ಪ್ರಮುಖ ಸಾಕ್ಷಿಯಾದ ಮೊಬೈಲ್ ವಾಪಸ್ ಕೇಳಿದ್ದ ಪ್ರಜ್ವಲ್ ಕೋರ್ಟ್ ತಿರಸ್ಕಾರ. ಕೋರ್ಟ್ ಅವಧಿಯಲ್ಲಿ ಅದರಲ್ಲಿರು ತನ್ನದೇ ವಿಡಿಯೋ, ಫೋಟೋ ನೋಡಲು ಕೋರ್ಟ್ ಅನುಮತಿ.!
news.ashwasurya.in/Shivamogga
ಅಶ್ವಸೂರ್ಯ/ಹಾಸನ: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮೊಬೈಲ್ ಅನ್ನು ವಾಪಸ್ ಕೊಡುವಂತೆ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಆದರೆ, ಕೋರ್ಟ್‌ನಲ್ಲಿಯೇ ಅದರಲ್ಲಿರುವ ವಿಡಿಯೋ ಮತ್ತು ಫೋಟೋಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಖುಲಾಸೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿರುವ ತನ್ನ 2,000 ವಿಡಿಯೋ ಹಾಗೂ 15 ಸಾವಿರ ಫೋಟೊಗಳು ಇರುವ ಮೊಬೈಲ್ ಅನ್ನು ವಾಪಸ್ ಕೊಡುವಂತೆ ಹಾಗೂ ಪ್ರಕರಣದಿಂದ ತನ್ನನ್ನು ಖುಲಾಸೆ ಮಾಡುವಂತೆ ಸಲ್ಲಿಸಿದ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾಲಯವು, ನಿಮಗೆ ಮೊಬೈಲ್ ಕೊಡಲಾಗುವುದಿಲ್ಲ ಎಂದು ಅವರ ಅರ್ಜಿ ತಿರಸ್ಕರಿಸಿತು.ಆದರೆ ಅ ಮೊಬೈಲ್ ನಲ್ಲಿರುವ ನಿಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಕೋರ್ಟ್‌ನಲ್ಲಿಯೇ ವೀಕ್ಷಣೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ ಎಂದು ಕೋರ್ಟ್ ಹೇಳಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅತ್ಯಾಚಾರ ಪ್ರಕರಣ ಸಂಬಂಧ ಟ್ರಯಲ್ ಆರಂಭ ಮಾಡಿದ ನ್ಯಾಯಾಲಯದ ಮುಂದೆ ಪ್ರಜ್ವಲ್ ಹಾಜರಾದರೂ, ಎಸ್‌ಪಿಪಿ ಹಾಜರಾಗಿರಲಿಲ್ಲ. ಹೀಗಾಗಿ ಕೆಲಕಾಲ ವಿಚಾರಣೆ ಮುಂದೂಡಿದ್ದ ನ್ಯಾಯಾಲಯದ ಮುಂದೆ ತನಗೆ ವಿಡಿಯೋ ಕಾನ್ಫರೆನ್ಸ್ ವಿಚಾರಣೆಗೆ ಹಾಜರಾಗಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ, ಇದನ್ನು ನಿರಾಕರಿಸಿದ ಕೋರ್ಟ್ ಖುದ್ದು ಹಾಜರಾತಿಗೆ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಪರಪ್ಪನ ಆಗ್ರಹಾರ ಜೈಲಿಂದ ಪ್ರಜ್ವಲ್‌ನನ್ನು ಪೊಲೀಸರು ಕೋರ್ಟ್‌ಗೆ ಕರೆತಂದಿದ್ದಾರೆ.
