ಬೆಂಗಳೂರು: ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಅಧಿಕಾರಿಗಳು ಪರಿಶೀಲನ ಕಾರ್ಯ ಚುರುಕುಗೊಳಿಸಿದ್ದು, ಖಾಸಗಿ ಆಸ್ಪತ್ರೆ, ಕ್ಲಿನಿಕ್, ಲ್ಯಾಬ್ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದ ಅನಂತರ ಎಚ್ಚೆತ್ತಿರುವ ಮೈಸೂರು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಜಿಲ್ಲಾದ್ಯಂತ ಪರಿಶೀಲನ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ. ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಮೈಸೂರಿನಲ್ಲೂ ಭ್ರೂಣ ಹತ್ಯೆ ಪ್ರಕರಣ ನಡೆದಿರುವುದು ಚರ್ಚೆಗೆ ಗ್ರಾಸವಾಯಿತು.
ಮಾಧ್ಯಮಗಳಲ್ಲಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಡೆದಿರುವ ಬಗ್ಗೆ ವರದಿಯಾಗುತ್ತಿದೆ. ಸಂಬಂಧಪಟ್ಟ ಆಸ್ಪತ್ರೆ ಬಗ್ಗೆ ಮಾಹಿತಿ ಇದೆಯಾ ಎಂದು ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಖಾಸಗಿ ಆಸ್ಪತ್ರೆ, ಕ್ಲಿನಿಕ್, ಆಸ್ಪತ್ರೆ, ಲ್ಯಾಬ್ ಹಾಗೂ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ನಿಗಾ ಇಡುವುದು ಮತ್ತು ಅವುಗಳ ಕಾರ್ಯಾಚರಣೆ ಬಗ್ಗೆ ತಿಳಿಯಲು ಜಿಲ್ಲಾದ್ಯಂತ ಪರಿಶೀಲನೆ ನಡೆಸಲಾಗುವುದು ಎಂದರು.
ರಾಜ್ಯಾದ್ಯಂತ ಭ್ರೂಣ ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆ ಎಗ್ಗಿಲ್ಲದೆ ನೆಡೆಯುತ್ತಿದೆ: ಕಡಿವಾಣಹಾಕಬೇಕಾದ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ!?
ಒಂದು ಕಡೆಗೆ ಡೆಂಗ್ಯೂ ಜ್ವರ, ಚಿಕ್ಕೂನ್ ಗುನ್ಯಾದಂತಹ ಸಾಂಕ್ರಾಮಿಕ ಖಾಯಿಲೆಗಳ ರುದ್ರತಾಂಡವ ನಡೆಯುತ್ತಿದ್ದರೆ, ಇನ್ನೊಂದು ಕಡೆಗೆ ಅಕ್ರಮ ವಾಗಿ ಭ್ರೂಣ ಪತ್ತೆಮಾಡುವ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಅಡ್ಡೆಗಳ ಹಾವಳಿ ರಾಜ್ಯದಾದ್ಯಂತ ಮಾಫಿಯಾ ಆಗಿ ಪರಿವರ್ತನೆಗೊಳ್ಳುತ್ತಿದೆ. ಒಂದು ಅಂದಾಜಿನ ಲೆಕ್ಕದ ಪ್ರಕಾರ ಸುಮಾರು ಮೂರುಸಾವಿರಕ್ಕೂ ಹೆಚ್ಚು ಸ್ಕ್ಯಾನಿಂಗ್ ಕೇಂದ್ರಗಳು ರಾಜ್ಯದಲ್ಲಿ ಎಡೆಬಿಡದೆ ಅಕ್ರಮವಾಗಿ ಭ್ರೂಣ ಪತ್ತೆಮಾಡುವ ಕಾರ್ಯದಲ್ಲಿ ತೊಡಗಿದೆ.
