
ಬೆಂಗಳೂರು : ಬಸವೇಶ್ವರ ನಗರದ ವೆಸ್ಟಿನ್ ಹೋಟೆಲ್ ಬಳಿ ಪತ್ನಿಯನ್ನು ಗುಂಡಿಟ್ಟು ಕೊಂದ ಪತಿ.! ಪೊಲೀಸ್ ಠಾಣೆಗೆ ತೆರಳಿ ಶರಣಾದ ಪತಿ.!
Divorce Case Ends in Tragedy: Husband Kills Wife After Court Hearing in Bengaluru
news.ashwasurya.in

ಅಶ್ವಸೂರ್ಯ/ಬೆಂಗಳೂರು : ಪಶ್ಚಿಮ ಬೆಂಗಳೂರಿನ ಬಸವೇಶ್ವರನಗರದಲ್ಲಿ ಹೃದಯಕಲಕುವ ಘಟನೆಯೊಂದು ಬೆಳಕಿಗೆ ಬಂದಿದ್ದು, ದಾಂಪತ್ಯ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಗೆ ಗುಂಡು ಹೊಡೆದು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ಬಸವೇಶ್ವರನಗರದ ವೆಸ್ಟಿನ್ ಹೋಟೆಲ್ ಬಳಿ ನಡೆದಿರುವುದಾಗಿ ತಿಳಿದುಬಂದಿದೆ.
ಪತ್ನಿ ಮೇಲೆ ಅನುಮಾನ.!
ಬಾಲ ಮುರುಗನ್ ಹಾಗೂ ಭುವನೇಶ್ವರಿ 2011ರಲ್ಲಿ ಮದುವೆಯಾಗಿದ್ದು, ಬಳಿಕ ತಮಿಳುನಾಡಿನ ಸೇಲಂನಿಂದ ಬಂದು ಬೆಂಗಳೂರಿನ ರಾಜಾಜಿನಗರದಲ್ಲಿ ಎರಡು ಮಕ್ಕಳೊಂದಿಗೆ ನೆಲೆಸಿದ್ದರು.
ಬಾಲ ಮುರುಗನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು. ಆದರೆ ಬಾಲ ಮುರುಗನ್ ಅವರು ಪತ್ನಿ ಮೇಲೆ ಅನುಮಾನ ಪಡುತ್ತಿದ್ದರು. ಈ ಸಂಬಂಧ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಭುವನೇಶ್ವರಿ, ವಿಚ್ಛೇದನ ಕೇಳಿದ್ದಳು. ಇದಕ್ಕೆ ಪತಿ ಮುರುಗನ್ ಒಪ್ಪಿರಲಿಲ್ಲ.
ಕೊನೆಗೆ ಭುವನೇಶ್ವರಿ 2024ರಲ್ಲಿ ಮುರುಗನ್ನಿಂದ ದೂರವಾಗಿ ಕೆಪಿ ಅಗ್ರಹಾರದಲ್ಲಿ ಮನೆಮಾಡಿ ಶಿಫ್ಟ್ ಆಗಿದ್ದರಂತೆ. ಬಳಿಕ ಅವರು ಡಿವೋರ್ಸ್ ಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಕೋರ್ಟ್ ಮುರುಗನ್ಗೆ ನೋಟಿಸ್ ನೀಡಿತ್ತು. ಅದರಂತೆ ಮುರುಗನ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇತ್ತ ಭುವನೇಶ್ವರಿ ಸಹ ವಿಚಾರಣೆಗೆ ಹಾಜರಾಗಿದ್ದು, ಎಲ್ಲಾ ವಿಚಾರಣೆ ಮುಗಿಸಿ ಕೋರ್ಟ್ನಿಂದ ಇಬ್ಬರು ಆಚೆ ಬಂದಿದ್ದರು.
ಈ ವೇಳೆ ಮತ್ತೆ ಜಗಳ ಉಂಟಾಗಿ, ಅದು ತೀವ್ರ ಸ್ವರೂಪ ಪಡೆದುಕೊಂಡಿದೆ ಎನ್ನಲಾಗಿದೆ.
ಜಗಳ ತಾರಕಕ್ಕೆ ತಲುಪಿದ ಸಂದರ್ಭದಲ್ಲಿ, ಪತಿ ಅಕ್ರಮವಾಗಿ ಹೊಂದಿದ್ದ ಗನ್ ಬಳಸಿ ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಭುವನೇಶ್ವರಿ ಅವರನ್ನು ಸ್ಥಳಿಯ ಆಸ್ಪತ್ರೆಗೆ ಕೊಂಡೊಯ್ದರು ಆಕೆ ಬದುಕಲಿಲ್ಲ ಎಂದು ವರದಿಯಾಗಿದೆ.
ಮಾಹಿತಿ ದೊರೆತ ತಕ್ಷಣ ಮಾಗಡಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳವನ್ನು ಸೀಲ್ ಮಾಡಿ ಪ್ರಾಥಮಿಕ ತನಿಖೆ ಕೈಗೊಳ್ಳಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಬಾಲ ಮುರುಗನ್ ಸ್ವತಃ ಠಾಣೆಗೆ ತೆರಳಿ ಶರಣಾಗಿದ್ದಾನೆ. ಹತ್ಯೆಗೆ ಬಳಸಿದ ಗನ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಪರವಾನಗಿ ಹಾಗೂ ಮೂಲ ಕುರಿತು ತನಿಖೆ ನಡೆಯುತ್ತಿದೆ.
ತನಿಖೆ ಮುಂದುವರೆದಿದ್ದು
ಈ ಸಂಬಂಧ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಸಿಸಿ ಟಿವಿ ದೃಶ್ಯಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ಕುಟುಂಬಸ್ಥರ ಮಾಹಿತಿ ಆಧರಿಸಿ ತನಿಖೆ ಮುಂದುವರಿದಿದೆ. ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


