U19 Cricket Asia Cup: ಸಿಕ್ಸರ್‌ಗಳ ಮಳೆಗರೆದ 13 ವರ್ಷದ ಬಾಲಕ ವೈಭವ್ ಸೂರ್ಯವಂಶಿ: ಸೆಮಿಫೈನಲ್ ಗೆ ಭಾರತ ಎಂಟ್ರಿ
ವೈಭವ್ ಸೂರ್ಯವಂಶಿ (ಜನನ 27 ಮಾರ್ಚ್ 2011) ಒಬ್ಬ ಭಾರತೀಯ ಕ್ರಿಕೆಟಿಗ, ಇವರು ಬಿಹಾರ ಪರ ಆಡುತ್ತಾರೆ. ಎಡಗೈ ಬ್ಯಾಟ್ಸ್‌ಮನ್, ಇವರು ತಮ್ಮ 12 ನೇ ವಯಸ್ಸಿನಲ್ಲಿ 2024 ರಲ್ಲಿ ರಣಜಿ ಟ್ರೋಫಿಯಲ್ಲಿ ಬಿಹಾರಕ್ಕೆ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು.ಇತ್ತೀಚೆಗೆ ಐಪಿಎಲ್ ಬಿಡ್ ನಲ್ಲಿ ಒಂದು ಕೋಟಿ ಹತ್ತು ಲಕ್ಷ ರೂಪಾಯಿಗೆ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.
ಅಶ್ವಸೂರ್ಯ/ಶಿವಮೊಗ್ಗ: ಶಾರ್ಜಾದಲ್ಲಿ ನೆಡೆಯುತ್ತಿರುವ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಐಪಿಎಲ್‌ನಲ್ಲಿ ಕೋಟಿ ಮೌಲ್ಯ ಪಡೆದ 13 ವರ್ಷ ವಯಸ್ಸಿನ ಬಾಲಕ ವೈಭವ್ ಸೂರ್ಯವಂಶಿ ಅವರು ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ ಸಿಕ್ಸರ್‌ಗಳ ಮಳೆಗರೆದು ಭಾರತ ತಂಡವನ್ನು ಸೆಮಿಫೈನಲ್‌ಗೆ ತಲುಪಿಸಿದ್ದಾರೆ.
ಸೂರ್ಯವಂಶಿ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಯುಎಇ ವಿರುದ್ಧ 10 ವಿಕೆಟ್ ಭರ್ಜರಿ ಜಯ ದಾಖಲಿಸಿದೆ. ಸೆಮಿಫೈನಲ್‌ನಲ್ಲಿ ಭಾರತವು ಶ್ರೀಲಂಕಾವನ್ನು ಎದುರಿಸಲಿದೆ. ಎ ಗುಂಪಿನಲ್ಲಿರುವ ಭಾರತ ಎರಡನೇ ಸ್ಥಾನದೊಂದಿಗೆ ಸೆಮಿಗೆ ಮುನ್ನಡೆದಿದೆ. ಪಾಕಿಸ್ತಾನ ಅಗ್ರಸ್ಥಾನ ಪಡೆದಿದೆ.
ಮೊದಲು ಬ್ಯಾಟ್ ಮಾಡಿದ ಯುಎಇ 44 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್ ಆಯಿತು.ಬ್ಯಾಟಿಂಗ್ ಇಳಿದ ಭಾರತ ಬ್ಯಾಟ್ ಮಾಡಿ 16.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 143 ರನ್ ಗಳಿಸಿ ಭರ್ಜರಿ ಜಯ ದಾಖಲಿಸಿತು.
ಭಾರತದ ಪರ ಯುಧಾಜಿತ್ ಗುಹಾ 15 ರನ್ ನೀಡಿ 3 ವಿಕೆಟ್ ಕಬಳಿಸಿದರು. ಇನ್ನು ಚೇತನ್ ಶರ್ಮಾ ಹಾಗೂ ಕರ್ನಾಟಕದ ಯುವ ಆಟಗಾರ ಹಾರ್ದಿಕ್ ರಾಜ್ ತಲಾ ಎರಡು ವಿಕೆಟ್ ಪಡೆದರು.
137 ರನ್ ಗಳ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾದ ಆರಂಭ ಆಟಗಾರರ ಬ್ಯಾಟಿಂಗ್ ಭರ್ಜರಿಯಾಗಿತ್ತು. ಟೀಮ್ ಇಂಡಿಯಾದ ಆರಂಭಿಕರಾದ ಆಯುಷ್ ಮಾತ್ರೆ ಹಾಗೂ ಹದಿಮೂರು ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ಅಗತ್ಯ ಇದ್ದ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಿತು. ಗೆಲುವಿಗೆ ಅಗತ್ಯ ರನ್‌ಗಳನ್ನು ಕಲೆ ಹಾಕಿ ಭಾರತ ತಂಡವನ್ನು ಗೆಲುವಿನ ದಡ ಸೇರುವಂತೆ ಮಾಡಿದರು. ಈ ಜೋಡಿ 16.1 ಓವರ್‌ಗಳಲ್ಲಿ 143 ರನ್ ಸಿಡಿಸಿ ಭರ್ಜರಿ ಗೆಲುವು ದಾಖಲಿಸಿದರು.
ಆರಂಭಿಕರಾದ ಆಯುಷ್ ಹಾಗೂ ವೈಭವ್ ಭರ್ಜರಿ ಅರ್ಧಶತಕ ಬಾರಿಸಿ ಮಿಂಚಿದರು. ಆಯುಷ್ 4 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 67 ರನ್ ಸಿಡಿಸಿದೆ. ಇನ್ನೂ13 ವರ್ಷದ ಬಾಲಕ ವೈಭವ್ ಸೂರ್ಯವಂಶಿ 3 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 76 ರನ್ ಸಿಡಿಸಿ ತಾನೇನು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.
13 ವರ್ಷದ ಸೂರ್ಯವಂಶಿಯನ್ನು ಐಪಿಎಲ್ ಬಿಡ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 1.10 ಕೋಟಿ ನೀಡಿ ಖರೀದಿಸಿದೆ. ಈ ಮೂಲಕ ಐಪಿಎಲ್ ತಂಡಕ್ಕೆ ಆಯ್ಕೆಯಾದ ಅತಿ ಕಿರಿಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಭಾರತ ತಂಡಕ್ಕೆ ಒಬ್ಬ ಉಜ್ವಲ ಕ್ರಿಕೆಟಿಗನೊಬ್ಬ ಸಿಕ್ಕಂತಾಗಿದೆ.