ಫುಟ್ಬಾಲ್ ಆಟವಾಡುವಾಗಲೇ ಸಿಡಿಲು ಬಡಿದು ಆಟಗಾರ ಸಾವು! ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ!
ಅಶ್ವಸೂರ್ಯ/ಶಿವಮೊಗ್ಗ; ಪೆರುವಿನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದ ಪರಿಣಾಮ ಆಟಗಾರನೋರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪೆರುವಿನಲ್ಲಿ ಜುವೆಂಟುಡ್ ಬೆಲ್ಲವಿಸ್ಟಾ ಮತ್ತು ಫ್ಯಾಮಿಲಿಯಾ ಚೋಕಾ ಎಂಬ ಹೆಸರಿನ ಎರಡು ಕ್ಲಬ್ಗಳ ನಡುವಿನ ಪಂದ್ಯದ ವೇಳೆ ಈ ಯಾರು ಅರಿಯದಂತಹ ದುರಂತ ಘಟನೆ ಸಂಭವಿಸಿದೆ. ಸಿಡಿಲು ಬಡಿದ ಪರಿಣಾಮ ಕೆಲವು ಆಟಗಾರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿನ ಪೋಸ್ಟ್ ಪ್ರಕಾರ, ಮಳೆ ಬಂದ ಕಾರಣ ರೆಫರಿ, ಆಟಗಾರರನ್ನು ಮೈದಾನದಿಂದ ಹೊರಗೆ ಹೋಗುವಂತೆ ಸೂಚಿಸಿದ್ದರು. ಆಟಗಾರರು ಮೈದಾನದಿಂದ ಹೊರಗೆ ಹೋಗುತ್ತಿರುವಾಗ ಮೈದಾನದಲ್ಲಿ ಬಲವಾದ ಸಿಡಿಲು ಬಡಿದಿದೆ, ಈ ಸಿಡಿಲಿನ ಹೊಡೆತಕ್ಕೆ 39 ವರ್ಷದ ಸಾಕರ್ ಆಟಗಾರ ಜೋಸ್ ಹ್ಯೂಗೋ ಡೆ ಲಾ ಕ್ರೂಜ್ ಮೆಸಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕೆಲವು ಆಟಗಾರರಿಗೆ ಸ್ವಲ್ಪ ಸುಟ್ಟ ಗಾಯಗಳಾಗಿದ್ದರಿಂದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಡಿಫೆಂಡರ್ ಜೋಸ್ ಹ್ಯೂಗೋ ಡೆಲಾಕ್ರೂಜ್ ಮೆಸಾ ಸಾವನ್ನಪ್ಪಿದ್ದರೆ, ಎರಿಕ್ ಎಸ್ಟಿವೆನ್ ಸೆಂಟೆ ಕುಯ್ಲೋರ್, ಜೋಶೆಪ್ ಗುಸ್ಟಾವೊ ಪರಿಯೋನಾ ಚೋಕಾ ಮತ್ತು ಕ್ರಿಸ್ಟಿಯನ್ ಸೀಸರ್ ಪಿಟುಯ್ ಕಹುವಾನಾ ಅವರು ಗಾಯಗೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳು ವರದಿ ಮಾಡಿದಂತೆ, ಗೋಲ್ಕೀಪರ್ ಜುವಾನ್ ಚೋಕ್ಕಾ ಲಾಕ್ಟಾ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.