ಪ್ರಜ್ವಲ್ ರೇವಣ್ಣ ತನ್ನ ಮೇಲಿನ ಅತ್ಯಾಚಾರ ಪ್ರಕರಣದ 2,000 ವೀಡಿಯೋ, 15000 ಪೋಟೋ ಇರುವ ಮೊಬೈಲ್ ನೀಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಸಂತೋಷ್ ಗಜಾನನ ಭಟ್ ಅವರು, ನಿಮಗೆ ವಿಡಿಯೋ ಹಾಗೂ ಪೋಟೋ ನೀಡಲು ಸಾಧ್ಯವಿಲ್ಲ. ಈ ಕೇಸಿನ ಬಗ್ಗೆ ಹೈಕೋರ್ಟ್‌ನಲ್ಲಿಯೂ ಕೂಡ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆದರೆ, ಪ್ರಜ್ವಲ್ ಕೋರಿಕೆ ಮೇರೆಗೆ ಆರೋಪಿಗೆ ವಿಡಿಯೋ ಹಾಗೂ ಪೋಟೋ ತೋರಿಸಲು ಸೂಚನೆ ನೀಡಿದರು. ಇಂದೇ ಕೋರ್ಟ್‌ನಲ್ಲಿಯೇ ನಿಮಗೆ ಏನ್ ಬೇಕೋ ನೋಡಿಕೊಳ್ಳಿ. ಪ್ರಜ್ವಲ್ ಹಾಗೂ ವಕೀಲರಿಗೆ ಬೇಕಾದ ಸಾಕ್ಷಿ ವೀಕ್ಷಣೆಗೆ ಅವಕಾಶ ನೀಡಲಾಯಿತು. ಆದರೆ, ಇಂದು ಬೇಡ ವಿಚಾರಣೆ ಸೋಮವಾರಕ್ಕೆ ಮುಂದೂಡಿ ಎಂದು ಪ್ರಜ್ವಲ್ ಪರ ವಕೀಲರ ಮನವಿ ಮಾಡಿದರು. ಆಗ ಕೋರ್ಟ್‌ನಿಂದ ಪ್ರಜ್ವಲ್ ರೇವಣ್ಣ ಪರ ವಕೀಲರ ಮನವಿ ತಿರಸ್ಕಾರ ಮಾಡಲಾಯಿತು.
ಕೋರ್ಟ್‌ನಲ್ಲಿ ತನ್ನದೇ ಕೇಸಿನ ವಿಡಿಯೋ, ಫೋಟೋ ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳ ವೀಕ್ಷಣೆಗೆ ಅವಕಾಶ ಕೊಟ್ಟ ಕೋರ್ಟ್ ಮುಂದೆ, ಪ್ರಜ್ವಲ್ ಪರ ವಕೀಲರು ಇಂದು ಬೇಡ ನಾಳೆಯಾದರೂ ವೀಕ್ಷಣೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಹೀಗಾಗಿ, ನಾಳೆ ಕೋರ್ಟ್‌ನಲ್ಲಿಯೇ ತನ್ನ ಪೋಟೋ ಹಾಗೂ ವೀಡಿಯೋ ನೋಡಲು ಪ್ರಜ್ವಲ್‌ಗೆ ಕೋರ್ಟ್‌ನಿಂದ ಅವಕಾಶ ನೀಡಲಾಯಿತು. ಟೆಕ್ನಿಕಲ್ ಎಕ್ಸಪರ್ಟ್ ಸಹಾಯದಿಂದ ಪೋಟೋ, ವಿಡಿಯೋ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಇನ್ನು ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧದ ಅತ್ಯಾಚಾರ ಪ್ರಕರಣದ ಆರೋಪವನ್ನು ಖುಲಾಸೆ ಮಾಡುವಂತೆ ಸಲ್ಲಿಕೆ ಮಾಡಿದ್ದ ಅರ್ಜಿ ವಿಚಾರಣೆ ಮಾಡಿದ ಕೋರ್ಟ್ ಮುಂದೆ, ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದು ಪ್ರಜ್ವಲ್ ಪರ ವಕೀಲರು ವಾದ ಮಂಡಿಸಿದರು. ಇನ್ನು ಅತ್ಯಾಚಾರ ಸಂತ್ರಸ್ತೆ ಕೆಲಸ ಬಿಟ್ಟು ತುಂಬಾ ವರ್ಷಗಳೇ ಆಗಿತ್ತು. ಪೊಲೀಸರ ಮುಂದೆ ನೀಡಿದ ಹೇಳಿಕೆಗೂ, ನ್ಯಾಯಾಧೀಶರ ಮುಂದೆ ಹೇಳಿಕೆಗೂ ವ್ಯತ್ಯಾಸ ಇದೆ ಎಂದು ಪ್ರಜ್ವಲ್ ಪರ ವಕೀಲರು ವಾದ ಮಂಡಿಸಿದರು. ನಂತರ, ಈ ಅರ್ಜಿಯನ್ನೂ ನಾಳೆಗೆ ಮುಂದೂಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು.