ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಹಿ ಸುದ್ದಿ .!
ಅಶ್ವಸೂರ್ಯ/ಬೆಂಗಳೂರು: ಗೃಹ ಸಚಿವರಾದ ಜಿ. ಪರಮೇಶ್ವರ ಅವರ ನೇತೃತ್ವದ ಆಯ್ಕೆ ಸಮಿತಿಯು ವಿವಿಧ ನಿಗಮ– ಮಂಡಳಿಗಳ ನಿರ್ದೇಶಕ, ಸದಸ್ಯ ಸ್ಥಾನಗಳಿಗೆ ಒಂದು ಸಾವಿರಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರನ್ನು ಶೀಘ್ರದಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.!
ಗೃಹ ಸಚಿವರಾದ, ಜಿ.ಪರಮೇಶ್ವರ್
ರಾಜ್ಯದಲ್ಲಿರುವ 80ಕ್ಕೂ ಹೆಚ್ಚು ನಿಗಮ ಮಂಡಳಿಗಳಲ್ಲಿ 1,140 ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಲು ಉದ್ದೇಶಿಸಲಾಗಿದೆ. ಇದೇ ಆಗಸ್ಟ್ 13ನೇ ತಾರೀಖಿನ ಒಳಗೆ ಸಂಭವನೀಯರ ಪಟ್ಟಿ ಸಿದ್ಧಪಡಿಸಿ, ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಸಮಿತಿಯ ಸದಸ್ಯರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ತಿಳಿಸಿದ್ದಾರೆ.
ವಿವಿಧ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಗಳಿಗೆ ಸದಸ್ಯರ ನೇಮಕವೂ ಸೇರಿದಂತೆ ಇತ್ತೀಚೆಗೆ ನಡೆದ ಕೆಲವು ನೇಮಕಾತಿಗಳಿಗೆ ಕಾಂಗ್ರೆಸ್ ಪಕ್ಷದ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಿಗಮ – ಮಂಡಳಿಗಳಿಗೆ ನಿರ್ದೇಶಕರು, ಸದಸ್ಯರ ಆಯ್ಕೆಗೆ ರಚಿಸಿದ ಸಮಿತಿಯ ಸಭೆ ವಿಧಾನಸೌಧದಲ್ಲಿ ಮಂಗಳವಾರ ನಡೆಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್
ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ್ ಲಾಡ್, ಜಿ.ಸಿ. ಚಂದ್ರಶೇಖರ್, ಶಾಸಕರಾದ ರಿಜ್ವಾನ್ ಹರ್ಷದ್, ರೂಪಕಲಾ ಶಶಿಧರ್, ಮುಖಂಡರಾದ ವಿ.ಆರ್. ಸುದರ್ಶನ್, ಎಂ.ಹರೀಶ್ ಕುಮಾರ್ ಸಭೆಯಲ್ಲಿದ್ದರು. ಆಯ್ಕೆ ಪ್ರಕ್ರಿಯೆಗೆ ನಿರ್ದಿಷ್ಟ ಮಾನದಂಡಗಳನ್ನು ರೂಪಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಹಾಗಾಗಿ ಶೀಘ್ರದಲ್ಲಿಯೇ ಕಾರ್ಯಕರ್ತರಿಗೆ ಸ್ಥಾನ ಸಿಗಲಿದೆ. ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.