U19 Asia Cup: ಮತ್ತೊಮ್ಮೆ ಅಬ್ಬರದ ಬ್ಯಾಟಿಂಗ್.24 ಎಸೆತದಲ್ಲಿ ಅರ್ಧಶತಕ ಸಿಡಿಸಿದ 13 ವರ್ಷದ ವೈಭವ್! ಏಷ್ಯಾಕಪ್ ಫೈನಲ್ ತಲುಪಿದ ಭಾರತ.
ಅಶ್ವಸೂರ್ಯ/ನವದೆಹಲಿ: 19 ವರ್ಷದೊಳಗಿನ ಏಷ್ಯಾಕಪ್ 2024ರ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಹಂತಕ್ಕೆ ತಲುಪಿದೆ. ಸೆಮಿಫೈನಲ್ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾದ ಅಂಡರ್ 19 ತಂಡವನ್ನು ಮನಬಂದಂತೆ ಚಚ್ಚಿಹಾಕಿ ಅಂತಿಮ ಸುತ್ತಿಗೆ ಪ್ರವೇಶಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾವನ್ನು ಭಾರತೀಯ ಬೌಲರ್ಗಳು ಕೇವಲ 173 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತ ತಂಡ ಗೆಲ್ಲಲು 174 ರನ್ನುಗಳ ಅವಶ್ಯಕತೆಯಿತ್ತು. ಭಾರತ ಈ ಮೊತ್ತವನ್ನ ಕೇವಲ 21.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ನಿರಾಯಾಸವಾಗಿ ಗೆಲುವಿನ ಗುರಿ ತಲುಪಿತು.ಏಷ್ಯಾಕಪ್‌ನಲ್ಲಿ ಇದು ಭಾರತ ತಂಡ 8ನೇ ಬಾರಿಗೆ ಫೈನಲ್ ತಲುಪಿದಂತಾಗಿದೆ. ಭಾರತ ತಂಡದ 19 ವರ್ಷದ ಯುವ ಆಟಗಾರರು ಇದುವರೆಗೆ ನಡೆದಿರುವ 9 ಜೂನಿಯರ್ ಏಷ್ಯಾಕಪ್ಫೈನಲ್ ಪಂದ್ಯದಲ್ಲಿ 7 ಬಾರಿ ಚಾಂಪಿಯನ್ ಆಗಿದೆ. ಉಳಿದ ಎರಡರಲ್ಲಿ ಒಂದೊಂದು ಬಾರಿ ಬಾಂಗ್ಲಾದೇಶ, ಹಾಗೂ ಅಫ್ಘಾನಿಸ್ತಾನ ತಂಡ ಚಾಂಪಿಯನ್ ಆಗಿವೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಇದುವರೆಗೂ ಒಮ್ಮೆಯೂ ಚಾಂಪಿಯನ್ ಆಗಿಲ್ಲ.
ಭಾರತದ ದಾಳಿಗೆ ತತ್ತರಿಸಿದ ಲಂಕಾಪಡೆ
ಸೆಮಿಫೈನಲ್ನಲ್ಲಿ ಭಾರತ ತಂಡದ ಬೌಲಿಂಗ್ ದಾಳಿಯನ್ನ ಎದುರಿಸಲು ಶ್ರೀಲಂಕಾ ಬ್ಯಾಟ್ಸ್‌ಮನ್ ಗಳು ಪರದಾಡಿದರು.ಆರಂಭದಲ್ಲಿ ಕೇವಲ 8 ರನ್ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ನೂರು ರನ್‌ಗಳ ಗಡಿ ದಾಟುವುದು ಅನುಮಾನ ಎನ್ನುವ ಸ್ಥಿತಿಯಲ್ಲಿದ್ದ ಲಂಕಾ ತಂಡಕ್ಕೆ ವಿಕೆಟ್ ಕೀಪರ್ ಶಾರುಜನ್ ಷಣ್ಮುಗನಾಥನ್ ಹಾಗೂ ಲಕ್ಷಿನ್ ಅಭಯ್ಸಿಂಘೆ 93 ರನ್‌ಗಳ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಅಭಯ್ 110 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 69 ರನ್ಗಳಿಸಿದರೆ, ಶಾರುಜನ್ 78 ಎಸೆತಗಳಲ್ಲಿ 42 ರನ್ಗಳಿಸಿದರು.
20ರ ಗಡಿ ದಾಟದ ಮಧ್ಯಮ ಕ್ರಮಾಂಕ
ಇವರಿಬ್ಬರ ಜೊತೆಯಾಟದ ನಂತರ ಲಂಕಾ ತಂಡದ ಯಾವೊಬ್ಬ ಬ್ಯಾಟ್ಸ್‌ಮನ್ 20ರ ಗಡಿದಾಟಲಿಲ್ಲ. ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಮರಳಿದರು. ಭಾರತದ ಚೇತನ್ ಶರ್ಮಾ 34ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಕಿರಣ್ ಚೋರಮಾಲೆ 32ಕ್ಕೆ 2, ಆಯುಷ್ ಮ್ಹಾತ್ರೆ 37ಕ್ಕೆ 2, ಕನ್ನಡಿಗ ಹಾರ್ದಿಕ್ ರಾಜ್ 1 ವಿಕೆಟ್ ಪಡೆದು ಲಂಕಾ ತಂಡವನ್ನು 46.2 ಓವರ್ಗಳಲ್ಲಿ ಆಲೌಟ್ ಮಾಡಿದರು.
