ಬೆಂಗಳೂರು : ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ನಗದು, ಚಿನ್ನದ ಉಂಗುರವಿದ್ದ ಬ್ಯಾಗ್ ಮನೆಗೆ ಹೊತ್ತೊಯ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವಿರುದ್ಧ ಎಫ್ಐಆರ್ ದಾಖಲು.!
news.ashwasurya.in
ಅಶ್ವಸೂರ್ಯ/ಬೆಂಗಳೂರು : ಸೈಬರ್ ವಂಚನೆ ಪ್ರಕರಣವೊಂದರ ಆರೋಪಿಯ ಕಾರಿನಲ್ಲಿದ್ದ 11 ಲಕ್ಷ ಹಣ ಹಾಗೂ ಚಿನ್ನದ ಉಂಗುರವಿದ್ದ ಬ್ಯಾಗ್ನ್ನು ತೆಗೆದುಕೊಂಡು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಹೆಡ್ಕಾನ್ಸ್ಟೇಬಲ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣವೊಂದರ ಸಂಬಂಧ ಕುಶಾಲ್ ನಾರಾಯಣ ಸೋನಿ ಎಂಬಾತನನ್ನು ಬಂಧಿಸಿದ್ದರು.ತದ ನಂತರದಲ್ಲಿ ಜಾಮೀನಿನ ಮೇಲೆ ಅವರು ಹೊರ ಬಂದಿದ್ದು, ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ತನ್ನ ಕಾರಿನೊಳಗೆ ಹಣ ಹಾಗೂ ಚಿನ್ನದ ಉಂಗುರವಿದ್ದ ಬ್ಯಾಗ್ ನಾಪತ್ತೆಯಾಗಿರುವುದು ಗಮನಿಸಿ ಅಪರಾಧ ವಿಭಾಗದ ಡಿಸಿಪಿ ಅವರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ.
ನಂತರ ಅಧಿಕಾರಿಗಳು ಸಿಸಿ ಕ್ಯಾಮೆರಾ ಪರಿಶೀಲಿಸಿ ತನಿಖೆ ಕೈಗೊಂಡಾಗ ಸೈಬರ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕಾರಿನಲ್ಲಿದ್ದ ಬ್ಯಾಗನ್ನು ಯಾರ ಗಮನಕ್ಕೂ ತರದೆ ಮನೆಗೆ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ.
ತಕ್ಷಣ ಹೆಡ್ ಕಾನ್ಸ್ಟೇಬಲ್ ಜಬೀವುಲ್ಲಾ ಅವರನ್ನು ಕರೆಸಿ ವಿಚಾರಿಸಿದಾಗ ಆ ಬ್ಯಾಗನ್ನು ಮನೆಯಲ್ಲಿಟ್ಟಿರುವುದಾಗಿ ಹೇಳಿದ್ದಾರೆ. ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಎಚ್ಚೆತ್ತುಕೊಂಡು ಆ ಬ್ಯಾಗನ್ನು ತಂದು ಸೋನಿಯವರಿಗೆ ಕೊಟ್ಟಿದ್ದಾರೆ. ಹೆಡ್ ಕಾನ್ಸ್ಟೇಬಲ್ ಜಬೀವುಲ್ಲಾ ವಿರುದ್ಧ ಸೈಬರ್ ಠಾಣೆ ಇನ್ಸ್ ಪೆಕ್ಟರ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.


