ಶೃಂಗೇರಿ ಕ್ಷೇತ್ರದ ವಿಧಾನಸಭಾ ಚುನಾವಣೆ ಮರು ಮತ ಎಣಿಕೆಗೆ ಸುಪ್ರೀಂ ಕೋರ್ಟ್ ಆದೇಶ
ಅಶ್ವಸೂರ್ಯ/ಚಿಕ್ಕಮಗಳೂರು: ಈ ಹಿಂದೆ ನೆಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಸೂಕ್ತ ದಾಖಲೆಗಳೊಂದಿಗೆ ವಿಚಾರಣೆ ನಡೆಸುವಂತೆ ಕರ್ನಾಟಕ ಹೈಕೋರ್ಟಿಗೆ ಸುಪ್ರೀಂಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.
2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿಯಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರ ವಿರುದ್ಧ 201 ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ವೇಳೆ ಮತ ಎಣಿಕೆ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ್ದ ಪರಾಜಿತ ಅಭ್ಯರ್ಥಿ ಜೀವರಾಜ್ ಅವರು ಚುನಾವಣೆಯಲ್ಲಿ 279 ಕುಲಗೆಟ್ಟ ಮತಗಳಿದ್ದು, ಮರು ಎಣಿಕೆ ಮಾಡುವಂತೆ ಆಗ್ರಹಿಸಿದ್ದರು. ಅವರ ಮನವಿಯನ್ನು ಚುನಾವಣಾ ಅಧಿಕಾರಿಗಳು ಪುರಸ್ಕರಿಸಿರಲಿಲ್ಲ. ಅಧಿಕಾರಿಗಳ ನಡೆ ಆಕ್ಷೇಪಿಸಿ ಜೀವರಾಜ್ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು.
ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಅರ್ಜಿದಾರರು ಕೇಳುತ್ತಿರುವುದು ನ್ಯಾಯಯುತವಾಗಿದೆ. ಅರ್ಜಿದಾರರು 201 ಮತಗಳಿಂದ ಸೋಲು ಕಂಡಿದ್ದಾರೆ. ಗೆಲುವಿನ ಅಂತರಕ್ಕಿಂತ ಕುಲಗೆಟ್ಟ ಮತಗಳೆ ಹೆಚ್ಚಿವೆ. ಹೀಗಾಗಿ ಒಟ್ಟು ಚಲಾವಣೆಯಾದ ಮತಗಳನ್ನು ಮರು ಎಣಿಕೆ ನಡೆಸಬೇಕೆಂಬುದರಲ್ಲಿ ನಮಗೆ ಸಹಮತವಿದೆ ಎಂದು ಅಭಿಪ್ರಾಯಪಟ್ಟಿದೆ.
ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ದಾಖಲೆಗಳ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.