ದುರಂತವೆಂದರೆ ಈ ಸಾವಿರಾರು ಅಕ್ರಮ ಸ್ಕ್ಯಾನಿಂಗ್ ಸೆಂಟರ್‌ಗಳ ಪೈಕಿ ಬೆಂಗಳೂರೊಂದರಲ್ಲಿಯೇ ಎರಡುಸಾವಿರಕ್ಕೂ ಹೆಚ್ಚು ಕೇಂದ್ರಗಳಿವೆ ಎಂದು ಅಂದಾಜಿಸಲಾಗಿದೆ. ಗಲ್ಲಿಗಲ್ಲಿ, ಬೀದಿ-ಬೀದಿಗಳಲ್ಲಿ ನಾಯಿಕೊಡೆಯಂತೆ ಎದ್ದು ನಿಂತಿರುವ ಎರಡುಸಾವಿರ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ನಿತ್ಯ ಸಹಸ್ರಾರು ಭ್ರೂಣಗಳ ಲಿಂಗಪತ್ತೆ ನಡೆಸಲಾಗುತ್ತಿದೆ. ಪತ್ತೆ ಮಾಡಿದ ಲಿಂಗಗಳಲ್ಲಿ ಶೇ.50ರಷ್ಟು ಭ್ರೂಣಗಳು ಅಲ್ಲಲ್ಲಿಯೇ ಹತ್ಯೆಯಾಗುತ್ತಿವೆ. ಮುಖ್ಯವಾಗಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ
ಬಿಗಡಾಯಿಸಿಕೊಂಡಿದೆ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಎಂಬ ಅತ್ಯಾಧುನಿಕ ತಂತ್ರಜ್ಞಾನದಿಂದ ಭ್ರೂಣ ಪತ್ತೆ ಮತ್ತು ಹತ್ಯೆ ತೀರಾ ಸಲೀಸೆಂಬಂತೆ ಆಗಿ ಹೋಗಿದೆ. ಈ ಪಿಪಾಸು ಕೃತ್ಯ ಯಾವ ಮಟ್ಟಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ ಎಂದರೆ ಮೊಬೈಲ್ ಸ್ಕ್ಯಾನಿಂಗ್ ಸೆಂಟರ್‌ಗಳೂ ಈಗೀಗ ಎಲ್ಲೆಂದರಲ್ಲಿ ಬಾಹು ಚಾಚಿಕೊಂಡು ನಿಂತಿವೆ. ಸರ್ಕಾರ ಈ ಬಗ್ಗೆ ಎಷ್ಟೇ ಕಠಿಣ ಕಟ್ಟು ನಿಟ್ಟುಗಳನ್ನು ರೂಪಿಸಿದರೂ ಭ್ರೂಣ ಹತ್ಯೆ ಮಾತ್ರ ನಿರಾತಂಕವಾಗಿ ನಡೆಯುತ್ತಲೇ ಇದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಂತಹ ಸರ್ಕಾರಿ ಮತ್ತು ಜನಪರ ಸಂಘಟನೆಗಳು ದಶಕಗಳಿಂದ ಈ ಬಗ್ಗೆ ತಿಳುವಳಿಕೆ ನೀಡುತ್ತಾ
