ಶಿ.ಜು.ಪಾಶರಿಗೆ ಜನ್ನ ಕಾವ್ಯ ಪ್ರಶಸ್ತಿ ಪ್ರಧಾನ

ಶಿ.ಜು.ಪಾಶರಿಗೆ ಜನ್ನ ಕಾವ್ಯ ಪ್ರಶಸ್ತಿ ಪ್ರಧಾನ

ಕನ್ನಡ ಭಾಷೆಗೆ ಮನಸ್ಸು ಬೆಸೆಯುವ ಶಕ್ತಿಯಿದೆ- ಸಾಹಿತಿ, ಚಿಂತಕ ಟಿ.ಸತೀಶ್ ಜವರೇಗೌಡ

ಅಶ್ವಸೂರ್ಯ/ಶಿವಮೊಗ್ಗ,ಸೆ.28: ಕನ್ನಡ ಭಾಷೆಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಟಿ.ಸತೀಶ್ ಜವರೇಗೌಡ ಹೇಳಿದರು.
ಅವರು ಇಂದು ಹಾಸನದ ಮಾಣಿಕ್ಯ ಪ್ರಕಾಶನದ ವತಿಯಿಂದ ಸಹ್ಯಾದ್ರಿ ಕಲಾ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 8ನೇ ಕವಿಕಾವ್ಯ ಸಂಭ್ರಮ ಹಾಗೂ ಜನ್ನಕಾವ್ಯ ಪರೀಕ್ಷೆ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾಷೆಗೆ ನಮ್ಮೆಲ್ಲರನ್ನು ಪೊರೆಯುವ ಶಕ್ತಿಯಿದೆ, ಅದೊಂದು ಜೀವತಂತು. ವರ್ತಮಾನದ ತಲ್ಲಣದ ಈ ಸಂದರ್ಭದಲ್ಲಿ ವಿಕೃತಗಳೇ ವಿಜೃಂಭಿಸಿರುವಾಗ ಸಾಹಿತ್ಯದ ಮೂಲಕ ಸಾಮರಸ್ಯವನ್ನು ಬೆಸೆಯಬೇಕಾಗಿದೆ. ಸಾಹಿತ್ಯಕ್ಕೆ ತನ್ನದೇ ಆದ ಶಕ್ತಿಯಿದೆ. ಹಲವು ಕ್ರಾಂತಿಗಳ ಹಿಂದೆ ಸಾಹಿತ್ಯದ ಪ್ರೇರಕ ಶಕ್ತಿ ಇರುತ್ತದೆ. ಭಾಷೆ ಭಾವೈಕ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.

ಸಾಹಿತ್ಯದ ವಿಕೇಂದ್ರಿಕರಣದ ಬದಲು ಜಾತಿಯತೆ, ಧರ್ಮಾಂಧತೆ ವಿಕೇಂದ್ರಿಕರಣವಾಗುತ್ತಿದೆ. ಇದನ್ನೆಲ್ಲ ದಮನ ಮಾಡಲು ಸಾಹಿತ್ಯವೇ ಮದ್ದಾಗುತ್ತದೆ ಕೂಡ, ಸಾಹಿತ್ಯದ ಜವಬ್ದಾರಿ ಕೂಡ ಹೆಚ್ಚಿದೆ. ಒಗ್ಗಟ್ಟನ್ನು ಬೆಸೆಯುವ ಸಾಮಾಜದ ಸಾಮರಸ್ಯವನ್ನು ಹೆಚ್ಚಿಸುವಂತೆ ಸಾಹಿತ್ಯವಿರಬೇಕು ಎಂದರು.
8ನೇ ಕವಿ ಕಾವ್ಯ ಸಂಭ್ರಮದ ಸರ್ವಾಧ್ಯಕ್ಷರಾದ ಅಬ್ದುಲ್ ಹೈ, ತೋರಣಗಲ್ಲು, ಮಾತನಾಡಿ, ಕಾವ್ಯ ಬದುಕಿನ ಪ್ರತಿಬಿಂಬವಾಗಬೇಕು. ಅದು ಸ್ಪಂದನೆಯ ಗುಣವನ್ನು ಹೊಂದಿರಬೇಕು. ಸಮಾಜದ ಎಲ್ಲಾ ಜನರ ಪ್ರತಿಧ್ವನಿಯಾಗಬೇಕು. ಈ ನೆಲದ ಭಾಷೆ ಕನ್ನಡಕ್ಕೆ ಆ ಶಕ್ತಿಯಿದೆ. ಸಾವಿರಾರು ವರ್ಷಗಳಿಂದ ಕನ್ನಡ ದಬ್ಬಾಳಿಕೆಯನ್ನು ಎದುರಿಸಿಯೂ ಜೀವಂತವಾಗಿದೆ. ಅದು ಸೊರಗಿರಬಹುದು ಆದರೆ ಎಂದು ಸಾಯುವುದಿಲ್ಲ ಎಂದರು.
ಜನ್ನ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್, ದತ್ತಿ ಪ್ರಶಸ್ತಿ ಹಾಗೂ ಇತರ ಪ್ರಶಸ್ತಿಗಳು ಲೇಖಕರ ಜವಬ್ದಾರಿಗಳನ್ನು ಹೆಚ್ಚಿಸುತ್ತವೆ. ಅನುಭವದ ಮೂಲಕ ಮೂಡಿಬಂದ ಸಾಹಿತ್ಯ ಯಾವಾಗಲೂ ಗಟ್ಟಿಯಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕವಿ ಶಿ.ಜು.ಪಾಶ, ಮುತ್ತಣ್ಣ, ಸುಂದರಮ್ಮ, ಮನ್ಸೂರು ಮುಲ್ಕಿ, ಖಾಕಿ ಕವಿ ಮಂಜುನಾಥ ಅವರುಗಳಿಗೆ ರಾಜ್ಯಮಟ್ಟದ ಜನ್ನ ಕಾವ್ಯ ಪ್ರಶಸ್ತಿಯನ್ನು ನೀಡಲಾಯಿತು.
ಹಾಗೆಯೇ ಸಮಾಜ ಸೇವಕಿ ಡಾ.ನೇತ್ರಾವತಿ ಟಿ. ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಜೊತೆಗೆ ದತ್ತಿ ಪ್ರಶಸ್ತಿಗಳನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕವಿ ಕಾವ್ಯ ಸಂಭ್ರಮದ ಸಂಚಾಲಕಿ ಹಾಗೂ ಸಾಹಿತಿ ಡಾ.ಹೆಚ್.ಕೆ. ಹಸೀನಾ ವಹಿಸಿದ್ದರು. ಪ್ರಾಂಶುಪಾಲ ಡಾ. ಸೈಯ್ಯದ್ ಸನಾವುಲ್ಲಾ ಸೇರಿದಂತೆ ಹಲವರು ಇದ್ದರು. ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕ ಮಾತನಾಡಿದರು.  ಲತಾ ಮಣಿ ನಿರೂಪಿಸಿದರು.

Leave a Reply

Your email address will not be published. Required fields are marked *

Optimized by Optimole
error: Content is protected !!