ಎಸ್.ಎಂ ಕೃಷ್ಣರಿಗೂ ನಟಿ ರಮ್ಯಾ ಅವರಿಗೂ ಇರುವ ಆತ್ಮೀಯತೆ ಏನು.?
ಅಶ್ವಸೂರ್ಯ/ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಇಂದು ವಿಧಿವಶರಾಗಿದ್ದಾರೆ. ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ಎಸ್.ಎಂ.ಕೃಷ್ಣ ಅವರ ಅಂತಿಮ ದರ್ಶನ ಪಡೆದಿದ್ದಾರೆ. ನಟಿ ರಮ್ಯಾ ಸದಾಶಿವನಗರದಲ್ಲಿರುವ ಕೃಷ್ಣ ಅವರ ಮನೆಗೆ ತೆರಳಿ ಎಸ್‌ಎಂ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಭಾವುಕರಾದರು.
ನಟಿ ರಮ್ಯಾ ಮತ್ತು ಎಸ್.ಎಂ.ಕೃಷ್ಣ ಅವರ ನಡುವೆ ಒಂದು ಅವಿನಾಭಾವ ನಂಟಿದೆ. ಇದು ರಮ್ಯಾ ಅವರ ತಂದೆಯ ಕಾಲದಿಂದಲೂ ಬಂದಿದೆ. ನಟಿ ರಮ್ಯಾ ಅವರನ್ನು ರಾಜ್ಯ ಕಾರಣಕ್ಕೆ ಕರೆತಂದವರು ಎಸ್.ಎಂ.ಕೃಷ್ಣ ಅವರು ಈ ಕಾರಣದಿಂದಲೇ ರಮ್ಯಾ ಅವರಿಗೆ ಕೃಷ್ಣ ಅವರ ಮೇಲೆ ವಿಶೇಷ ಗೌರವವನ್ನು ಹೊಂದಿದ್ದಾರೆ.
ನಟಿ ರಮ್ಯಾ ಅವರ ನಿಜವಾದ ಹೆಸರು ದಿವ್ಯ ಸ್ಪಂದನ. 29 ನವೆಂಬರ್ 1982 ರಂದು ಜನಿಸಿದ ರಮ್ಯಾ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಸಂಧರ್ಭದಲ್ಲಿ ಮೂಲ ಹೆಸರನ್ನು ತೆಗೆದು ಹಾಕಿ ರಮ್ಯಾ ಎಂದು ಹೆಸರನ್ನು ಬದಲಿಸಿ ಕೊಂಡಿದ್ದರಂತೆ.! ರಮ್ಯಾ ಅವರ ತಾಯಿ ರಂಜಿತಾ ಬೋರಯ್ಯ ಎಸ್ಎಂ ಕೃಷ್ಣ ಅವರಿಗೆ ಅತ್ಯಾಪ್ತರು. ಮಂಡ್ಯ ಜಿಲ್ಲಾ ಕಾಂಗ್ರೆಸ್ಸಿನ ಸಕ್ರಿಯ ಸದಸ್ಯೆ ರಂಜಿತಾ ಸಾಕಷ್ಟು ಪ್ರಭಾವಿ ಮಹಿಳೆಯಾಗಿ ಬೆಳೆದಿದ್ದಾರೆ.
ನಟಿ ರಮ್ಯಾ ತಂದೆ ಆರ್‌ಟಿ ನಾರಾಯಣ್ ಸಹ ರಾಜಕೀಯ ದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದರು. ಎಸ್ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ರಮ್ಯಾ ತಂದೆ ಆರ್‌ಟಿ ನಾರಾಯಣ್ ಕಿಚನ್ ಕ್ಯಾಬಿನೆಟ್ ಪ್ರಮುಖ ಸದಸ್ಯರಾಗಿದ್ದರು. ಆರ್ ಟಿ ನಾರಾಯಣ್ ಅಪ್ಪಣೆಯಿಲ್ಲದೇ ವಿಧಾನಸೌಧದಲ್ಲಿ ಹುಲ್ಲುಕಡ್ಡಿಯೂ ಅಲ್ಲಾಡುತ್ತಿರಲಿಲ್ಲ ಎಂಬ ಮಾತು ಆ ಸಮಯದಲ್ಲಿ ಕೇಳಿಬಂದಿತ್ತು.
ಹೀಗೆ ತಂದೆ, ತಾಯಿಗೆ ಆಪ್ತರಾಗಿದ್ದ ಎಸ್.ಎಂ.ಕೃಷ್ಣ ರಮ್ಯಾ ಅವರ ರಾಜಕೀಯ ಬೆಳವಣಿಗೆಯಲ್ಲೂ ಜೊತೆ ನಿಂತಂತ್ತವರು.ಇದೇ ಕಾರಣಕ್ಕೆ ಎಸ್.ಎಂ.ಕೃಷ್ಣ ಅವರ ನಿಧನ ಸುದ್ದಿ ರಮ್ಯಾ ಅವರನ್ನು ಸಹಿಸಲಾಗದಷ್ಟು ದುಃಖಕ್ಕೆ ಗುರಿ ಮಾಡಿದೆ.