ಸುಂದರ ದೇಹ ನುಚ್ಚು ನೂರಾಗಿತ್ತು ಸಾವಿರ ಕನಸುಗಳೊಂದಿಗೆ….!!
ಅಶ್ವಸೂರ್ಯ/ಶಿವಮೊಗ್ಗ
ಸಾರ್ ನನ್ನ ಹೆಸರು ಜಾನಕಿ, ನಂಗೆ ಚಿಕ್ಕಂದಿನಿಂದಲೂ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿತ್ತು. ಮನೆಯವರು ಒಪ್ಪಲಿಲ್ಲ. ಅದಕ್ಕೆ ಹೇಳದೆ ಕೇಳದೆ ಮನೆ ಬಿಟ್ಟು ಬಂದಿದ್ದೇನೆ. ನನ್ನ ಸ್ನೇಹಿತೆಯ ಮನೆಯಲ್ಲಿ ಉಳಿದು ಕೊಂಡಿದ್ದೇನೆ. ದಯಮಾಡಿ ನನಗೊಂದು ಅವಕಾಶ ಕೊಡಿ’ ಎಂದು ಗಾಂಧಿ ನಗರದ ಸಿನಿಮಾ ಆಫೀಸ್‌ನಲ್ಲಿ ಕುಳಿತಿದ್ದ ಒಬ್ಬನ ಜೊತೆ ಹೇಳುತ್ತಿದ್ದ ಜಾನಕಿಯ ಕಣ್ಣಂಚಿನಲ್ಲಿ ನೀರು ಇಣುಕುತ್ತಿತ್ತು. ನೋಡಲು ಚೆಲುವೆಯಾಗಿದ್ದ ಜಾನಕಿಯನ್ನು ಕಡೆಗಣಿಸುವಂತಿರಲಿಲ್ಲ. ಅವಳನ್ನು ಮೇಲಿನಿಂದ ಕೆಳಗಿನವರೆಗೂ ನೋಡಿದ ಆತ, “ನೋಡಮ್ಮಾ ನನ್ನ ಮುಂದಿನ ಚಿತ್ರದಲ್ಲಿ ನಿಂಗೇ ಅವಕಾಶ ಕೊಡ್ತೀನಿ. ಆದರೆ ಎಕ್ಸ್‌ಪೋಸ್ ಮಾಡಬೇಕಾಗುತ್ತದೆ ಮಾಡ್ತೀಯಾ’ ಅಂದ. ಚಿತ್ರರಂಗದ ಗಂಧಗಾಳಿಯು ತಿಳಿಯದ ಜಾನಕಿ ‘ಸಾರ್ ನೀವು ಹೇಗೆ ಹೇಳಿದರೂ ಹಾಗೆ ಕೇಳುತ್ತೇನೆ. ನನಗೆ ಚಿತ್ರರಂಗದಲ್ಲಿ ಅವಕಾಶ ಬೇಕು,ನಾನು ಹೆಸರು ಮಾಡಿ ನಮ್ಮ ಮನೆಯವರಿಗೆ ಸಾಧಿಸಿ ತೋರಿಸಬೇಕು’ಅಂದು ಕೊಂಡು ಬೆಂಗಳೂರಿಗೆ ಬಂದಿದ್ದೇನೆ.ಅಷ್ಡೋತ್ತಿಗಾಗಲೇ ಆತ ನಾಲಿಗೆ ಚಪ್ಪರಿಸಿ ‘ನಾಳೆ ಆಫೀಸ್‌ಗೆ ಬಾ’ ಎಂದು ಅವಳನ್ನು ಕಳುಹಿಸಿದ.
ಅಲ್ಲಿಂದ ಹೊರಟ ಜಾನಕಿ ಮೆಜೆಸ್ಟಿಕ್ ಬಸ್‌ಸ್ಟ್ಯಾಂಡಿಗೆ ಬಂದು ನಿಂತಿದ್ದಳು. ಅವಳ ಚೆಲುವು ಅಲ್ಲಿದ್ದವರಿಗೆ ಚುಂಬಕ ಶಕ್ತಿಯಾಗಿತ್ತು.ಕೇಲವರ ಆಸೆ ಕಂಗಳು ಅರಳಿ ನಿಂತಿದ್ದವು.!ಇನ್ನೂ ಕೆಲವರು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದರು. 256 ನಂಬರಿನ ಬಿಟಿಎಸ್ ಬಸ್ ಹತ್ತಿ ದಾಸರಹಳ್ಳಿಗೆ ಟಿಕೆಟ್ ತೆಗೆದುಕೊಂಡಳು.
ಸೀಟಿನಲ್ಲಿ ಒರಗಿ ಕಣ್ಣುಮುಚ್ಚಿದಳು.ಮೊದಲೇ ಆಯಾಸಗೊಂಡಿದ್ದ ದೇಹ ಅವಳಿಗೆ ಅರಿವಿಲ್ಲದೆಯೇ ನಿದ್ರೆಗೆ ಜಾರಿತ್ತು.ನಿದ್ರೆಗೆ ಜಾರುತ್ತಿದ್ದಂತೆ ಮನಸ್ಸಿನ ಅಂಗಳದಲ್ಲಿ ಕನಸುಗಳು ಗರಿಬಿಚ್ಚಿದ್ದವು. ಕಳೆದುಹೋದ ಅ ದಿನಗಳು ನೆನಪಿಗೆ ಬಂದಿದ್ದವು.!
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಜಾನಕಿಯ ಹುಟ್ಟೂರು. ಅಪ್ಪ ಬೋರೇಗೌಡರು ಸಾಕಷ್ಟು ಆಸ್ತಿಪಾಸ್ತಿ ಮಾಡಿಕೊಂಡಿದ್ದಂತವರು ಊರಿನ ಮುಖಂಡರಾಗಿದ್ದರು. ಊರಿನ ಗಂಡ, ಹೆಂಡಿರ ಜಗಳ, ಅಣ್ಣ ತಮ್ಮಂದಿರ ಕಿತ್ತಾಟ, ಅಪ್ಪ- ಮಕ್ಕಳ ವ್ಯಾಜ್ಯ ಇವೆಲ್ಲಾ ಬೋರೇಗೌಡರ ಎದುರಲ್ಲೆ ನ್ಯಾಯ ಪಂಚಾಯಿತಿಗೆ ಬರುತ್ತಿದ್ದವು. ಅಂತಹ ಬೋರೇಗೌಡರಿಗೆ ಒಬ್ಬಳೇ ಮಗಳು ಜಾನಕಿ. ತೀರ್ಥಹಳ್ಳಿಯ ಸ್ಥಳೀಯ ಕಾಲೇಜ್‌ನಲ್ಲಿ ಕೊನೆಯ ವರ್ಷದ ಬಿಕಾಂ ಓದುತ್ತಿದ್ದಳು.
ಇಡೀ ಕಾಲೇಜಿಗೆ ಅತಿ ಸುಂದರಿಯಾಗಿದ್ದ ಜಾನಕಿಗೆ ವಿಪರೀತ ಎನಿಸುವಷ್ಟು ಸಿನಿಮಾ ಹುಚ್ಚು.ತೀರ್ಥಹಳ್ಳಿಯ ವಿನಾಯಕ ಮತ್ತು ವೆಂಕಟೇಶ್ವರ ಚಿತ್ರಮಂದಿರದ ಖಾಯಂ ಗಿರಾಕಿ.
ತಾನೂ ನಟಿಯಾಗಿ ನಟಿಸಿ ಹೆಸರು ಮಾಡಬೇಕೆಂಬ ಅಧಮ್ಯ ಬಯಕೆ ಅವಳಿಗೆ ಚಿಕ್ಕವಯಸ್ಸಿನಿಂದಲೂ ಮನಸ್ಸಿನಲ್ಲಿ ಬೇರೂರಿತ್ತು. ಆದರೆ ಅವಳ ಮನೆಯವರು ಮಗಳ ಹುಚ್ಚಾಟಕ್ಕೆ ಕಡಿವಾಣ ಹಾಕುತ್ತಿದ್ದರು. ನಾವು ಮರ್ಯಾದಸ್ತರು, ನಮ್ಮಂಥವರಿಗೆ ಸಿನಿಮಾ ಗಿನಿಮಾ ಎಲ್ಲಾ ಒಗ್ಗಿ ಬರುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿ ತಾಕೀತು ಮಾಡಿದ್ದರು. ಆದರೆ ಜಾನಕಿ ಮಾತ್ರ ಬಿಲ್‌ಕುಲ್ ಒಪ್ಪಲು ಸಿದ್ಧವಿರಲಿಲ್ಲ. ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕೆಂದು ನಿರ್ಧರಿಸಿ ಬಿಟ್ಟಿದ್ದಳು. ಬಿಕಾಂ ಪರೀಕ್ಷೆ ಮುಗಿದು ಮನೆಯಲ್ಲಿದ್ದಾಗ ದೃಢ ನಿರ್ಧಾರ ಮಾಡಿದ ಜಾನಕಿ. ಮನೆಯವರ ಒಪ್ಪಿಗೆ ಪಡೆಯಲು ಮನೆಯಲ್ಲೇ ಕೂತರೆ ಈ ಜನ್ಮದಲ್ಲಿ ನನ್ನಾ ನಟಿಯಾಗುವ ಆಸೆ ಈಡೇರಲು ಸಾಧ್ಯವಿಲ್ಲ. ಮನೆ ಬಿಟ್ಟು ಹೋಗಿ ಚಿತ್ರರಂಗದಲ್ಲಿ ಅವಕಾಶ ಪಡೆಯುವುದೇ ಸರಿ ಎಂದು ನಿರ್ಧಾರ ಮಾಡಿದವಳೇ ಅಪ್ಪನ ಜೇಬಿನಿಂದ 5 ಸಾವಿರ ಹಣ ತೆಗೆದುಕೊಂಡು ಜೊತೆಗೆ ಮೂರ್ನಾಲ್ಕು ಜೊತೆ ಬಟ್ಟೆ ಪ್ಯಾಕ್ ಮಾಡಿಕೊಂಡವಳು. ಬೆಂಗಳೂರಿನ ದಾಸರಹಳ್ಳಿಯಲ್ಲಿದ್ದ ಸ್ನೇಹಿತೆ ಉಮಾಳಿಗೆ ಕಾಲ್ ಮಾಡಿ ಒಂದು ವಾರದ ಮಟ್ಟಿಗೆ ಬರ್ತಾ ಇದ್ದೀನಿ. ಯಾರೂ ಹೇಳ್‌ಬೇಡ’ ಅಂತ ರಾತ್ರೋ ರಾತ್ರಿ ಬಸ್ಸು ಹತ್ತಿ ಬೆಂಗಳೂರಿಗೆ ಹೊರಟು ಹೋಗಿ ಸ್ನೇಹಿತೆ ಉಮಾಳ ಮನೆ ಸೇರಿದ್ದಳು.
ಸ್ನೇಹಿತೆ ಉಮಾಳ ಹತ್ತಿರ ತನ್ನಾಸೆಯನ್ನೆಲ್ಲಾ ಹೇಳಿಕೊಂಡು ಒಂದು ವಾರ ಯಾರಿಗೂ ಹೇಳ್ಬೇಡ ಹೇಗೋ ಮ್ಯಾನೇಜ್ ಮಾಡು ಅಂತ ಪ್ರಾಮಿಸ್ ತೆಗೆದುಕೊಂಡು ತನ್ನ ಬಾಲ್ಯದಿಂದ ಕಂಡ ಕನಸನ್ನು ಈಡೇರಿಸಿಕೊಳ್ಳಲು ಗಾಂಧಿನಗರಕ್ಕೆ ಹೋಗಿದ್ದಳು ಜಾನಕಿ.!
ಅಷ್ಟರಲ್ಲಿ ‘ದಾಸರಹಳ್ಳಿ ದಾಸರಹಳ್ಳಿ’ ಎಂದು ಕಂಡಕ್ಟರ್ ಕಿರುಚಾಟ, ಬಿಟಿಎಸ್ ಬಸ್ಸಿನ ಕುಲುಕಾಟ ಅವಳನ್ನು ನಿದ್ರೆಯಿಂದ ಎಚ್ಚರಿಸಿತ್ತು. ಬಸ್ಸು ಇಳಿದು ಸ್ನೇಹಿತೆ ಉಮಾಳ ರೂಮಿಗೆ ಬಂದಿದ್ದಳು. ಉಮಾ ಕೆಲಸಕ್ಕೆ ಹೋಗಿದ್ದಳು. ಸ್ನಾನ ಮುಗಿಸಿ ಸಿಂಗರಿಸಿಕೊಂಡ ಜಾನಕಿ, ಕನ್ನಡಿಯ ಮುಂದೆ ನಿಂತು ತನ್ನ ಇಡೀ ದೇಹವನ್ನೊಮ್ಮೆ ನೋಡಿಕೊಂಡಳು. ‘ಯೆಸ್, ನಾನು ಖಂಡಿತ ದೊಡ್ಡಮಟ್ಟದಲ್ಲಿ ಬೆಳೆಯುತ್ತೇನೆ ಎಂದುಕೊಂಡು ಉಮಾ ಬೆಳಗ್ಗೆ ಮಾಡಿಟ್ಟಿದ್ದ ಚಿತ್ರಾನ್ನ ತಿಂದು ಚಾಪೆ ಬಿಡಿಸಿಕೊಂಡು ಮಲಗಿದಳು. ಮನದಲ್ಲಿದ್ದ ನೂರು ಕನಸುಗಳು ಮಂಪರು ಕವಿದ ನಂತರ ಸಾಲು ಸಾಲಾಗಿ ಬರತೊಡಗಿತು..
