
ಮುಂಬಯಿ : ಮಾಜಿ ಪತಿಯೆ ಪತ್ನಿಗೆ ಕಂಟಕ.! ನ್ಯಾಯಕ್ಕಾಗಿ ಪ್ರಧಾನಿ ಮೋದಿ, ಅಮಿತ್ ಶಾ ಮೊರೆ ಹೋದ ಭೂಗತ ಪಾತಕಿ ಹಾಜಿ ಮಸ್ತಾನ್ ಮಗಳು.!
ಭೂಗತ ಪಾತಕಿಯ ಮಗಳಾದರೂ ಲೈಂಗಿಕ ದೌರ್ಜನ್ಯ ಅನುಭವಿಸಿದ್ದೇನೆ, ಅತ್ಯಾಚಾರ ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ಭೂಗತ ಲೋಕದ ಪಾತಕಿ ಹಾಜಿ ಮಸ್ತಾನ್ ಅವರ ಮಗಳು ಆರೋಪಿಸಿದ್ದಾರೆ. ಅತ್ಯಾಚಾರ, ಬಲವಂತದ ಮದುವೆ ಆರೋಪ ಮಾಡಿದ್ದಾರೆ. ತನ್ನ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿರುವ ಪ್ರಕರಣದಲ್ಲಿ ನ್ಯಾಯಕ್ಕಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅವರು ಮನವಿ ಮಾಡಿದ್ದಾರೆ….
news.ashwasurya.in
ಅಶ್ವಸೂರ್ಯ/ಮುಂಬಯಿ : ಭೂಗತ ಪಾತಕಿ ಹಾಜಿ ಮಸ್ತಾನ್ ಅವರ ಮಗಳು ಮಾಜಿ ಪತಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಹಿನ್ನೆಲೆಯಲ್ಲಿ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದಾರೆ.
ಹಾಜಿ ಮಸ್ತಾನ್ ಅವರ ಮಗಳು ತನಗಾದ ಬಲವಂತದ ಮದುವೆ ಮತ್ತು ಅತ್ಯಾಚಾರದ ಆರೋಪಕ್ಕೆ ಸಂಭಂಧಿಸಿದಂತೆ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಹಸೀನ್ ಮಸ್ತಾನ್ ಮಿರ್ಜಾ,ನಾನು ಭೂಗತ ಪಾತಕಿಯ ಮಗಳಾಗಿದ್ದರೂ ನನ್ನ ಮಾಜಿ ಪತಿಯಿಂದ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.
ಮಾವನ ಮಗ ನಾಸೀರ್ ಹುಸೇನ್ 1996ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಯತ್ನಿಸಿದನು. ಆಗ ನನಗೆ ಕೇವಲ 12 ವರ್ಷ. ಬಳಿಕ ಅವನೊಂದಿಗೆ ನನ್ನನ್ನು ಬಲವಂತವಾಗಿ ಮದುವೆ ಮಾಡಿಸಲಾಯಿತು. ತಾನು ಭೂಗತ ಪಾತಕಿಯ ಮಗಳಾದರೂ ತಾನು ಈ ಅಗ್ನಿ ಪರೀಕ್ಷೆ ಎದುರಿಸಬೇಕಾಯಿತು. ತಂದೆಯ ಮರಣದ ಬಳಿಕ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರಂತೆ.!

