 ವೆಚ್ಚವನ್ನು ಸರ್ಕಾರ ಭರಿಸಲಿದೆ. ಜುಲೈ ಮಾಹೆಯಲ್ಲಿ 2401146 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಸದರಿ ಮಾಹೆ ವೆಚ್ಚ 76279165 ಆಗಿರುತ್ತದೆ. ಆಗಸ್ಟ್ 22 ರವರೆಗೆ 1664330 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು 

ರೂ. 54626015 ವೆಚ್ಚ ಸೇರಿದಂತೆ ಒಟ್ಟಾರೆ ಜುಲೈ 11 ರಿಂದ ಆಗಸ್ಟ್ 22 ರವರೆಗೆ 5305137 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿರುತ್ತಾರೆ. ಒಟ್ಟು ರೂ.173440923 ವೆಚ್ಚವಾಗಿದ್ದು, ಸರ್ಕಾರ ನಿಗಮಕ್ಕೆ ಭರಿಸಲಿದೆ ಎಂದರು.
ಯೋಜನೆ ಅನುಷ್ಟಾನದ ನಂತರ ನೂಕು ನುಗ್ಗಲು ತಪ್ಪಿಸಲು, ಅಹಿತಕರ ಘಟನೆಗಳು ನಡೆಯದಂತೆ ಸೂಪರ್‍ವೈಸರ್‍ಗಳನ್ನು ನಿಯೋಜಿಸಿ ಕ್ರಮ ವಹಿಸಲಾಗಿದೆ. ವಿಶೇಷಜಾತ್ರೆ/ಹಬ್ಬವಿರುವ ದಿನಗಳನ್ನು ಗುರುತಿಸಿ ಪ್ರಯಾಣಿಕರ ಸಂದಣಿ ಅನುಗುಣವಾಗಿ ಘಟಕದಿಂದ ಹೆಚ್ಚುವರಿ ಬಸ್ಸುಗಳ ತ್ವರಿತ ನಿಯೋಜನೆ, ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.

-ವಿಜಯಕುಮಾರ್, ವಿಭಾಗೀಯ ನಿಯಂತ್ರಕರು, ಕೆಎಸ್‍ಆರ್‍ಟಿಸಿ, ಶಿವಮೊಗ್ಗ ವಿಭಾಗ

ಪ್ರಯೋಜನ ಹೀಗೆ ಪಡೆಯಿರಿ :

ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಮಾಡಲು ಶಕ್ತಿ ಸ್ಮಾಟ್ ್ಕಾರ್ಡ್ ನೀಡಲಾಗುವುದು. ಶಕ್ತಿ ಸ್ಮಾರ್ಟ್ ಕಾರ್ಡ್‍ಗಳಿಗಾಗಿ ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ಸ್ಮಾರ್ಟ್ ಕಾರ್ಡ್ ಪಡೆಯುವ ತನಕ ಪ್ರಯಾಣಿಸುವ ಸಂದರ್ಭದಲ್ಲಿ ಆಧಾರ್‍ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಿಗೆ ಪತ್ರ, ಭಾರತ ಸರ್ಕಾರ ಅಥವಾ ರಾಜ್ಯ ಸರ್ಕಾರದ ಸಂಸ್ಥೆಗಳು ವಿತರಿಸುವ ಗುರುತಿನ ಚೀಟಿ ಹಾಗೂ ಅಂಗವಿಕಲರ ಮತ್ತು ಹಿರಿಯ ನಾಗರೀಕರ ಕಲ್ಯಾಣ ನಿರ್ದೇಶನಾಲಯದ ಗುರುತಿನ ಚೀಟಿ ತೋರಿಸಿ ಪ್ರಯಾಣಿಸಬಹುದು. ಮಹಿಳಾ ಪ್ರಯಾಣಿಕರು ಪ್ರಯಾಣ ಸಂದರ್ಭದಲ್ಲಿ ಶೂನ್ಯ ಮೊತ್ತ ಟಿಕೆಟ್ ಪಡೆದುಕೊಳ್ಳಬೇಕು.
ರಾಜ್ಯದ ಒಳಗೆ ಪ್ರಯಾಣಿಸಲು ಮಾತ್ರ ಅನ್ವಯ. ಅಂತರ ರಾಜ್ಯ ಪ್ರಯಾಣಕ್ಕೆ ಅವಕಾಶವಿಲ್ಲ. ಇಟಿಎಂ ತಂತ್ರಾಂಶದಲ್ಲಿ ಉಚಿತ ಟಿಕೆಟ್ ವಿತರಣೆಗಾಗಿ ಅಗತ್ಯ ಮಾರ್ಪಾಡು, ಸಿಬ್ಬಂದಿಗೆ ಸೂಕ್ತ ತರಬೇತಿ. ಗುರುತಿನ ಚೀಟಿ ಪರಿಶೀಲಿಸಿ ಶೂನ್ಯ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಮುಂಗಡ ಬುಕಿಂಗ್ ಸೌಲಭ್ಯವಿರುವ ಬಸ್ಸುಗಳಲ್ಲಿ ಮಹಿಳೆಯರಿಗೆ ಮುಂಗಡ ಆಸನ ಕಾಯ್ದಿರಿಸುವ ಅವಕಾಶವಿದೆ.
ಈ ಯೋಜನೆಯಡಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಇಟಿಎಂ ಗಳಿಂದ ವಿತರಿಸಲಾದ ಶೂನ್ಯ ಟಿಕೆಟ್/ಶಕ್ತಿ ಸ್ಮಾರ್ಟ್ ಕಾರ್ಡ್ ದತ್ತಾಂಶ ಆಧರಿಸಿ ನಿಗಮಗಳಿಗೆ ಸರ್ಕಾರದಿಂದ ಹಣ ಪಾವತಿ ಮಾಡಲಾಗುತ್ತದೆ.

