ಮುಂಬಯಿ : ಕಾಂತಾರ ಚಾಪ್ಟರ್ 1 ಭಾರತದ ಎಲ್ಲಾ ನಿರ್ದೇಶಕರೂ ನಾಚಿಕೆಪಡಬೇಕು’ ಎಂದ ಶ್ರೇಷ್ಠ ನಿರ್ದೇಶಕ ರಾಮ್ ಗೋಪಾಲ್ ವರ್ಮಾ.!

news.ashwasurya.in
ಅಶ್ವಸೂರ್ಯ/ಮುಂಬಯಿ : ಒಟ್ಟಿನಲ್ಲಿ ಹೆಸರಾಂತ ನಿರ್ದೇಶಕ ಆರ್‌ಜಿವಿ ಅವರ ಈ ಒಂದು ಹೇಳಿಕೆ ‘ಕಾಂತಾರ ಚಾಪ್ಟರ್ 1’ ಬಗೆಗಿನ ಕನ್ನಡಿಗರ ಹೆಮ್ಮೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಕನ್ನಡಿಗ ಹೆಸರಾಂತ ನಾಯಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಒಬ್ಬ ನಟರಾಗಿ, ನಿರ್ದೇಶಕರಾಗಿ ಮತ್ತೊಮ್ಮೆ ತಮ್ಮ ಶಕ್ತಿ ಏನೆಂದು ಸಾಬೀತು ಪಡಿಸಿದ್ದಾರೆ.

ರಿಷಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಬಗ್ಗೆ ಆರ್‌ಜಿವಿ ಹೇಳಿಕೆ!
ಸ್ಯಾಂಡಲ್‌ವುಡ್‌ನ ಹೆಮ್ಮೆಯ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ “ಕಾಂತಾರ” ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಅದನ್ನೂ ಮೀರಿಸಿ ಇದೀಗ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಮಾಡುತ್ತಿರುವ ಮೋಡಿ ಅಷ್ಟಿಷ್ಟಲ್ಲ. ಕಾಂತಾರದ ಪ್ರೀಕ್ವೆಲ್ ನೋಡಿ ಕನ್ನಡಿಗರೂ ಸೇರಿದಂತೆ, ಜಗತ್ತಿನೆಲ್ಲೆಡೆ ಹೊಗಳಿಕೆಗಳು ಬರುತ್ತಿವೆ. ಈ ನಡುವೆ, ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (ಆರ್‌ಜಿವಿ) ಅವರು ‘ಕಾಂತಾರ ಚಾಪ್ಟರ್ 1’ ಬಗ್ಗೆ ಆಡಿರುವ ಮಾತುಗಳು ಈಗ ವೈರಲ್ ಆಗಿವೆ. ಅವರ ಪ್ರಕಾರ, ರಿಷಬ್ ಶೆಟ್ಟಿ ಅವರ ಈ ಸಿನಿಮಾವನ್ನು ನೋಡಿದ ಮೇಲೆ ಭಾರತದ ಎಲ್ಲಾ ನಿರ್ದೇಶಕರು ನಾಚಿಕೆ ಪಟ್ಟು ಕೊಳ್ಳಬೇಕಂತೆ.!?

ಹೌದು ನೀವು ಕೇಳಿದ್ದು ನಿಜ! ಯಾವಾಗಲೂ ತಮ್ಮ ನೇರ ನುಡಿಗಳಿಂದ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ಆರ್‌ಜಿವಿ, ಈ ಬಾರಿ ರಿಷಬ್ ಶೆಟ್ಟಿ ಮತ್ತು ‘ಕಾಂತಾರ ಚಾಪ್ಟರ್ 1’ ತಂಡದ ಬಗ್ಗೆ ತುಂಬಾನೇ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರ ಈ ಹೇಳಿಕೆ ಈಗ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ಹಾಗಾದರೆ ಆರ್‌ಜಿವಿ ಹೇಳಿದ್ದೇನು?

