ಮೂಡುಬಿದಿರೆ: ದೂರು ನೀಡಲು ಬಂದ ಮಹಿಳೆ ಮೊಬೈಲ್ಗೆ ಅಶ್ಲೀಲ ಮೆಸೇಜ್ ಪೊಲೀಸ್ ಸಿಬ್ಬಂದಿ ಸಸ್ಪೆಂಡ್.
news.ashwasurya.in
ಅಶ್ವಸೂರ್ಯ/ಮೂಡುಬಿದಿರೆ: ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಗೆ ಪೊಲೀಸ್ ಸಿಬ್ಬಂದಿಯೊಬ್ಬ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ ಕಿರುಕುಳ ನೀಡಿರುವ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಆಯುಕ್ತರ ಆದೇಶದಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಶಾಂತಪ್ಪ ಸಸ್ಪೆಂಡ್ ಆದ ಠಾಣಾ ಸಿಬ್ಬಂದಿ. ಕುಟುಂಬ ಸಮಸ್ಯೆಯ ಬಗ್ಗೆ ದೂರು ನೀಡಲು ಬಂದಿದ್ದ ಮಹಿಳೆಯ ದೂರಿನ ಪ್ರತಿಯಲ್ಲಿದ್ದ ಆಕೆಯ ನಂಬರ್ ತೆಗೆದು ನಿರಂತರ ಮೆಸೇಜ್ ಮತ್ತು ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಾ, ತನ್ನೊಂದಿಗೆ ಬರುವಂತೆ ಕರೆಯುತ್ತಿದ್ದ ಎನ್ನಲಾಗಿದೆ.
ಮಹಿಳೆ ತನ್ನ ಸಹೋದರನೊಂದಿಗೆ ಮೂಡುಬಿದಿರೆ ಠಾಣೆಗೆ ಬಂದು ಶಾಂತಪ್ಪನ ವಿರುದ್ಧ ಕಾಲ್ ರೆಕಾರ್ಡ್, ಮೆಸೇಜ್ ಮತ್ತು ಕಾಲ್ ಲಿಸ್ಟ್ ಸಾಕ್ಷಿ ಸಮೇತ ದೂರು ನೀಡಿದ್ದಾರೆ.
ಸದ್ಯ ಆರೋಪಿ ಶಾಂತಪ್ಪನನ್ನು ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ಅಮಾನತು ಮಾಡಿದ್ದು, ಮಂಗಳೂರು ಉತ್ತರ ಪೊಲೀಸ್ ಉಪವಿಭಾಗದ ಎಸಿಪಿ ಶ್ರೀಕಾಂತ್ ಅವರ ನೇತೃತ್ವದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.