ಕೊಂಚ ಉಗ್ರವಾಗಿಯೇ ಹೋರಾಟ ಮಾಡುತ್ತಿದೆಯಾದರು ಭ್ರೂಣ ಹತ್ಯೆಯ ರಾಕ್ಷಸ ಕೃತ್ಯಕ್ಕೆ ಕಡಿವಾಣ ಹಾಕಲು ಮಾತ್ರ ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ಲಿಂಗ ಪ್ರಮಾಣದ ಏರುಪೇರು ಹೆಚ್ಚುತ್ತಲೇ ಇದೆ. ಬೆಂಗಳೂರು, ಬೆಳಗಾವಿ, ಮಂಡ್ಯ,ಶಿವಮೊಗ್ಗ ಜಿಲ್ಲೆಗಳಲ್ಲಿ ಲಿಂಗ ಪ್ರಮಾಣ ಅರ್ಥಾತ್ ಪ್ರತಿ ಸಾವಿರ ಪುರುಷರಿಗೆ ಇರುವ ಮಹಿಳೆಯ ಪ್ರಮಾಣ 1991ರಲ್ಲಿ 946 ಇದ್ದದ್ದು, 2001ರಲ್ಲಿ 929ಕ್ಕೆ ಇಳಿದಿದೆ. 2022-23ರಲ್ಲಿ 800 ರ ಗಡಿಗಿಂತ ಕೇಳಗಿದೆ!! ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣ ಪತ್ತೆಗೆ ನಿರ್ಬಂಧ ವಿಧಿಸಿದ್ದರೂ ಸಹ ನಿಯಮ ಮೀರಿ ಅಕ್ರಮವಾಗಿ ನಡೆಸುತ್ತಲೇ ಇದ್ದಾರೆ. ಆರೋಗ್ಯ ಇಲಾಖೆ ಸಾಕಷ್ಟು ಕೇಂದ್ರಗಳ ಮೇಲೆ ದಾಳಿ
ನಡೆಸಿದ್ದು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳತ್ತಲೆ ಇದೆ
ಆತಂಕದ ಸಂಗತಿ ಏನೆಂದರೆ ರಾಜ್ಯದಲ್ಲಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಹೊರತು ಪಡಿಸಿದರೆ ಲಿಂಗ ಪ್ರಮಾಣ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಗಣನೀಯ ಪ್ರಮಾಣದಲ್ಲಿ ಕಸಿದಿದೆ. ನಗರ ಪ್ರದೇಶದ ವಿದ್ಯಾವಂತರೂ ಸಹ ಈಗೀಗ ಭ್ರೂಣ ಹತ್ಯೆಯ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಐದು
ವರ್ಷದೊಳಗಿನ ಪ್ರತಿ ಸಾವಿರ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಪ್ರಮಾಣ 905 ಮಾತ್ರ ಇದೆ. ಇದ್ದಲ್ಲಿಗೇ ಹೋಗಿ ರಹಸ್ಯವಾಗಿ ಲಿಂಗಪತ್ತೆ ಮಾಡುವ ಮೊಬೈಲ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆಕೂಡ ಗರಿಬಿಚ್ಚಿ ಕುಳಿತಿದೆ. ಮೊಬೈಲ್ ಸೆಂಟರ್ ಗಳು ಹೆಚ್ಚುತ್ತಿರುವುದರಿಂದ ಗ್ರಾಮಾಂತರ ಪ್ರದೇಶದ ಕೇಲವು ತಾಯಂದಿರೂ ಸಹ ತಮ್ಮ ಕರುಳ ಕುಡಿಯನ್ನು ಕಣ್ಣು ಬಿಡುವ ಮೊದಲೇ