ತಮ್ಮ X (ಹಿಂದಿನ ಟ್ವಿಟರ್) ಖಾತೆಯಲ್ಲಿ ಆರ್‌ಜಿವಿ, “ಕಾಂತಾರಾ ಅದ್ಭುತವಾಗಿದೆ… ಭಾರತದ ಎಲ್ಲಾ ಚಿತ್ರ ನಿರ್ಮಾಪಕರು ನಾಚಿಕೆಪಡಬೇಕು. ರಿಷಬ್ ಶೆಟ್ಟಿ ಮತ್ತು ಅವರ ತಂಡ ಬಿಜಿಎಂ, ಸೌಂಡ್ ಡಿಸೈನ್, ಛಾಯಾಗ್ರಹಣ, ಪ್ರೊಡಕ್ಷನ್ ಡಿಸೈನ್ ಮತ್ತು ವಿಎಫ್‌ಎಕ್ಸ್‌ನಲ್ಲಿ ಹಾಕಿದ ಊಹಿಸಲೂ ಅಸಾಧ್ಯವಾದ ಪ್ರಯತ್ನವನ್ನು ನೋಡಿದ ನಂತರ. ಕಥಾ ವಸ್ತುವನ್ನು ಮರೆತರೂ, ಅವರ ಪ್ರಯತ್ನವೊಂದೇ “ಕಾಂತಾರ 1″ ಅನ್ನು ಬ್ಲಾಕ್‌ಬಸ್ಟರ್ ಮಾಡಲು ಅರ್ಹವಾಗಿದೆ… ರಾಜಿಯಾಗದೆ ಸೃಜನಾತ್ಮಕ ತಂಡವನ್ನು ಬೆಂಬಲಿಸಿದ ಹೊಂಬಾಳೆ ಫಿಲಮ್ಸ್‌ಗೆ ಹ್ಯಾಟ್ಸ್ ಆಫ್… ಮತ್ತು ರಿಷಬ್ ಶೆಟ್ಟಿ ಅವರೆ ನೀವು ಶ್ರೇಷ್ಠ ನಿರ್ದೇಶಕರೋ ಅಥವಾ ಶ್ರೇಷ್ಠ ನಟರೋ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ” ಎಂದು ಬರೆದಿದ್ದಾರೆ.

ಇದಕ್ಕಿಂತ ದೊಡ್ಡ ಹೊಗಳಿಕೆ ಇನ್ನೊಂದಿದೆಯೇ? ಆರ್‌ಜಿವಿ ಅವರೇ ಇಷ್ಟೊಂದು ಮಾತುಗಳನ್ನು ಆಡಿದ್ದಾರೆ ಎಂದರೆ, ‘ಕಾಂತಾರ ಚಾಪ್ಟರ್ 1’ ಚಿತ್ರದ ಗುಣಮಟ್ಟ ಮತ್ತು ಅದಕ್ಕಾಗಿ ತಂಡ ಪಟ್ಟಿರುವ ಶ್ರಮ ಎಷ್ಟಿರಬಹುದು ಎಂದು ಊಹಿಸಬಹುದು. ಸಾಮಾನ್ಯವಾಗಿ, ಬೇರೆ ಭಾಷೆಯ ಚಿತ್ರಗಳನ್ನು ಅಷ್ಟಾಗಿ ಕೊಂಡಾಡದ ಬಾಲಿವುಡ್‌ನ ನಿರ್ದೇಶಕರು, ಈ ಬಾರಿ ಸೌತ್ ಸಿನಿಮಾದ ಬಗ್ಗೆ, ಅದೂ ಒಂದು ಪ್ರೀಕ್ವೆಲ್ ಬಗ್ಗೆ ಇಷ್ಟೊಂದು ಮಾತಾಡಿದ್ದಾರೆ ಎಂದರೆ, ರಿಷಬ್ ಶೆಟ್ಟಿ ಅವರ ಕತೆಯಲ್ಲಿ ಏನೋ ವಿಶೇಷತೆ ಇದ್ದೇ ಇದೆ ಎಂದು ಕನ್ನಡಿಗರು ಹೆಮ್ಮೆಯಿಂದ ಬೀಗುತ್ತಿದ್ದಾರೆ.
ಕನ್ನಡಿಗರ ಹೆಮ್ಮೆಯ ಪುತ್ರ ರಿಷಬ್ ಶೆಟ್ಟಿ.!

