ವಿಜಯನಗರ : ʼಗೃಹಲಕ್ಷ್ಮಿʼ ಹಣದಲ್ಲಿ ದ್ವಾರ ಬಾಗಿಲಿಗೆ ಸಿಎಂ ಸಿದ್ದರಾಮಯ್ಯ ಹೆಸರು, ಭಾವಚಿತ್ರ ಕೆತ್ತಿದ ದಂಪತಿ.!

news ashwasurya.in
ಅಶ್ವಸೂರ್ಯ/ ವಿಜಯನಗರ : “ಗೃಹಲಕ್ಷ್ಮಿ” ಹಣದಲ್ಲಿ ನಿರ್ಮಿಸಿದ ಬಾಗಿಲಿಗೆ ಸಿಎಂ ಸಿದ್ದರಾಮಯ್ಯ ಹೆಸರು, ಭಾವಚಿತ್ರ ಕೆತ್ತಿಸಿದ ದಂಪತಿ
ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ದಂಪತಿ ಕೆ.ಎಂ.ತಿಪ್ಪೇಸ್ವಾಮಿ ಮತ್ತು ಪಾರ್ವತಮ್ಮ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿನ ಕೃತಜ್ಞತೆ ಮತ್ತು ಪ್ರೀತಿಯನ್ನು ತಮ್ಮ ಮನೆಯ ಮುಖ್ಯ ಬಾಗಿಲಿನ ಮೇಲೆ ಅವರ ಹೆಸರು ಹಾಗೂ ಭಾವಚಿತ್ರ ಕೆತ್ತಿಸುವ ಮೂಲಕ ವ್ಯಕ್ತಪಡಿಸಿದ್ದಾರೆ.

ಪಾರ್ವತಮ್ಮ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದು, ಯೋಜನೆ ಆರಂಭದಿಂದಲೇ 15 ತಿಂಗಳುಗಳ ಕಾಲ ಬ್ಯಾಂಕ್ ಖಾತೆಗೆ ಬಂದ ಹಣವನ್ನು ಖರ್ಚು ಮಾಡದೇ ಕೂಡಿಟ್ಟಿದ್ದರು. ಹಳೆಯ ಮನೆಯ ಬಾಗಿಲು ಸರಿಯಾಗಿರಲಿಲ್ಲ. ಹೀಗಾಗಿ ಇದುವರೆಗೆ ಬಂದ ಗೃಹಲಕ್ಷ್ಮಿ ಹಣದಲ್ಲಿ ಹೊಸ ಬಾಗಿಲು ಮಾಡಿಸುವ ನಿರ್ಧಾರ ಕೈಗೊಂಡರು.

ಒಟ್ಟು 28 ಸಾವಿರ ರೂ. ವೆಚ್ಚದಲ್ಲಿ ಹೊಸ ಬಾಗಿಲು ನಿರ್ಮಿಸಿ, ಅದರ ಮೇಲ್ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೆತ್ತಿಸಲಾಗಿದೆ. ಮಧ್ಯಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನಿಂತಿರುವ ಭಾವಚಿತ್ರವನ್ನು ಕೆತ್ತಿಸಿದ್ದು, ಕೆಳಭಾಗದಲ್ಲಿ ಗೃಹಲಕ್ಷ್ಮಿ ಯೋಜನೆ ಎಂಬ ಬರಹವನ್ನು ಬರೆಯಲಾಗಿದೆ.
ಕೆಂಚಮಲ್ಲನಹಳ್ಳಿಯ ಬಡಗಿ ಎಕ್ಕೆಗುಂದಿ ದುರುಗೇಶ್ ಈ ಬಾಗಿಲನ್ನು ತಯಾರಿಸಿದ್ದು, ಇತ್ತೀಚೆಗೆ ಪಾರ್ವತಮ್ಮ ಹಾಗೂ ತಿಪ್ಪೇಸ್ವಾಮಿ ಅವರ ಮನೆಯಲ್ಲಿ ಅಳವಡಿಸಲಾಗಿದೆ. ಹೊಸ ಬಾಗಿಲಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರು, ಹಿಂದುಳಿದವರು ಪರ ಶ್ರಮಿಸುತ್ತಿದ್ದಾರೆ. ನಮ್ಮಂಥ ಬಡವರ ಬದುಕಿಗೆ ದಾರಿದೀಪವಾಗಿದ್ದಾರೆ. ಬೆಳಗ್ಗೆ ಎದ್ದ ತಕ್ಷಣ ಅವರ ಫೋಟೋ ನೋಡಬೇಕೆಂಬ ಆಸೆಯಿಂದಲೇ ಬಾಗಿಲಿನಲ್ಲಿ ಅವರ ಹೆಸರು ಮತ್ತು ಚಿತ್ರ ಹಾಕಿಸಿದ್ದೇವೆ ಎಂದು ಪಾರ್ವತಮ್ಮ ಮತ್ತು ತಿಪ್ಪೇಸ್ವಾಮಿ ಹೇಳಿದ್ದಾರೆ.


