Headlines

ಮೈಸೂರು :ಹಿಂದೂ ಸಂಘಟನೆಯ ಹೆಸರಿನಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ವಸೂಲಿಗೆ ನಿಂತ ಗ್ಯಾಂಗ್ ಅರೆಸ್ಟ್.!

ಮೈಸೂರು : ಹಿಂದೂ ಸಂಘಟನೆಯ ಹೆಸರಿನಲ್ಲಿ ಗೋವುಗಳ ರಕ್ಷಣೆ ಹೆಸರಿನಲ್ಲಿ ವಸೂಲಿಗೆ ನಿಂತ ಗ್ಯಾಂಗ್ ಅರೆಸ್ಟ್.!

ಅಶ್ವಸೂರ್ಯ/ಮೈಸೂರು : ಕೃಷಿ ವ್ಯವಸಾಯಕ್ಕಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ನಿಲ್ಲಿಸಿ ಧಮ್ಕಿ ಹಾಕಿ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಗ್ಯಾಂಗ್‌‌ವೊಂದನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಜಾನುವಾರು ಸಂರಕ್ಷಣೆ ಹೆಸರಲ್ಲಿ ಹಣ ವಸೂಲಿಗಿಳಿದಿದ್ದ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ರಾಷ್ಟ್ರೀಯ ಅಧ್ಯಕ್ಷನೆಂದು ಬಿಂಬಿಸಿಕೊಂಡಿದ್ದ ರಾಮಕೃಷ್ಣನನ್ನು ಮೈಸೂರಿನ ಹುಣಸೂರು ಪೊಲೀಸರು ಬಂಧಿಸಿದ್ದಾರೆ.
ಈತನ ಜೊತೆಗೆ ಮಹಿಳೆ ಸೇರಿದಂತೆ ಏಳು ಮಂದಿಯನ್ನು ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎರಡು ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಈ ಘಟನೆ ನಡೆದಿದೆ. ಹಿಂದೂ ಸಂಘಟನೆ ಹೆಸರಿನಲ್ಲಿ ಜಾನುವಾರು ಸಂರಕ್ಷಣೆ ಮಾಡುವ ನೆಪದಲ್ಲಿ ಈ ತಂಡ ಗೋವುಗಳನ್ನು ಸಾಗಿಸುವ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿದ್ದರು ಎನ್ನುವ ಆರೋಪಕೂಡ ಇದೆ.!
ತಾಲೂಕಿನ ರತ್ನಪುರಿಯ ಕಿರಣ್ ಬುಧವಾರ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಸಂತೆಯಲ್ಲಿ ಮೂರು ಜಾನುವಾರುಗಳನ್ನು ಹಣಕೊಟ್ಟು ಖರೀದಿಸಿ ತನ್ನ ಊರಿಗೆ ವಾಹನದಲ್ಲಿ ಸಾಗಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಗ್ಯಾಂಗ್ ಒಂದು ತಾಲೂಕಿನ ಕಟ್ಟೆಮಳಲವಾಡಿ ಬಳಿ ಅಡ್ಡಗಟ್ಟಿ ಕಸಾಯಿಖಾನೆಗೆ ಜಾನುವಾರು ಸಾಗಿಸುತ್ತಿದ್ದೀರಾ ಎಂದು ಚಾಲಕ ಕಿರಣ್‌ಗೆ ಬೆದರಿಸಿ 25 ಸಾವಿರ ರೂ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದರಂತೆ.!

ನಾನು ವ್ಯವಸಾಯಕ್ಕಾಗಿ ಸಂತೆಯಲ್ಲಿ ಗೋವುಗಳನ್ನು ಖರೀದಿಸಿ ಊರಿಗೆ ಕೊಂಡೊಯ್ಯುತ್ತಿದ್ದೇನೆಂದು ಹೇಳಿದ್ದಾರೆ. ರೈತನ ಮಾತನ್ನು ಅಲಿಸದ ಗ್ಯಾಂಗ್ ಹಣಕ್ಕಾಗಿ ಬೇಡಿಕೆ ಇಟ್ಟಿದೆ. ಆತ ಕೊಡಲು ನಿರಾಕರಿಸಿದಾಗ ಕೊನೆಗೆ 20 ಸಾವಿರ ಕೊಟ್ಟರೆ ಬಿಡುತ್ತೇವೆ ಎಂದು ಧಮ್ಕಿ ಹಾಕಿದ್ದಾರಂತೆ.; ಈ ವೇಳೆ ಏನು ನಡೆಯುತ್ತಿದೆ ಎಂದು ರಸ್ತೆಯಲ್ಲಿ ಹೋಗುತ್ತಿದ್ದ ಜನರು ಗಮನಿಸಿ ಆರೋಪಿಗಳ ವಿರುದ್ಧ ತಿರುಗಿ ಬಿದ್ದು, ತರಾಟೆಗೆ ತೆಗೆದುಕೊಂಡು ಗೂಸಾ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಇವರ ಎತ್ತುವಳಿಯ ದಂಧೆ ಬಯಲಾಗಿದೆ. ಈ ಸಂಬಂಧ ಕಿರಣ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!