ಮಾರನೆಯ ದಿನ ಬೆಳಿಗ್ಗೆ ಗಾಂಧಿನಗರದ ಆಫೀಸ್‌ಗೆ ನೀಟಾಗಿ ಡ್ರೆಸ್ ಮಾಡಿಕೊಂಡು ಹೋದಳು ಜಾನಕಿ, ಆತ ಅವಳನ್ನು ಕೈ ಹಿಡಿದುಕೊಂಡು ಬರಮಾಡಿಕೊಂಡ. ಆತ ಒಬ್ಬನೇ ಇದ್ದ. ಜೊತೆಗೆ ಆಫೀಸ್ ತುಂಬಾ ಹಲವಾರು ನಟಿಯರ ಅರೆನಗ್ನ ಚಿತ್ರವಿದ್ದ ಪೋಸ್ಟರ್‌ಗಳಿತ್ತು. ಆತ ಜಾನಕಿನ್ನು ಅಲ್ಲೇ ಸೋಫಾದಲ್ಲಿ ಕೂರಿಸಿ ಆಫೀಸ್‌ನ ಬಾಗಿಲು ಹಾಕಿಕೊಂಡ. ಅವಳಿಗೆ ಯಾಕೋ ಗಾಬರಿಯಾಯಿತು. ಭಯಪಡಬೇಡ ಚಿತ್ರರಂಗದಲ್ಲಿ ಇದೆಲ್ಲಾ ಮಾಮೂಲು. ನಾನು ನಿನ್ನ ಹತ್ರ ಡಿಸ್ಕರ್ಷನ್ ಮಾಡ್‌ಬೇಕು. ನನ್ನ ಚಿತ್ರದಲ್ಲಿ ಬರುವ ಸನ್ನಿವೇಶ ಹೇಳ್ತಿನಿ. ಆ ಥರ ಆ್ಯಕ್ಟ್ ಮಾಡಿ ತೋರಿಸು ಸಾಕು. ಯಾರು ನೋಡ್ಬಾರದು ಅಂತ ಅದಕ್ಕೆ ಬಾಗಿಲು ಹಾಕ್ಕೊಂಡೆ. ನನ್ನ ಚಿತ್ರದಲ್ಲಿ ನಾನೇ ಹೀರೋ ಮತ್ತು ನಿರ್ಮಾಪಕ. ಹತ್ತು ಕೋಟಿ ದುಡ್ಡು ಹಾಕಿ ತೆಗೀತಿದೀನಿ. ನಿನ್ನನ್ನೇ ಹೀರೋಯಿನ್ ಮಾಡಬೇಕು ಅಂತ ನಿರ್ಧಾರ ಮಾಡಿದ್ದೀನಿ ಎಂದು ಅವಳ ಪಕ್ಕದಲ್ಲಿ ಬಂದು ಕುಳಿತುಕೊಂಡ. ಆತನಿಗೆ ಸರಿಸುಮಾರು 40 ವರ್ಷ.ಜಾನಕಿಗೆ ಕೇವಲ 20ರ ಆಸುಪಾಸು. ಆತ ತನ್ನನ್ನು ಹೀರೋಯಿನ್ ಮಾಡುತ್ತೇನೆ. ನನ್ನ ಚಿತ್ರದಲ್ಲಿ ನೀನೇ ಹೀರೋಯಿನ್ ಅಂದಾಗಿನಿಂದ ಆಕೆಗೆ ಆಕಾಶದಲ್ಲಿ ತೇಲುತ್ತಿರುವ ಅನುಭವ. ತಾನು ಎಂಥ ಲಕ್ಕಿ ನನ್ನ ಕನಸು ಈಡೇರುತ್ತಿದೆ ಎಂದು ಸಂಭ್ರಮದಲ್ಲಿ ಮೈ ಮರೆತಿದ್ದಳು.