“ಕಾಂತಾರ”‘ ಸಿನಿಮಾ ಕನ್ನಡಕ್ಕೆ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಹೊಸ ದಾರಿಯನ್ನು ತೋರಿಸಿದೆ. ಕರಾವಳಿಯ ಜಾನಪದ ಕಥೆಯನ್ನು ಆಧರಿಸಿ, ಅದನ್ನು ಅದ್ಭುತವಾಗಿ ತೆರೆಯ ಮೇಲೆ ತಂದ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ಅಭಿನಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ‘ಕಾಂತಾರ ಚಾಪ್ಟರ್ 1’ ಮೂಲಕ ಅವರು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೊರಟಿದ್ದಾರೆ.
ರಿಷಬ್ ಶೆಟ್ಟಿ ಅವರ ಸೃಜನಾತ್ಮಕ ದೃಷ್ಟಿ!
ಹೊಂಬಾಳೆ ಫಿಲಮ್ಸ್‌ನ ವಿಜಯ್ ಕಿರಗಂದೂರು ಅವರ ಬೆಂಬಲ ಮತ್ತು ರಿಷಬ್ ಶೆಟ್ಟಿ ಅವರ ಸೃಜನಾತ್ಮಕ ದೃಷ್ಟಿ, ಇವೆರಡರ ಸಂಯೋಜನೆ ‘ಕಾಂತಾರ’ ಸರಣಿಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಆರ್‌ಜಿವಿ ಅವರ ಮಾತುಗಳು ಕೇವಲ ಹೊಗಳಿಕೆ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೆ ಒಂದು ಸವಾಲೂ ಹೌದು. ಕಡಿಮೆ ಬಜೆಟ್‌ನಲ್ಲಿ, ಸ್ಥಳೀಯ ಕಥೆಗಳನ್ನು ಆಧರಿಸಿ ವಿಶ್ವಮಟ್ಟದ ಸಿನಿಮಾ ಮಾಡಬಹುದು ಎಂದು ರಿಷಬ್ ಶೆಟ್ಟಿ ತೋರಿಸಿಕೊಟ್ಟಿದ್ದಾರೆ.

ಒಟ್ಟಿನಲ್ಲಿ, ಆರ್‌ಜಿವಿ ಅವರ ಈ ಹೇಳಿಕೆ ‘ಕಾಂತಾರ ಚಾಪ್ಟರ್ 1′ ಬಗೆಗಿನ ಕನ್ನಡಿಗರ ಹೆಮ್ಮೆಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಕನ್ನಡಿಗ ರಿಷಬ್ ಶೆಟ್ಟಿ ಅವರು ಒಬ್ಬ ನಟರಾಗಿ, ನಿರ್ದೇಶಕರಾಗಿ ಮತ್ತೊಮ್ಮೆ ಮೋಡಿ ಮಾಡಿದ್ದಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಕನ್ನಡಿಗರು ಮತ್ತು ಇಡೀ ಭಾರತ ದೇಶ ಮಾತ್ರವಲ್ಲ, ಪ್ರಪಂಚದ ಹಲವು ಮಹಾನ್ ವ್ಯಕ್ತಿಗಳು ಕಾಂತಾರ ಸಿನಿಮಾ ನೋಡಿ ಸಾಕಷ್ಟು ಹೋಗಳಿಕೆಯ ಮಾತನಾಡಿ ಅದ್ಭುತ..’ ಎಂದು ಬಣ್ಣಿಸಿದ್ದಾರೆ…


