ಬೆಂಗಳೂರು : ನ್ಯಾಯಬೆಲೆ ಅಂಗಡಿಯಲ್ಲಿ QR ಸ್ಕ್ಯಾನ್ ಮೂಲಕ ಇಂದಿರಾ ಫುಡ್ ಕಿಟ್ ವಿತರಿಸಿ : ಸಿಎಂ ಸಿದ್ದರಾಮಯ್ಯ.
news.ashwasurya.in
ಅಶ್ವಸೂರ್ಯ/ಬೆಂಗಳೂರು : ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದಿರಾ ಆಹಾರ ಕಿಟ್ ಯೋಜನೆ ಅನುಷ್ಠಾನದ ಕುರಿತು ಸಭೆ ನಡೆಯಿತು. ಸಭೆಯಲ್ಲಿ ಪ್ರತೀ ನ್ಯಾಯಬೆಲೆ ಅಂಗಡಿಯಲ್ಲಿಯೂ ಸಹ ಕ್ಯೂಆರ್(ಕ್ವಿಕ್ ರೆಸ್ಪಾನ್ಸ್) ಸ್ಕ್ಯಾನ್ ಮಾಡಬಹುದಾದ ತಂತ್ರಾಂಶವನ್ನು ಅಳವಡಿಸಿ ಅದರ ಆಧಾರದ ಮೇಲೆ ಪಡಿತರ ಚೀಟಿದಾರರಿಗೆ ಇಂದಿರಾ ಫುಡ್ ಕಿಟ್ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿಗೆ ಬದಲಾಗಿ ಇಂದಿರಾ ಆಹಾರ ಕಿಟ್ ವಿತರಿಸುವ ಕುರಿತು ಈಗಾಗಲೇ ಸಂಪುಟದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಕುಟುಂಬ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಐದು ಕೆ.ಜಿ ಅಕ್ಕಿ ಬದಲಾಗಿ ತೊಗರಿ ಬೇಳೆ, ಸೂರ್ಯಕಾಂತಿ ಎಣ್ಣೆ, ಸಕ್ಕರೆ, ಉಪ್ಪು ನೀಡಲಾಗುವುದು. ಸರಬರಾಜಾದ ಫುಡ್ ಕಿಟ್ಗಳನ್ನು ನಿಗಮದ ಗೋದಾಮು/ಸಗಟು ಮಳಿಗೆಗಳ ಮೂಲಕ ನ್ಯಾಯಬೆಲೆ ಅಂಗಡಿಗಳಿಗೆ 10ನೇ ತಾರೀಕಿನಳಗಾಗಿ ವಿತರಣೆ ಮಾಡಬೇಕು ಎಂದು ಸಿಎಂ ಸೂಚಿಸಿದರು.

ಪ್ರತೀ ತಿಂಗಳು ಪ್ರಸ್ತುತ 1,25,08,262 ಇಂದಿರಾ ಆಹಾರ ಕಿಟ್ ಅಗತ್ಯವಿದ್ದು, ಇದಕ್ಕಾಗಿ ತಿಂಗಳಿಗೆ 466 ಕೋಟಿ ರೂ ವೆಚ್ಚ ಅಂದಾಜಿಸಲಾಗಿದೆ. ಈ ಯೋಜನೆಯಡಿ ಪ್ರತೀ ತಿಂಗಳು ಒಟ್ಟು 18,628 ಮೆ.ಟನ್ ತೊಗರಿ ಬೇಳೆ ಮತ್ತು ತಲಾ 12,419 ಮೆ.ಟನ್ ಸೂರ್ಯಕಾಂತಿ ಎಣ್ಣೆ, ಸಕ್ಕರೆ ಮತ್ತು ಉಪ್ಪು ಅಗತ್ಯವಿದೆ ಎಂದು ಅಂದಾಜು ಮಾಡಲಾಗಿದೆ.
ಆಹಾರ ಕಿಟ್ನಲ್ಲಿ ಪೌಷ್ಟಿಕಾಂಶಗಳಿಂದ ಕೂಡಿರುವ ತೊಗರಿ ಬೇಳೆಯನ್ನು ಗರಿಷ್ಟ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು. ನಾಫೆಡ್/ಎನ್ಸಿಸಿಎಫ್ನಂತಹ ಕೇಂದ್ರ ಸರಬರಾಜು ಸಂಸ್ಥೆಗಳ ಮೂಲಕ ಅಥವಾ ಖರೀದಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಕೆಟಿಪಿಪಿ ಅನ್ವಯ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.


