
ಪತ್ರಕರ್ತನನ್ನೆ ಹತ್ಯೆಮಾಡಿದ ಅಕ್ರಮ ಪಡಿತರ ಅಕ್ಕಿ ದಂಧೆಕೋರರು.!

news.ashwasurya.in
ಅಶ್ವಸೂರ್ಯ/ಜಮಖಂಡಿ : ಅಕ್ರಮ ಪಡಿತರ ಅಕ್ಕಿ ದಂಧೆಕೋರರ ಗ್ಯಾಂಗ್ ಪತ್ರಕರ್ತನನ್ನೇ ಕೊಂದು ಮುಗಿಸಿದ್ದಾರೆ.! ವಾಹನ ಹಾಯಿಸಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ಬೆನ್ನತ್ತಿದ ಪೊಲೀಸರ ತಂಡ ಇದೊಂದು ಕೊಲೆ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಕ್ರಮ ಪಡಿತರದ ದಂಗೆಕೋರರು ಪತ್ರಕರ್ತನನ್ನೇ ಹತ್ಯೆಮಾಡಿದ್ದಾರೆ ಆತನ ಮೇಲೆ ವಾಹನ ಚಲಾಯಿಸಿ ಅಪಘಾತವೆಂದು ಬಿಂಬಿಸಿದ್ದ ಪ್ರಕರಣವನ್ನು ಕೈಗೆತ್ತಿಕೊಂಡು ಬೆನ್ನತ್ತಿದ ಪೊಲೀಸರು ಇದೊಂದು ಕೊಲೆ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೂಡ ಬಂಧಿಸಿ ಜಮಖಂಡಿ ಗ್ರಾಮಾಂತರ ಠಾಣೆಯ ಪೊಲೀಸರು ಹಂತಕರನ್ನು ಹೆಡೆಮುರಿ ಕಟ್ಟಿದ್ದಾರೆ.

ವಾಹನದ ಮಾಲಿಕ ಅಶ್ಫಾಕ್ ಮುಲ್ಲಾ ಹಾಗೂ ಈತನ ಸಹಚರರಾದ ನಂದೀಶ್ವರ ಪವಾಡಿ ಮತ್ತು ಮಹೇಶ ಪವಾಡಿ ಬಂಧಿತ ಆರೋಪಿಗಳಾಗಿದ್ದಾರೆ. ಪತ್ರಕರ್ತ ಬಸವರಾಜ ಕಾನಕೊಂಡ (40) ಹತ್ಯೆಯಾದ ವ್ಯಕ್ತಿ, ಪೊಲೀಸರು ಪತ್ರಕರ್ತನ ಹತ್ಯೆಗೆ ಬಳಸಲಾದ ವಾಹನವನ್ನು ಕೂಡ ವಶಪಡಿಸಿಕೊಂಡಿದ್ದಾರೆ
ಹತ್ಯೆಯ ಹಿನ್ನೆಲೆ.?:
ಪತ್ರಕರ್ತ ಬಸವರಾಜ್ ಕಾನಕೊಂಡ ಅವರು ಬೈಕ್ನಲ್ಲಿ ತಮ್ಮ ಊರಿಗೆ ಹೋಗುವಾಗ ಹಿಂದಿನಿಂದ ಬಂದ ಪಿಕ್ಅಪ್ ವಾಹನವೊಂದು ಬೈಕ್ಗೆ ರಭಸವಾಗಿ ಡಿಕ್ಕಿ ಹೊಡೆದಿತ್ತು. ಆಗ ಬೈಕ್ನ ಹಿಂಬದಿಯ ಚಕ್ರ ಕಿತ್ತುಕೊಂಡು ಹೋಗಿದ್ದು ಬೈಕ್ನಲ್ಲಿದ್ದ ಬಸವರಾಜ್ಗೆ ತೀವ್ರ ಸ್ವರೂಪದ ಗಾಯವಾಗಿ ಅಸುನೀಗಿದ್ದರು. ಈ ಘಟನೆ ಜಮಖಂಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ರಬಕವಿ-ಬನಹಟ್ಟಿ ರಸ್ತೆಯ ಬಂಡಿಗಣಿ ಕ್ರಾಸ್ನಲ್ಲಿ ಬುಧವಾರ ರಾತ್ರಿ ನಡೆದಿತ್ತು.
ಅನುಮಾನಗೊಂಡ ಪೊಲೀಸರು ಈ ಪ್ರಕರಣದ ಜಾಡು ಹಿಡಿದು ತಕ್ಷಣವೇ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಅನುಮಾನ ಉಂಟಾಗಿ, ಡಿಕ್ಕಿ ಹೊಡೆದಿದ್ದ ಪಿಕ್ಅಪ್ ವಾಹನದ ಮಾಲೀಕನನ್ನು ವಶಕ್ಕೆ ಪಡೆದು ಪೋಲಿಸ್ ಸ್ಟೈಲ್ನಲ್ಲೆ ವಿಚಾರಣೆ ಒಳಪಡಿಸಿದ್ದರು. ನಂತರ ಇದು ಕೊಲೆ ಪ್ರಕರಣವೆಂದು ಗೊತ್ತಾಗಿದೆ. ಅಲ್ಲದೆ, ಪ್ರಕರಣದಲ್ಲಿ ವಾಹನದ ಮಾಲೀಕ ಮಾತ್ರವಲ್ಲ, ಆತನ ಇಬ್ಬರು ಸಹಚರರು ಕೂಡ ಭಾಗಿಯಾಗಿರುವುದು ಖಚಿತವಾಯಿತು. ಮೂವರನ್ನು ವಶಕ್ಕೆ ಪಡೆದ ಪೊಲೀಸರು, ತೀವ್ರ ವಿಚಾರಣೆ ನಡೆಸಿದ್ದಾರೆ.
ವಿಚಾರಣೆ ವೇಳೆ ಅಶ್ಫಾಕ್ ಸುಲೇಮಾನ್ ಮುಲ್ಲಾ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಮದರಕಂಡಿ ಗ್ರಾಮದ ಬಳಿ ಬಸವರಾಜ ಖಾನಗೊಂಡ ಅವರ ವಾಹನಕ್ಕೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಆರೋಪಿಗಳು ಪಡಿತರ ಅಕ್ಕಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಪತ್ರಕರ್ತ ಬಸವರಾಜ್ ಕಾನಕೊಂಡ ಅಕ್ರಮ ದಂಧೆಯನ್ನು ಬಯಲುಮಾಡುವುದಾಗಿ ಹೇಳಿದ್ದನಂತೆ ಎಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪತ್ರಕರ್ತನ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು:
ಪೊಲೀಸರು ವಶಪಡಿಸಿಕೊಂಡಿರುವ ಆರೋಪಿಗಳು ಪಡಿತರ ಅಕ್ಕಿಯನ್ನು ಅಕ್ರಮ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ವಿಷಯ ಗೊತ್ತಾಗಿ ಪತ್ರಕರ್ತ ಬಸವರಾಜ್ ಕಾರಕೊಂಡ ನನಗೂ ಹಣ ನೀಡಬೇಕು, ಇಲ್ಲದಿದ್ದರೆ ಪ್ರಕರಣ ಬಯಲು ಮಾಡುವುದಾಗಿ ಬೆದರಿಕೆ ಹಾಕಿ ಬ್ಲಾಕ್ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಅದರಿಂದಾಗಿ ಪತ್ರಕರ್ತ ಬಸವರಾಜನನ್ನು ತೇರದಾಳದ ಸಣ್ಣ ಹೊಟೇಲ್ನಲ್ಲಿ ಚರ್ಚೆಗೆಂದು ಕರೆಸಲಾಗಿತ್ತು. ಪರಿಚಯಸ್ಥರಾಗಿದ್ದ ರಾಘವೇಂದ್ರ ತೇಲಿ ಎಂಬುವವರ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಸಿ ಚರ್ಚೆ ಮುಗಿಸಿ ಅಶ್ಫಾಕ್ ಸ್ಥಳದಿಂದ ಹೊರಟು ಹೋಗಿದ್ದ. ಉಳಿದವರು ಅಲ್ಲೇ ಊಟ ಮಾಡಿದ್ದು, ಬಳಿಕ ಬಸವರಾಜ ತನ್ನ ಸ್ಕೂಟಿಯಲ್ಲಿ ಜಮಖಂಡಿಯತ್ತ ಪ್ರಯಾಣ ಬೆಳೆಸಿದ್ದ.
ಅಶ್ಫಾಕ್ನ ಸಹಚರರಾದ ಸಂದೀಶ್ವರ ಹಾಗೂ ಮಹೇಶ ಬಸವರಾಜನನ್ನು ಹಿಂಬಾಲಿಸುತ್ತ ಬಂಡಿಗಣಿ ಕ್ರಾಸ್ ಹತ್ತಿರ ಪಿಕ್ಅಪ್ ವಾಹನದೊಂದಿಗೆ ಕಾಯುತ್ತಿದ್ದ ಅಶ್ಫಾಕ್ಗೆ ಮಾಹಿತಿ ನೀಡುತ್ತಿದ್ದರು. ಪೂರ್ವ ಯೋಜನೆಯಂತೆ ಹತ್ತಿರಕ್ಕೆ ಬಂದ ಬಸವರಾಜನ ವಾಹನಕ್ಕೆ ರಾಂಗ್ರೂಟ್ನಲ್ಲಿ ವೇಗವಾಗಿ ಬಂದು ಡಿಕ್ಕಿ ಹೊಡೆದು ಕೊಲೆ ಮಾಡಿ ಅಪಘಾತ ಎಂಬಂತೆ ಬಿಂಬಿಸಲಾಗಿತ್ತು. ಯುಸೂಫ್ ಮುಲ್ಲಾನ ಸಹಾಯದಿಂದ ಪಿಕ್ಅಪ್ ವಾಹನ ಮರೆ ಮಾಡಲಾಗಿತ್ತು.
ಪ್ರಕರಣ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳು, ಡಿಜಿಟಲ್ ಪುರಾವೆಗಳು, ಸಾಕ್ಷಿಗಳ ಹೇಳಿಕೆಗಳು ಮತ್ತು ವಿಧಿವಿಜ್ಞಾನ ಸುಳಿವುಗಳ ಸಹಾಯದಿಂದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