ಆತ ಅವಳ ಪಕ್ಕ ಕೂತು ‘ನನ್ನ ಚಿತ್ರದಲ್ಲಿ ಕೆಲವೊಂದು ಕಿಸ್ ಸೀನ್, ಬೆಡ್ ರೂಂ ದೃಶ್ಯ ಇರೊತ್ತೇ, ಮಾಡೋಕ್ಕಾದ್ರೆ ಮಾಡು ಇಲ್ಲಾಂದ್ರೆ ನೂರಾರು ಹೀರೋಯಿನ್ ಗಳು ಸಿಕ್ತಾರೆ. ಇದಕ್ಕೆಲ್ಲಾ ಒಪ್ತಾರೆ..!’ ಅಂದ. ಜಾನಕಿಗೆ ಸ್ವಲ್ಪ ಕಸಿವಿಸಿ ಆದರೂ ಓಕೆ ಅಂದಳು. ನೀನಿನ್ನೂ ಹೊಸಬಳು, ಇವತ್ತು ಅದರ ರಿಹರ್ಸಲ್ ಮಾಡೋಣ ಶೂಟಿಂಗ್‌ನಲ್ಲಿ ಹೆಲ್ಪಾಗೊತ್ತೆ ಅಂದ.ಮುಜುಗರದಿಂದ ಆಯ್ತು ಅಂದ ಜಾನಕಿಯ ಎದೆಬಡಿತ ತೀವ್ರವಾಗಿತ್ತು. ಆತ ಅವಳನ್ನು ತನಗಿಷ್ಟದಂತೆ ಉಪಯೋಗಿಸಿಕೊಂಡ ಚಿತ್ರರಂಗದ ಕನಸು ಕಂಡಿದ್ದ ಜಾನಕಿ ಮರುಮಾತಾಡಲಿಲ್ಲ. ದೀರ್ಘವಾಗಿ ಅವಳನ್ನು ಚುಂಬಿಸಿದ ಅವಳಿಗರಿವಿಲ್ಲದೇ ಸಹಕರಿಸತೊಡಗಿದಳು. ಸಾಕಷ್ಟು ಬಾರಿ ಅಕೆಯನ್ನು ಚುಂಬಿಸಿ ಮನಸ್ಸೊ ಇಚ್ಚೆ ಮುಕ್ಕಿಬಿಟ್ಟಿದ್ದ. ನಾಯಕಿಯಾಗುವ ಕನಸು ಹೊತ್ತ ಜಾನಕಿ ಪ್ರತಿರೋಧಿಸದೆ ಸಹಕರಿಸತೊಡಗಿದಳು. ಅನಾಮತ್ತು ಆಕೆಯನ್ನು ಭೋಗಿಸಿ ನಿಶ್ಲೇಷನಾಗಿಬಿಟ್ಟ.! ಆಮೇಲೆ ಆಕೆ ಆದ ಅವಘಡದಿಂದ ಬೆಚ್ಚಿಬಿದ್ದು ಅಳತೊಡಗಿದಳು. ಇದೆಲ್ಲಾ ಮಾಮೂಲು
ಎಂದು ಸಮಾಧಾನಪಡಿಸಿ, ನೀನೇ ನನ್ನ ಚಿತ್ರದ ಹೀರೋಯಿನ್ ಎಂದು ಮತ್ತೆ ಭರವಸೆ ನೀಡಿ ಆ ದಿನವೆಲ್ಲಾ ನಾಲ್ಕಾರು ಬಾರಿ ಅವಳನ್ನು ಬಳಸಿಕೊಂಡ.
