ಬಿಜೆಪಿ ರಾಜ್ಯಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯಬಾರದು – ಕುಮಾರ್ ಬಂಗಾರಪ್ಪ.
news.ashwasurya.in
ಅಶ್ವಸೂರ್ಯ/ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರೆಯ ಬಾರದು ಎನ್ನುವ ನಿಲುವಿನಲ್ಲಿ ಈಗಲೂ ನಾವಿದ್ದೇವೆ ಎಂದು ಬಿಜೆಪಿ ರೆಬಲ್ ನಾಯಕ ಕುಮಾರ್ ಬಂಗಾರಪ್ಪ ಹೇಳಿದರು.
ಸಿದ್ದೇಶ್ವರ್ ಮನೆಯಲ್ಲಿ ಕೇಂದ್ರ ಸಚಿವ ಸೋಮಣ್ಣ ಜೊತೆ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸೋಮಣ್ಣ ಅವರು ನಮಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಹಕಾರ ಕೊಡಿ ಅಂತ ಕೇಳಿಲ್ಲ. ದಾವಣಗೆರೆ ವಿಚಾರಕ್ಕೆ ಸಿದ್ದೇಶ್ವರ್, ಹರೀಶ್ ಅವರನ್ನು ಸೋಮಣ್ಣ ಅವರು ಭೇಟಿಯಾಗಿದ್ದಾರೆ ಅಷ್ಟೇ ಎಂದು ತಿಳಿಸಿದರು.
ವಿಜಯೇಂದ್ರ ಮುಂದುವರೆಯಬಾರದು ಎನ್ನುವುದು ನಮ್ಮ ನಿಲುವು. ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಾದರೆ ವಿಜಯೇಂದ್ರ ಬದಲಾವಣೆಯಾಗಬೇಕು. ನಮ್ಮ ಅಭಿಪ್ರಾಯ ಹೇಳಿದ್ದೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ನೋಡೋಣ. ನಮ್ಮ ಅಭಿಪ್ರಾಯ, ನಮ್ಮ ನಿಲುವನ್ನು ನಾವು ಹೇಳಿದ್ದೇವೆ. ಕರ್ನಾಟಕದ ಕಾರ್ಯಕರ್ತರಿಗೂ ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎನ್ನುವ ಭಾವನೆಯಿದೆ. ನಮ್ಮ ಬೇಡಿಕೆಯಿಂದ ನಾವು ಹಿಂದೆ ಸರಿಯುವ ಮಾತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸರ್ಕಾರದ ಅಕ್ರಮಗಳು ಜಾಸ್ತಿಯಾಗಿವೆ. ಇದರ ವಿರುದ್ಧ ಧ್ವನಿ ಎತ್ತುವ ಕೆಲಸ ವಿಜಯೇಂದ್ರ ಮಾಡಿಲ್ಲ. ವಾಲ್ಮೀಕಿ ಹಗರಣವನ್ನು ಹಾಗೆಯೇ ಕೈ ಬಿಟ್ಟರು. ಹನಿಟ್ರ್ಯಾಪ್ ವಿಷಯವನ್ನು ಬಿಟ್ಟರು. ಹೊಂದಾಣಿಕೆ ಮಾಡಿಕೊಂಡು ಕೈ ಚೆಲ್ಲಿ ಕೂತರೆ ಹೇಗೆ? ಇವರೆಲ್ಲ ನೇರ ನಡೆಯಿಂದ ರಾಜಕೀಯ ಮಾಡುತ್ತಿಲ್ಲ. ಒಳ ಒಪ್ಪಂದ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಈಗಿನ ಅಧ್ಯಕ್ಷರು ಇದನ್ನೆಲ್ಲ ಮಾಡ್ತಿದ್ದಾರೆ. ಈ ಕುರಿತು ಹೈಕಮಾಂಡ್ಗೆ ಮನವರಿಕೆ ಮಾಡಿಕೊಂಡಿದ್ದೇವೆ ಎಂದು ಹೆಸರು ಹೇಳದೇ ವಿಜಯೇಂದ್ರ ಒಳಒಪ್ಪಂದ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ವಕ್ಫ್ ವಿಚಾರದಲ್ಲಿ ನಾವು ಹೋರಾಟ ಮಾಡಿದಾಗ ನಮ್ಮ ವಿರುದ್ಧ ಕೇಸ್ ಹಾಕಿಸಿದ್ದರು. ಬಿಜೆಪಿ ನಮ್ಮ ಜೊತೆ ವಕ್ಫ್ ಕೇಸ್ಲ್ಲಿ ಇರಬೇಕಿತ್ತು. ಆದರೆ ಆ ಕೆಲಸ ಈಗಿನ ಬಿಜೆಪಿ ಮಾಡಿಲ್ಲ. ಇದನ್ನೆಲ್ಲ ನೋಡಿದರೆ ಒಳಒಪ್ಪಂದ ಎಂದು ಗೊತ್ತಾಗುತ್ತದೆ. ಒಳಒಪ್ಪಂದ ಬಿಟ್ಟು ನೇರ ನಡೆಯಲ್ಲಿ ಹೋರಾಟ ಆಗಬೇಕು. ಜನರ ಭಾವನೆ ಪರವಾಗಿ ಹೋರಾಟ ಮಾಡಬೇಕು. ಆದರೆ ಆ ಕೆಲಸ ಈಗಿನ ಬಿಜೆಪಿ ವ್ಯವಸ್ಥೆಯಲ್ಲಿ ಆಗುತ್ತಿಲ್ಲ ಎಂದು ಕಿಡಿಕಾರಿದರು.
ಯಡಿಯೂರಪ್ಪ ಬಿಜೆಪಿ ಕಚೇರಿಗೆ ಬರುತ್ತಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಡಿಯೂರಪ್ಪ ಕಚೇರಿಗೆ ಬರುತ್ತಿರುವುದು ಒಳ್ಳೆಯ ನಿರ್ಧಾರ. ಈಗ ಇರುವ ವ್ಯವಸ್ಥೆ ಸರಿಯಿಲ್ಲ ಎಂದು ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರೇ ಕಚೇರಿಗೆ ಬರುತ್ತಿದ್ದಾರೆ. ವಿಜಯೇಂದ್ರಗೆ ಅನುಭವದ ಕೊರತೆ ಇದೆ. ಬಿಎಸ್ವೈ ಸರಿ ಮಾಡ್ತೀನಿ ಎಂದು ಹೇಳಿರುವುದು ಬಿಜೆಪಿಗೆ ಒಳ್ಳೆಯದು. ನಾವು ಇದನ್ನೇ ಹೇಳುತ್ತಿದ್ದೇವೆ. ನಮ್ಮ ಅನಿಸಿಕೆ ಹೇಳಿದ್ದೇವೆ. ಹೈಕಮಾಂಡ್ ಏನು ಮಾಡುತ್ತದೆ ನೋಡೋಣ. ನಾವು ಹೊಸ ಪಕ್ಷ ಕಟ್ಟಲ್ಲ. ಪಕ್ಷ ಬಿಡುವುದಿಲ್ಲ. ನಮ್ಮ ಗುರಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ವಿಜಯೇಂದ್ರರಿಂದ ಪಕ್ಷ ಸಂಘಟನೆ ವೀಕ್ ಆಗಿದೆ ಎಂದು ಕುಮಾರ್ ಬಂಗಾರಪ್ಪ ಖಡಕ್ ಆಗಿ ಹೇಳಿದರು.


