56 ವರ್ಷಗಳ ಬಳಿಕ ಪೊಲೀಸ್ ಸಿಬ್ಬಂದಿಗಳ ಕ್ಯಾಪ್ ಬದಲಾವಣೆ, ಹೊಸ ಪಿ-ಕ್ಯಾಪ್ ವಿತರಣೆ:ಕ್ಯಾಪ್ ಅಷ್ಟೇ ಅಲ್ಲ ವೃತ್ತಿಯಲ್ಲಿ ಬದಲಾವಣೆಯಾಗಬೇಕು – ಸಿಎಂ ಸಿದ್ದರಾಮಯ್ಯ

news.ashwasurya.in

ಅಶ್ವಸೂರ್ಯ/ಬೆಂಗಳೂರು : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪೊಲೀಸ್ ಸಿಬ್ಬಂದಿಗೆ ಪಿ-ಕ್ಯಾಪ್ ಪರಿಚಯ ಹಾಗೂ ವಿತರಣೆ ಹಾಗೂ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಗೆ ಚಾಲನೆ ನೀಡುವ ಕಾರ್ಯಕ್ರಮ ಅ, 28 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 56 ವರ್ಷಗಳ ಬಳಿಕ ಪೊಲೀಸ್ ಸಿಬ್ಬಂದಿಗೆ ಹೊಸದಾಗಿ ನೀಡಲಾಗುತ್ತಿರುವ ಪಿ-ಕ್ಯಾಪ್‌ನಲ್ಲಿ ಬದಲಾವಣೆ ಅಷ್ಟೇ ಅಲ್ಲದೆ ದಕ್ಷತೆ ಮೆರೆಯುವ ಮೂಲಕ ವೃತ್ತಿಯಲ್ಲಿ ಬದಲಾವಣೆಯಾಗಬೇಕು.ಈ ಮೂಲಕ ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ಕಡಿಮೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಹಲವು ವರ್ಷಗಳಿಂದ ಕಾನ್ಸ್ಟೇಬಲ್ಗಳು ಧರಿಸುತ್ತಿದ್ದ ಸ್ಲೋಚ್ ಕ್ಯಾಪ್ ಬದಲು ಪಿ-ಕ್ಯಾಪ್ ಆಯ್ಕೆ ಮಾಡಿದ್ದು ನಾನೇ. 56 ವರ್ಷಗಳಿಂದ ಇದ್ದ ಕ್ಯಾಪನ್ನು ಬದಲಾವಣೆ ಮಾಡಿದ್ದೇನೆ. ದಕ್ಷತೆಯಿಂದ ಕೆಲಸ ಮಾಡುವ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರು ತನ್ನಿ. ಕ್ಯಾಪ್ ಬದಲಾವಣೆಯಷ್ಟೇ ಅಲ್ಲದೆ, ವೃತ್ತಿಯಲ್ಲಿಯೂ ದಕ್ಷತೆಯಿಂದ ಕಾರ್ಯನಿರ್ವಹಿಸುವ ರೀತಿಯಲ್ಲಿ ಬದಲಾವಣೆ ಕಾಣಬೇಕು ಎಂದರು.

ಇಂಡಿಯಾ ಜಸ್ಟೀಸ್ ವರದಿಯಂತೆ ಅತ್ಯುತ್ಯಮ ಪೊಲೀಸ್ ಪಡೆಗಳಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ ಮೊದಲ ಸ್ಥಾನಕ್ಕೆ ಬರಲು ಶ್ರಮಿಸುವಂತೆಯೂ ಕರೆ ನೀಡಿದರು.
ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಮಾದಕವಸ್ತಗಳ ವಿರೋಧಿ ಕಾರ್ಯಪಡೆ ರಚಿಸಲಾಗಿದೆ. ಮಂಗಳೂರು ಗಲಭೆ ಪೀಡಿತ ನಗರವಾಗಿತ್ತು. ಪೊಲೀಸ್ ಅಧಿಕಾರಿಗಳನ್ನು ಬದಲಾವಣೆ ಮಾಡಿದ್ದರಿಂದ ನಿಯಂತ್ರಣಕ್ಕೆ ಬಂದಿದೆ. ಅಪರಾಧಗಳನ್ನು ತಡೆಗಟ್ಟಿ, ಉತ್ತಮ ತನಿಖೆ ಮಾಡಿ ಶಿಕ್ಷೆ ಕೊಡಿಸುವ ಇಚ್ಚಾಶಕ್ತಿ ಹೊಂದಬೇಕು. ಪೊಲೀಸರು ಒಳ್ಳೆಯ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ ಎಂದರು.