ಶೀಲ ಕಳೆದುಕೊಂಡು ಅಂದು ಸ್ನೇಹಿತೆಯ ಮನೆಗೆ ವಾಪಾಸ್ಸಾಗಿದ್ದ ಜಾನಕಿಗೆ ಹೇಗೂ ಅವಕಾಶ ಸಿಗೊತ್ತಲ್ಲ ಎನ್ನುವ ಭರವಸೆಯೊಂದೇ ಮನಸ್ಸಿನಲ್ಲಿ ಉಳಿದಿತ್ತು. ಯಥಾಪ್ರಕಾರ ಮಾರನೇ ದಿನ ಅವನ ಆಫೀಸ್‌ಗೆ ಹೋದರೆ ಅಲ್ಲಿ ಬೇರೆ ಯಾರೋ ಕುಳಿತಿದ್ದರು. ಜಾನಕಿ ಆತನ ಬಗ್ಗೆ ಕೇಳಿದಾಗ, ಅಲ್ಲಿದ್ದವರು ಅವನು ಕೆಲಸ ಕೇಳಿಕೊಂಡು ಬಂದಿದ್ದ, ಕೆಲಸ ಕೊಟ್ಟಿದ್ವಿ ಮೂರ್ನಾಲ್ಕು ದಿನ ನಾವು ದೆಹಲಿಗೆ ಹೋಗಿದ್ದೇವು ಅವನೇ ಆಫೀಸ್ ನೋಡಿಕೊಳ್ಳುತಿದ್ದ.ಇಂದು ಬೆಳಿಗ್ಗೆ ಬಂದವನು ಇವತ್ತಿಂದ ಕೆಲಸಕ್ಕೆ ಬರುವುದಿಲ್ಲ ಅಂತ ಹೇಳಿ ಹೊರಟಿ ಹೋದ.!ಅಲ್ಲಿದ್ದವರು ಏನಮ್ಮಾ ವಿಷಯ ಅಂತ ಜಾನಕಿಯನ್ನು ಕೇಳಿದರು. ಜಾನಕಿಗೆ ನಿಂತ ನೆಲ ಬಿರಿದ ಅನುಭವ! ತಾನು ಮೋಸ ಹೋದದ್ದು ಅವಳಿಗೆ ಅರ್ಥವಾಯಿತು. ಅಲ್ಲಿಂದ ನೇರವಾಗಿ ತನ್ನ ಗೆಳತಿ ಉಮಾಳ ಮನೆಗೆ ಬಂದವಳೇ ಸುದೀರ್ಘ ಪತ್ರವನ್ನು ಬರೆದಿಟ್ಟಳು. ತಾನೂ ಮೋಸ ಹೋಗಿದ್ದು ನನ್ನನ್ನು ಕ್ಷಮಿಸಿ ಎಂದು ಅಪ್ಪ ಅಮ್ಮನಲ್ಲಿ ವಿನಮ್ರಳಾಗಿ ಕೇಳಿಕೊಳ್ಳುತ್ತ ಪತ್ರವನ್ನು ಮುಗಿಸಿ ಕೊನೆಯ ಸಹಿ ಹಾಕಿ ಉಮಾಳ ಹಾಸಿಗೆಯ ಮೇಲೆ ಇಟ್ಟು. ಅಲ್ಲಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದವಳೇ ಶಿವಮೊಗ್ಗದ ರೈಲು ಹತ್ತಿದ್ದಳು. ಅವಳಿಗೆ ಜೀವನದ ಪ್ರತಿಯೊಂದು ದಿನಗಳು ನೆನಪಿಗೆ ಬರತೊಡಗಿತು. ರೈಲು ವೇಗವಾಗಿ ಕಡೂರು ಎಂಬ ಊರನ್ನು ದಾಟಿ ಕಾಡಿನ ಮಧ್ಯೆ ಚಲಿಸುತ್ತಿತ್ತು.ಚಲಿಸುತ್ತಿದ ರೈಲಿನ ಬಾಗಿಲ ಬಳಿ ಬಂದಿದ್ದಳು ಜಾನಕಿ ಮೌನದಲಿ.ಅಲ್ಲಿದ್ದವರು ಆಕೆಯ ಮೇಲೆ ಅನುಮಾನಗೊಂಡು ಏನು ಎತ್ತ ಎಂದು ಕೇಳುವ ಮುನ್ನ ಜಾನಕಿ ರೈಲಿನಿಂದ ಹೊರಗೆ ಹಾರಿದ್ದಳು.!!
ಚಲಿಸುತ್ತಿದ್ದ ರೈಲಿನಿಂದ ಹಾರಿದ ಜಾನಕಿಯ ಸುಂದರವಾದ ದೇಹ ನುಚ್ಚುನೂರಾದರೆ ಆಕೆಯ ಮನಸ್ಸಿನಲ್ಲಿ ಗೂಡು ಕಟ್ಟಿದ್ದ ಸಾವಿರ ಕನಸುಳು ಅವಳೊಂದಿಗೆ ಸಮಾಧಿಯಾಗಿದ್ದು ಮಾತ್ರ ದುರಂತವೆ ಹೌದು…!