ನನ್ನ ತಂದೆಯ ಆಸ್ತಿಗಾಗಿ ನನ್ನ ಮೇಲೆ ಈ ದೌರ್ಜನ್ಯಗಳನ್ನು ಮಾಡಲಾಗಿದೆ. ನಾನು ಹಾಜಿ ಮಸ್ತಾನ್ ಅವರ ಮಗಳಾಗಿ ಜನಿಸದಿದ್ದರೆ ಈ ಸವಾಲುಗಳನ್ನು ಎದುರಿಸುತ್ತಿರಲಿಲ್ಲ. ಅಪರಾಧಿಗಳು ಹಣವನ್ನು ನೋಡಿದರು. ತಂದೆ ನಿಧನರಾಗಿದ್ದರಿಂದ ಅವರು ನಮ್ಮ ಎಲ್ಲಾ ಸಂಪತ್ತನ್ನು ಪಡೆಯಬಹುದು ಎಂದು ಭಾವಿಸಿದ್ದರು. ಇದಕ್ಕಾಗಿಯೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಮಾಜಿ ಪತಿ ಕೂಡ ನನಗೆ ಹೇಳಿದ್ದರು ಎಂದು ಅವರು ತಿಳಿಸಿದ್ದಾರೆ.
ನಾನು ನನ್ನ ತಂದೆಯ ಹೆಸರಿಗೆ ಕಳಂಕ ತರುವುದನ್ನು ಬಯಸುವುದಿಲ್ಲ. ಅವರು ತಮ್ಮ ಜೀವಿತಾವಧಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಅವರು ಸಾವಿರಾರು ಜನರಿಗೆ ಸಹಾಯ ಕೂಡ ಮಾಡಿದ್ದರು. ಅವರ ಮಗಳಾಗಿರುವುದಕ್ಕೆ ನನಗೆ ಹೆಮ್ಮೆಯಿದೆ. ಹೀಗಾಗಿ ನಾನು ಈ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ ಎಂದು ಹಸೀನ್ ಹೇಳಿದ್ದಾರೆ.
ಬಹಿರಂಗವಾಗಿ ಅಪರಾಧಗಳನ್ನು ಮಾಡುತ್ತಿರುವ ಅಪರಾಧಿಗಳು ಭಯಪಡುವಂತೆ ಕಾನೂನುಗಳನ್ನು ಕಠಿಣಗೊಳಿಸಬೇಕು ಎಂದ ಅವರು ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ.

ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಯಿತು.! ನನ್ನನ್ನು ಕೊಲ್ಲಲು ಪ್ರಯತ್ನಿಸಲಾಯಿತು, ನನ್ನ ಗರ್ಭದಲ್ಲಿರುವ ಮಗುವನ್ನು ಕೊಲ್ಲಲಾಯಿತು, ನನ್ನನ್ನು ಬಲವಂತವಾಗಿ ಮದುವೆ ಮಾಡಲಾಯಿತು, ಬಳಿಕ ನನ್ನನ್ನು ಸಾಯಲು ಬೀದಿಗಳಲ್ಲಿ ಬಿಡಲಾಯಿತು.! ನನ್ನ ಬಳಿ ಹಣವಿರಲಿಲ್ಲ, ಏನೂ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ 2013 ರಿಂದ ಹೋರಾಡುತ್ತಿದ್ದೇನೆ. ಆರ್ಥಿಕ ತೊಂದರೆಗಳ ಕಾರಣದಿಂದ ಅದನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗಲಿಲ್ಲ. ಪೊಲೀಸರಿಂದ ತನಗೆ ಯಾವುದೇ ಬೆಂಬಲ ಸಿಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ತನಗೆ ರಾಜಕೀಯ ಸೇರುವ ಯಾವುದೇ ಇಚ್ಛೆ ಇಲ್ಲ ಎಂದ ಅವರು, ರಾಜಕೀಯದಲ್ಲಿ ಅನೇಕರ ಪರಿಚಯವಿದೆ. ಆದರೆ ನಾನು ಅದರಲ್ಲಿ ತೊಡಗಿಸಿಕೊಳ್ಳಲು ಬಯಸುವುದಿಲ್ಲ. ಅಧಿಕಾರದಲ್ಲಿ ಯಾರೇ ಇದ್ದರೂ ಈಗಿರುವ ಬಿಜೆಪಿಯಂತೆ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.

ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬುಲ್ಡೋಜರ್ ಕ್ರಮವನ್ನು ಬೆಂಬಲಿಸುವುದಾಗಿ ಹೇಳಿದ ಅವರು, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಲು ತಮಗೆ ಅಹ್ವಾನ ಬಂದಿತ್ತು. ಆದರೆ ಮಾನಸಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಆ ಆಫರ್ ನಿರಾಕರಿಸಿದ್ದೇನೆ ಎಂದರು.
ಕಳೆದ ವಾರ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಹಂಚಿಕೊಂಡ ಅವರು ತ್ರಿವಳಿ ತಲಾಖ್ ಅನ್ನು ನಿಷೇಧಿಸುವ ಪ್ರಧಾನ ಮಂತ್ರಿಯ ನಿರ್ಧಾರವನ್ನು ಶ್ಲಾಘಿಸಿದರು. ಇಂತಹ ಪ್ರಕರಣಗಳಲ್ಲಿ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಕಠಿಣ ಕಾನೂನುಗಳಿಗೆ ಮನವಿ ಮಾಡಿದರು.