ಮತ್ತೆ ಅಬ್ಬರಿಸಿದ ವೈಭವ್
174 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡದ ಆಟಗಾಋಉ ಕಳೆದ ಪಂದ್ಯದಂತೆ ಈ ಸೆಮಿಫೈನಲ್ ಪಂದ್ಯದಲ್ಲೂ ಅಬ್ಬರಿಸಿ ಉತ್ತಮ ಆರಂಭ ಪಡೆದುಕೊಂಡರು. ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಮೊದಲ ವಿಕೆಟ್ಗೆ 91 ರನ್‌ಗಳ ಉತ್ತಮ ಜೊತೆಯಾಟದ ಪ್ರದರ್ಶನ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದ 13 ವರ್ಷದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಬಿರುಸಿನ ಅರ್ಧಶತಕ ಸಿಡಿಸಿದರು. ಕೇವಲ 24 ಎಸೆತಗಳಲ್ಲೆ ಅರ್ಧಶತಕ ಸಿಡಿಸಿದರು. ಒಟ್ಟಾರೆ 36 ಎಸೆತಗಳಲ್ಲಿ 6 ಬೌಂಡರಿ, 5 ಭರ್ಜರಿ ಸಿಕ್ಸರ್ಗಳ ನೆರವಿನಿಂದ 67 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಮತ್ತೊಬ್ಬ ಆರಂಭಿಕ ಆಟಗಾರ ಆಯುಷ್ 28 ಎಸೆತಗಳಲ್ಲಿ 7 ಬೌಂಡರಿ ಸಹಿತ 34ರನ್ಗಳಿಸಿ ಔಟಾದರೆ, ಆ್ಯಂಡ್ರ್ಯೂ ಸಿದ್ಧಾರ್ಥ್ 22 ರನ್ಗಳಿಸಿದರು. ನಾಯಕ ಮೊಹಮ್ಮದ್ ಅಮಾನ್ ಅಜೇಯ 25, ಕನ್ನಡಿಗ ಕಾರ್ತಿಕೇಯ ಅಜೇಯ 11ರನ್ಗಳಿಸಿ ತಂಡವನ್ನು ನಿರಾಯಾಸವಾಗಿ ಗೆಲುವಿನ ದಡ ಸೇರಿಸಿದರು,
ಪಾಕ್ ತಂಡವನ್ನು ಬಗ್ಗುಬಡಿದ ಬಾಂಗ್ಲಾದೇಶ ಫೈನಲ್ ಗೆ
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾವನ್ನು 7 ವಿಕೆಟ್ಗಳಿಂದ ಭರ್ಜರಿಯಾಗಿ ಮಣಿಸಿ ಸತತ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 37 ಓವರ್ಗಳಲ್ಲಿ ಕೇವಲ 116 ರನ್ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ರಿಯಾಜುಲ್ಲಾ 28, ಫರ್ಹಾನ್ ಯೂಸುಫ್ 32 ರನ್ಗಳಿಸಿ ತಂಡವನ್ನು ನೂರರ ಗಡಿ ದಾಟಿಸಿದರು .
ಬಾಂಗ್ಲಾದೇಶದ ಪರ ಇಕ್ಬಾಲ್ ಹುಸೇನ್ ಎಮಾನ್ 24ಕ್ಕೆ 4, ಮರೂಫ್ ಮೃಧ 23ಕ್ಕೆ 2 ವಿಕೆಟ್, ಸರ್ಕಾರ ದೇಬಾ ಹಾಗೂ ಅಲ್ ಫಹಾದ್ ತಲಾ ಒಂದು ವಿಕೆಟ್ ಪಡೆದರು. 117ರನ್‌ಗಳ ಗುರಿಯನ್ನು 22.1 ಓವರ್ಗಳಲ್ಲಿ ಬಾಂಗ್ಲಾದೇಶ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಮೊಹಮ್ಮದ್ ಅಜೀಜುಲ್ ಹಕೀಮ್ ತಮೀಮ್ 42 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 61 ರನ್ಗಳಿಸಿದರು. ಮೊಹಮ್ಮದ್ ಶಿಹಾಬ್ ಜೇಮ್ಸ್ 36 ಎಸೆತಗಳಲ್ಲಿ 4 ಬೌಂಡರಿ ಸಹಿತ 72 ರನ್ಗಳಿಸಿ ಬಾಂಗ್ಲ ತಂಡವನ್ನು ಗೆಲುವಿನ ಬಾವುಟ ಹಾರಿಸಿತು.
ಪೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡ ಬಾಂಗ್ಲಾ ತಂಡವನ್ನು ಎದುರಿಸಲಿದೆ.