ಅಲೋಕ್ ಕುಮಾರ್,ಹೇಮಂತ್ ನಿಂಬಾಳ್ಕರ್ ಸೇರಿ ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಅಶ್ವಸೂರ್ಯ/ಬೆಂಗಳೂರು: ಅಲೋಕ್ ಕುಮಾರ್, ಹೇಮಂತ್ ಎಂ.ನಿಂಬಾಳ್ಕರ್ ಸೇರಿದಂತೆ ನಾಲ್ವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹುದ್ದೆಯ ನಾಲ್ವರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿರುವ ಹೇಮಂತ್ ಎಂ.ನಿಂಬಾಳ್ಕರ್ ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ಗುಪ್ತಚರ (Intelligence) ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದ್ದು ಜೊತೆಗೆ ವಾರ್ತಾ ಇಲಾಖೆಯ ಆಯುಕ್ತರ ಜವಾಬ್ದಾರಿಯನ್ನೂ ಹೆಚ್ಚುವರಿಯಾಗಿ ಅವರಿಗೆ ನೀಡಲಾಗಿದೆ.
ಹೇಮಂತ್ ನಿಂಬಾಳ್ಕರ್ ಅವರು ಮಾಜಿ ಶಾಸಕಿ, ಕಾಂಗ್ರೆಸ್ ನಾಯಕಿ ಡಾ.ಅಂಜಲಿ ನಿಂಬಾಳ್ಕರ್ ಅವರ ಪತಿ. ಈ ಕಾರಣದಿಂದಲೇ ಲೋಕಸಭೆ ಚುನಾವಣೆ ವೇಳೆ ಅವರನ್ನು ವರ್ಗ ಮಾಡಲಾಗಿತ್ತು. ಲೋಕಸಭೆ ಚುನಾವಣೆ ಬಳಿಕ ಮತ್ತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಬಂದಿದ್ದರು.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರನ್ನು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದಿಂದ ಬಿಡುಗಡೆ ಮಾಡಲಾಗಿದ್ದು ಮೂರು ತಿಂಗಳ ಹಿಂದೆಯಷ್ಟೇ ಅಲೋಕ್ ಕುಮಾರ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹುದ್ದೆಯಿಂದ ವರ್ಗ ಮಾಡಲಾಗಿತ್ತು. ಸಂಚಾರ ಹಾಗೂ ಸುರಕ್ಷತೆ ಹುದ್ದೆಯಲ್ಲಿ ಈ ಹಿಂದೆಯೂ ಅವರು ಕೆಲಸ ಮಾಡಿದ್ದರು. ಎರಡನೇ ಬಾರಿ ಈ ಹುದ್ದೆಯಿಂದ ಅವರನ್ನು ಬದಲು ಮಾಡಲಾಗಿದೆ.
ಒಂದು ವರ್ಷದಿಂದ ಕರ್ನಾಟಕ ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಕೆ.ವಿ.ಶರತ್ ಚಂದ್ರ ಅವರನ್ನು ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಜೊತೆಗೆ ಸಂಚಾರ ಹಾಗೂ ರಸ್ತೆ ಸುರಕ್ಷತಾ ಮುಖ್ಯಸ್ಥರ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಅದೇ ರೀತಿ ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹುದ್ದೆಯಿಂದ ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ಅವರನ್ನೂ ಕೂಡ ಬಿಡುಗಡೆ ಮಾಡಲಾಗಿದೆ.