ಪುರುಷ ಪ್ರಯಾಣಿಕರಿಗೆ ಆಸನ ಮೀಸಲು : ಕೆಎಸ್‍ಆರ್‍ಟಿಸಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಎಲ್ಲಾ ಬಸ್ಸುಗಳಲ್ಲಿ(ಅಂತರರಾಜ್ಯ, ಎಸಿ ಮತ್ತು ಐಷಾರಾಮಿ ಬಸ್‍ಗಳನ್ನು ಹೊರತುಪಡಿಸಿ) ಶೇ.50 ರಷ್ಟು ಆಸನಗಳನ್ನು ಪುರುಷರಿಗೆ ಕಾಯ್ದಿರಿಸಲಾಗುವುದು.

ಫಲಾನುಭವಿಗಳ ಅನಿಸಿಕೆ..
ಮೊದಲು ಕಾಲೇಜಿಗೆ ಬರಲು ಬಸ್‍ಪಾಸ್ ಮಾಡಿಸಬೇಕಿತ್ತು. ಮನೆಯಲ್ಲಿ ಬಡತನ ಇರುವ ಕಾರಣ ಅದಕ್ಕೂ ಹಣ ಕೇಳಲು ಕಷ್ಟವಾಗುತ್ತಿತ್ತು. ಶಕ್ತಿ ಯೋಜನೆಯಿಂದ ಬಸ್‍ಪಾಸ್ ಮಾಡಿಸುವ ಕೆಲಸವೂ ಇಲ್ಲ. ಜೊತೆಗೆ ಸಂತೋಷದಿಂದ ಕಾಲೇಜಿಗೆ ಹೋಗಿ ಬರುತ್ತಿದ್ದೇನೆ.

-ಪೂಜಾ ಭದ್ರಾವತಿ

  ನಾನು ಕೆಲಸಕ್ಕೆ ನಿತ್ಯ ಶಿವಮೊಗ್ಗಕ್ಕೆ ಬಸ್ಸಿಗೆ ಹಣ ನೀಡಿ ಹೋಗುತ್ತಿದ್ದೆ. ಹಾಗೂ ನನ್ನ ಎರಡು ಹೆಣ್ಣುಮಕ್ಕಳಿಗೆ ಶಾಲೆಗೆ ತೆರಳು ಬಸ್‍ಪಾಸ್ ಮಾಡಿಸುತ್ತಿದ್ದೆ. ಆದರೆ ಶಕ್ತಿ ಯೋಜನೆಯಿಂದಾಗಿ ನಾವು ಮೂರು ಜನಕ್ಕೂ ಅನುಕೂಲವಾಗಿದ್ದು, ಇಲ್ಲಿ ಉಳಿಯುತ್ತಿರುವ ಹಣ ಇತರೆ ವೆಚ್ಚಕ್ಕೆ ಉಪಯುಕ್ತವಾಗುತ್ತಿದೆ. ಹಾಗೂ ಈ ಹಿಂದೆ ಊರುಗಳಿಗೆ ಹೊರಟರೆ ಮನೆಯಲ್ಲಿ ಬಸ್‍ಚಾರ್ಜ್ ಕೇಳಲು ಕಷ್ಟವಾಗುತ್ತಿತ್ತು. ಈ ಯೋಜನೆ ಬಂದ ಮೇಲೆ ನಿರಾಳವಾಗಿದೆ.

-ಗಾಯಿತ್ರಿ, ಮಲವಗೊಪ್ಪ

   ನಾನು ಖಾಸಗಿ ಕೆಲಸದ ನಿಮಿತ್ತ ನಿತ್ಯ ದೂರದೂರದ ಊರುಗಳಿಗೆ, ಜಿಲ್ಲೆಗಳಿಗೆ ಪ್ರಯಾಣಿಸುತ್ತಿದ್ದ ನನಗೆ ಶಕ್ತಿ ಯೋಜನೆಯಿಂದ ಶಕ್ತಿ ಬಂದಂತಾಗಿದೆ. ಬಸ್‍ಚಾರ್ಜಿಗಾಗಿ ಕಷ್ಟಪಡುತ್ತಿದ್ದ ನನಗೆ ನೆಮ್ಮದಿಯಿಂದ ಪ್ರಯಾಣಿಸುವಂತಾಗಿದೆ. ಸರ್ಕಾರಕ್ಕೆ ಧನ್ಯವಾದಗಳು.

-ರುಕ್ಮಿಣಿ, ಶಿವಮೊಗ್ಗ

  • ವಾರ್ತಾ ಇಲಾಖೆ ಪ್ರಕಟಣೆ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!