ಕಾರವಾರ : ಜೈಲಲ್ಲಿ ಮಾದಕ ವಸ್ತು ನಿರ್ಬಂಧಿಸಿ ಕಟ್ಟುನಿಟ್ಟಿನ ಕ್ರಮ.!ಜೈಲಿನಲ್ಲಿ ರೌಡಿಗಳ ಕಿರಿಕ್.! ಜೈಲರ್ ಸೇರಿ ಮೂವರು ಆಸ್ಪತ್ರೆ ದಾಖಲು.
news.ashwasurya.in
ಅಶ್ವಸೂರ್ಯ/ಕಾರವಾರ: ಮಾದಕ ವಸ್ತುಗಳನ್ನು ಜೈಲಿನಲ್ಲಿ ಬಿಡದೆ ಬಿಗಿ ಮಾಡಿದ್ದಕ್ಕೆ ರೌಡಿಗಳು ಜೈಲರ್ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದು ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.
ಮಂಗಳೂರು ಮೂಲದ ಮೊಹ್ಮದ್ ಅಬ್ದುಲ್ ಫಯಾನ್, ಕೌಶಿಕ ನಿಹಾಲ್ ಸೇರಿಕೊಂಡು ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಮೂವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಜೈಲರ್ ಜೊತೆ ಮಾದಕ ವಸ್ತುಗಳ ವಿಚಾರಕ್ಕೆ ಗಲಾಟೆ ಮಾಡಿದರೂ ಒಪ್ಪದ ಹಿನ್ನೆಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಗೊಳಗಾದ ಜೈಲರ್ ಹಾಗೂ ಸಿಬ್ಬಂದಿಯನ್ನು ಕಾರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಕಾಯತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮೊಹ್ಮದ್ ಅಬ್ದುಲ್ ಫಯಾನ್ ಮತ್ತು ಕೌಶಿಕ ನಿಹಾಲ್ ಆರೋಪಿಗಳಾಗಿದ್ದಾರೆ. ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರೋಪಿಗಳನ್ನು ಕಾರವಾರಕ್ಕೆ ಶಿಫ್ಟ್ ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಮಾದಕ ಪದಾರ್ಥಗಳನ್ನು ಸಂಪೂರ್ಣವಾಗಿ ಜೈಲಲ್ಲಿ ನಿರ್ಬಂಧಿಸಲಾಗಿತ್ತು ಈ ಕಾರಣದಿಂದ ಮಾದಕವಸ್ತುಗಳು ಸಿಗದೆ ಇದರ ದಾಸರಾದ ಕೆಲವು ಖೈದಿಗಳು ಜೈಲಿನ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ತಿರುಗಿಬಿದ್ದಿದ್ದಾರೆ.
———————————-
ಬೆಂಗಳೂರು : ಮಾದಕ ವಸ್ತು ಪತ್ತೆ – ಪರಪ್ಪನ ಅಗ್ರಹಾರ ಜೈಲು ವಾರ್ಡನ್ ಬಂಧನ.!

news.ashwasurya.in
ಅಶ್ವಸೂರ್ಯ/ಆನೇಕಲ್ : ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟ್ ಹಾಗೂ ನಿಷೇಧಿತ ಮಾದಕ ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ವಾರ್ಡನ್ ನನ್ನು ಬಂಧಿಸಿರುವ ಘಟನೆ ಬೆಳಕಿಗೆಬಂದಿದೆ.ಈ ಕಾರಣದಿಂದಲೇ ಕಳೆದ ಒಂದು ತಿಂಗಳಲ್ಲಿ ಕೆಲವು ಅಧಿಕಾರಿಗಳು ಮತ್ತು ಪೊಲೀಸರ ತಲೆ ದಂಡವಾಗಿದ್ದರು ಮತ್ತೆ ಹಣದಾಸೆಗೆ ಹುಚ್ಚುತನಕ್ಕೆ ಕೈಹಾಕಿ ಜೈಲ್ ವಾರ್ಡನ್ ಒಬ್ಬರು ಜೈಲ್ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಬಂದಿಸಲಾಗಿದೆ.
ರಾಹುಲ್ ಪಾಟೀಲ್ ಬಂಧನಕ್ಕೊಳಗಾದ ವಾರ್ಡನ್. ಜೈಲು ಅಧೀಕ್ಷಕ ಪರಮೇಶ್ ಅವರ ದೂರನ್ನು ಆಧರಿಸಿ ರಾಹುಲ್ನನ್ನ ಬಂಧಿಸಲಾಗಿದೆ.
ಬಂಧನದ ಹಿನ್ನೆಲೆ.
2018 ರಲ್ಲಿ ವಾರ್ಡನ್ ಆಗಿ ಕಾರಾಗೃಹ ಇಲಾಖೆಗೆ ಸೇರ್ಪಡೆಯಾಗಿದ್ದ ರಾಹುಲ್ ಈ ಹಿಂದೆ ಬೆಳಗಾವಿ ಕಾರಾಗೃಹದಲ್ಲಿ ಸೇವೆ ಸಲ್ಲಿಸಿದ್ದರು. ಪ್ರಸಕ್ತ ವರ್ಷದ ಜೂನ್ 29 ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು.
ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ರಾಹುಲ್ ಶುಕ್ರವಾರ ಸಂಜೆ 6:50 ರ ಸುಮಾರಿಗೆ ಮಹಾದ್ವಾರದ ಬಳಿ ಇದ್ದಂತಹ ಸಂಧರ್ಭದಲ್ಲಿ ತಪಾಸಣೆಗೆ ಬಂದಿದ್ದ KSESF ಸಿಬ್ಬಂದಿಗಳಿಗೆ ತಪಾಸಣೆ ವೇಳೆ ರಾಹುಲ್ ಬಳಿ ಇದ್ದ 2 ಸಿಗರೇಟ್ ಪ್ಯಾಕ್, 60 ಗ್ರಾಮ್ನಷ್ಟು ಮಾದಕ ವಸ್ತು ರೀತಿಯ ವಸ್ತು ಪತ್ತೆಯಾಗಿತ್ತು. ಸಿಬ್ಬಂದಿ ಕೂಡಲೇ ಈ ಮಾಹಿತಿಯನ್ನು ಜೈಲ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಜೈಲು ಅಧೀಕ್ಷಕ ಪರಮೇಶ್ ಅವರು ನೀಡಿದ ದೂರನ್ನು ಆಧರಿಸಿ ಜೈಲ್ ವಾರ್ಡನ್ ರಾಹುಲ್ನನ್ನು ಬಂಧಿಸಲಾಗಿದೆ.