ಬಲಿಕೊಡುತ್ತಿದ್ದಾರೆ. ಹೆಣ್ಣು ಭ್ರೂಣಗಳ ಸರಣಿ ಹತ್ಯಾಕಾಂಡ ಎಗ್ಗಿಲ್ಲದೆ ಮುಂದುವರೆದಿದೆ. ಜಗತ್ತು ಎಷ್ಟೇ ಮುಂದುವರೆದರೂ, ಎಷ್ಟೇ ಆಧುನಿಕತೆ ಮೈಗೂಡಿಸಿಕೊಂಡರೂ ಈ ಮಾಯಾವಿ ಆಧುನಿಕತೆಯೆ ಮನಕುಲಕ್ಕೆ ಅಭಿಶಾಪವಾಗಿ ಪರಿಣಮಿಸತೊಡಗಿದೆ. ಅಕಾಲದಲ್ಲಿ ಅನೈತಿಕ ಸಂಬಂಧ ಹೊಂದಿ ಅವಸರದಲ್ಲಿ ಗರ್ಭಧರಿಸಿ ಅದನ್ನು ನಿರ್ಧಯವಾಗಿ ಕಿತ್ತೆಸೆಯುವ ಅಪ್ರಾಪ್ತ ಪೋಲಿ ತಾಯಂದಿರ ಭ್ರೂಣ ಹತ್ಯಾಕಾಂಡ ಒಂದು ಕಡೆಯಾದರೆ, ಮತ್ತೊಂದು ಕಡೆ ಗಂಡು ಮಗುವೇ ಆಗಬೇಕೆಂದು ಬಗೆದು ತಾವೇ ಹೊತ್ತು ಪೊರೆದ ಹೆಣ್ಣು ಭ್ರೂಣಗಳನ್ನು ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಕತ್ತರಿಸಿ ಹಾಕುವ ಅನುಭವಸ್ಥ ಹೆಣ್ಣುಮಕ್ಕಳ ಸ್ವಯಂಕೃತ ಅಪರಾಧ ಈ ಎರಡೂ ವರ್ಗದ ಮಹಿಳೆಯರ ಅವಸರ, ಅತ್ಯಧಿಕ ಅಭಿಲಾಷೆಯ ಫಲವಾಗಿ ಭ್ರೂಣಹತ್ಯೆ, ಅಕ್ರಮ ಲಿಂಗಪತ್ತೆ ಕುರಿತಾಗಿ ಎಷ್ಟೇ ಉಗ್ರ ಕಾನೂನುಗಳನ್ನು ಜಾರಿಗೊಳಿಸಿದರೂ
ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೆಂದರೆ ನಮ್ಮ ಹೆಣ್ಣುಮಕ್ಕಳು ತಾಯ್ತನದ ಸಂಭ್ರಮಗಳನ್ನು ತೊರೆದು ಜಾಗತಿಕರಣದ ಕರಿನೆರಳಿಗೆ ಒಡಲು ನೀಡಿ ಬಿಟ್ಟಿದ್ದಾರ..? ಎಂಬ ಆತಂಕ ಉಂಟಾಗುತ್ತದೆ..?
ಎಲ್ಲೋ ಕೇಲವು ಕಡೆ ಮಾತ್ರ ಬಲವಂತದ ಭ್ರೂಣ ಹತ್ಯೆ ನೆಡೆಯುತ್ತಿರಬಹುದು ಆದರೆ ಇಚ್ಚಾ ಪೂರ್ವಕವಾಗಿ ನಡೆಯುವ ಹತ್ಯೆಯ ಸಂಖ್ಯೆಯೇ ಅತ್ಯಧಿಕ. ಪ್ರಾಯ ತುಂಬುತ್ತಿದ್ದಂತೆ ಆಕರ್ಷಣೆಗೆ ಒಳಗಾಗುವ ಪಡ್ಡೆ ಹುಡುಗಿಯರು ಸುಮ್ಮನೆ ಖುಷಿಗಾಗಿ ಗೆಳೆಯರನ್ನು ಅರಸುವುದು ಇಂದಿನ ಫ್ಯಾಷನ್ ಆಗಿದೆ. ಹಾಗೆ ಇಚ್ಛೆ ಅರಿಯುವ ಗೆಳೆಯ ಸಿಕ್ಕಿದ್ದೇ ಕುತೂಹಲಕ್ಕಾಗಿ ಯಡವಟ್ಟು ಮಾಡಿಕೊಂಡು ಪರಿತಪಿಸುವ ಹುಡುಗಿಯರ ಸಂಖ್ಯೆ ಕಡಿಮೆಯೇನಿಲ್ಲ, ಹುಡುಗನನ್ನು ಸಂತೋಷಗೊಳಿಸುವ ಇರಾದೆಗೊ ಅಥವಾ ತನ್ನದೇ ವೈಯುಕ್ತಿಕ ತೆವಲಿಗಾಗಿಯೇ ಮೈ ಒಪ್ಪಿಸುವ ಅಪ್ರಬುದ್ದ ಹುಡುಗಿಯರು ಅದಕ್ಕೆ ತಡೆ ಕ್ರಮಗಳನ್ನು ಕೈಗೊಳ್ಳದೆ ಮನಸೊ ಇಚ್ಚೆ ಸುಖ ಅನುಭವಿಸಿ ಬಿಡುತ್ತಾರೆ. ನಂತರ ಸಮಸ್ಯೆ ಎದುರಾದಾಗ ಗೆಳೆಯನನ್ನು ಕರೆದುಕೊಂಡು ಯಾವುದೊ ನರ್ಸಿಂಗ್ ಹೋಮ್ ಒಳಹೊಕ್ಕು ಗುಟ್ಟಾಗಿ ಭ್ರೂಣ ಕತ್ತರಿಸಿ ಕಸದ ತೊಟ್ಟಿಗೆ ಎಸೆದರೆ ಆಯಿತು. ಇಂತಹ ಪಾಪದ ಕೆಲಸ ಮಾಡಲು ನಮ್ಮಲ್ಲಿ ಸಾಕಷ್ಟು ಜನ ದ್ರೋಹಿ ವೈದ್ಯರಿದ್ದಾರೆ. ಅದಕ್ಕಾಗಿ ನರ್ಸಿಂಗ್ ಹೋಮ್ ತೆರೆದು ಕೂತಿರುವ ಕೇಲವು ಲಫಂಗರೂ ಇದ್ದಾರೆ. ಹದಿಹರೆಯದ ಧಾವಂತ ಬರೀ ಭ್ರೂಣ ಹತ್ಯೆಯಲ್ಲಿ ಮುಗಿದು ಹೋದರೆ ಹಾಳಾಗಿ ಹೋಗಲಿ ಎಂದು ಸುಮ್ಮನಿರಬಹುದು. ಆದರೆ ಭ್ರೂಣ ಹತ್ಯೆಯ ನಂತರ ಎದುರಾಗುವ ಹಲವು
ಸಮಸ್ಯೆಗಳಿವೆಯಲ್ಲ. ಅವು ನಿಜಕ್ಕೂ ಸಮಾಜ ತಲೆ ತಗ್ಗಿಸಬೇಕಾದಂತಹವು..!
ಕವಡೆ ಕಾಸಿನ ಆಸೆಗೆ ನಿಷ್ಟಾರುಣವಾಗಿ ಹೊಟ್ಟೆ ಕುಯ್ದು ಆಗಷ್ಟೇ ಕೈ-ಕಾಲು ಮೂಡುತ್ತಿರುವ ಹಸಿ ಭ್ರೂಣಗಳನ್ನು ಕಿತ್ತು ಹೊಲಿಗೆ ಹಾಕುವ ಕೇಲವು ಡಾಕ್ಟರ್‌ಗಳು, ನರ್ಸುಗಳೇ ಇಲ್ಲಿ ಅಸಲಿ ಹಂತಕರು. ಕೆಟ್ಟು ಕೆರ ಹಿಡಿದ ಹುಡುಗ – ಹುಡುಗಿಯರಿಗೆ ಈ ಹಂತಕ ಡಾಕ್ಟರ್, ನರ್ಸುಗಳೇ ದೇವರಿದ್ದಂತೆ. ಎಷ್ಟು ಸುಲಭದ ಕೆಲಸ ನೋಡಿ. ಕಾನೂನಲ್ಲಿ ಇಂತಹ ಭ್ರೂಣ ಹತ್ಯೆಗಳು ಕಾನೂನು ಬಾಹಿರವೆಂಬುದು
ತಿಳಿದಿದ್ದರೂ ಕಾನೂನಿನ ಕಣ್ಣಿಗೆ ಮಣ್ಣೆರಚಿ ಕೆಲವು ಮಂದಿ ವಿದ್ಯಾವಂತ ಡಾಕ್ಟರ್‌ಗಳೇ ಈ ಹೀನ ಕೃತ್ಯ ಎಸಗಿ ಹಣದಾಸೆಗಾಗಿ ವಂಚನೆ ಮಾಡುತ್ತಾ ಬಂದಿದ್ದಾರೆ. ಇಷ್ಟೆಲ್ಲಾ ಭ್ರೂಣ ಹತ್ಯೆ ನೆಡೆಯುತ್ತಿದ್ದರು ಯಾವ ಆರೋಗ್ಯ ಅಧಿಕಾರಿಯಾಗಲಿ, ಪೊಲೀಸ್ ಅಧಿಕಾರಿಯಾಗಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಹೆಚ್ಚು ಕಮ್ಮಿ ಇವತ್ತು ಭ್ರೂಣಹತ್ಯೆ ತಡೆ ಎನ್ನುವುದೆ ಹಾಸ್ಯಾಸ್ಪದ ಆಗಿಬಿಟ್ಟಿದೆ. ಲಿಂಗಪತ್ತೆ ನಿಷೇಧ ಕಾನೂನು ಬಂದು ದಶಕಗಳೇ ಕಳೆದರೂ ಇನ್ನೂ ಸ್ಕ್ಯಾನಿಂಗ್ ಮಿಷಿನ್‌ಗಳನ್ನು ತಾಯಿ ಗರ್ಭದಲ್ಲಿ ಬಿಟ್ಟು ಬೆಳೆಯುವ ಕಂದಮ್ಮಗಳ ಲಿಂಗಪತ್ತೆ ಮಾಡಿಕೊಡುವ ಖದೀಮರು ಇರುವಷ್ಟೇ ಸಂಖ್ಯೆಯಲ್ಲಿ ಬೇಡದ ಭ್ರೂಣವನ್ನು ಕತ್ತರಿಸುವ ಪಾಪಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹವರಿಗೆ ಕಾನೂನಿನ ಭಯ ಇರುತ್ತದೆಯಾದರೂ ಸಂಬಂಧಿಸಿದ ಕೇಲವು ಅಧಿಕಾರಿಗಳಿಗೆ ತಿಂಗಳ ಪ್ರಸಾದ ಸಲ್ಲಿಸಿ ಅವರ ಸಾರಥ್ಯದಲ್ಲಿ ಮಾಡಬಾರದ ಅನಾಚಾರಗಳನ್ನು ಮಾಡುತ್ತಿದ್ದಾರೆ. ಈ ಪಿಡುಗು ನಿವಾರಣೆಗೆ ಕಾನೂನು ಜಾರಿ ಸಮರ್ಪಕವಾಗಿ ಆಗಬೇಕು. ವಿಪರ್ಯಾಸವೆಂದರೆ ಭ್ರೂಣಹತ್ಯೆ ತಡೆ ಸಮಿತಿಗಳೇ ಸಮರ್ಪಕವಾಗಿ ರೂಪುಗೊಂಡಿಲ್ಲ. ಕಾಯ್ದೆ ರೂಪಿಸುವಾಗ ತೋರುವ ಆಸಕ್ತಿಯನ್ನು ಅದನ್ನು ಜಾರಿ ಮಾಡುವಾಗ ತೋರಿಸುವುದಿಲ್ಲ, ಹೀಗಾಗಿ ಭ್ರೂಣ ಹತ್ಯೆ ನಿಷೇಧ ಕಾಯ್ದೆ ಮಾತ್ರವಲ್ಲ, ಕೌಟುಂಬಿಕ ದೌರ್ಜನ್ಯ ಕಾಯ್ದೆ, ವರದಕ್ಷಿಣೆ
ನಿವಾರಣಾ ಕಾಯ್ದೆಗಳು ಈ ತನಕ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಇಲ್ಲಿ ಸಂಬಂಧಪಟ್ಟ ಇಲಾಖೆಗಳು ಅಧಿಕಾರಿಗಳು ಸರ್ಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಆಗ ಮಾತ್ರ ಎಲ್ಲಾ ಕಾಯ್ದೆಗಳು ಸಮರ್ಪಕ ಜಾರಿಗೆ ಸಾಧ್ಯವಾಗುತ್ತದೆ. ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ
ಮಾತ್ರ ಬಹುಮುಖ್ಯವಾಗಿ ಹೆಣ್ಮಕ್ಕಳು ಜಾಗೃತರಾಗಬೇಕು. ಯಾವುದೇ ಒತ್ತಡಕ್ಕೆ,ಆಮಿಷಕ್ಕೆ ಬಲಿಯಾಗದೇ ಹೆಂಗಸರು ದಿಟ್ಟವಾಗಿ ನಿಂತರೆ ಖಂಡಿತ ಭ್ರೂಣಹತ್ಯೆ ತಡೆಯುವುದು ಕಷ್ಟವೇನಲ್ಲ..!
ಶಿವಮೊಗ್ಗ ಜಿಲ್ಲೆಯಲ್ಲೂ ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ!?
ಶಿವಮೊಗ್ಗದ ಗಲ್ಲಿ ಗಲ್ಲಿಯ ಜೋತೆಗೆ ಕೆಲವು ನರ್ಸಿಂಗ್ ಹೋಂಗಳಲ್ಲೂ ಅಕ್ರಮವಾಗಿ ಭ್ರೂಣ ಪತ್ತೆಮಾಡುತ್ತಾರೆ ಬೆಕೆಂದರೆ ಸಾಕಷ್ಟು ಹಣಕೊಟ್ಟರೆ ಭ್ರೂಣ ಹತ್ಯೆಯನ್ನು ಸಲೀಸಾಗಿ ಮಾಡಿ ಮುಗಿಸುತ್ತಾರಂತೆ? ಮಲೆನಾಡಿನಲ್ಲಿ ಈ ದಂಧೆ ನಿರಂತರವಾಗಿ ನಡೆದು ಹೋಗುತ್ತಿದೆ. ಕೇಳುವವರೆ ಇಲ್ಲದಂತಾಗಿದೆ. ಶಿವಮೊಗ್ಗದ ಕೇಲವು ಮನೆಯಲ್ಲೇ ಅಕ್ರಮವಾಗಿ ಭ್ರೂಣ ಪತ್ತೆಮಾಡಲು ಸ್ಕ್ಯಾನಿಂಗ್ ಸೆಂಟರ್ ತೆರೆದಿದ್ದಾರಂತೆ.!! ಇಲ್ಲಿ ಯಾರಿಗೂ ಅರಿವಿಗೆ ಬಾರದರೀತಿಯಲ್ಲಿ ಭ್ರೂಣ ಪತ್ತೆ ಹಚ್ಚುತ್ತಾರೆ. ಗರ್ಭವತಿ ಇಲ್ಲ ಆಕೆಯ ಮನೆಯವರು ಭಯಸಿದರೆ ಭ್ರೂಣ ಹತ್ಯೆಯನ್ನು ಮಾಡಿ ಮುಗಿಸುತ್ತಾರೆ. ಅ ಮಟ್ಟದಲ್ಲಿ ಶಿವಮೊಗ್ಗ ನಗರದಲ್ಲಿ ಅಕ್ರಮ ಭ್ರೂಣ ಪತ್ತೆಯ ಸ್ಕ್ಯಾನಿಂಗ್ ಸೆಂಟರ್ ಗಳು ತಲೆ ಎತ್ತಿನಿಂತಿವೆ. ಇಲ್ಲೂ ಅಕ್ರಮ ದಂಧೆಕೋರರ ಅಡ್ಡೆಯ ಮೇಲೆ ದಾಳಿ ಆಗಬೇಕಿದೆ. ಹೆಣ್ಣು ಭ್ರೂಣ ಹತ್ಯೆಮಾಡುವ ಹಂತಕರನ್ನು ಹಿಡಿದು ಜೈಲಿಗಟ್ಟಬೇಕಿದೆ.
ಸುಧೀರ್ ವಿಧಾತ ,ಶಿವಮೊಗ್ಗ