ಹೆಂಡತಿ, ಮಗುವನ್ನು ಹತ್ಯೆಮಾಡಿ ತಾನು ಆತ್ಮಹತ್ಯೆಗೆ ಶರಣಾದ ಕಾರ್ತಿಕ್.! ಸಾವಿಗೂ ಮುನ್ನ ಆತ ಬರೆದ ಡೆತ್ ನೋಟ್‌ನಲ್ಲಿ ಏನಿದೆ?
ಅಶ್ವಸೂರ್ಯ/ಮುಲ್ಕಿ : ಕಾರ್ತಿಕ್ ಎಂಬಾತ ತನ್ನ ಮಡದಿ ಮತ್ತು ಮಗುವನ್ನು ಹರಿತವಾದ ಗ್ಲಾಸ್ ಚೂರಿನಿಂದ ತಿವಿದು ಕೊಲೆ ಮಾಡಿ ಬಳಿಕ ತಾನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಗ್ರಾಮದಲ್ಲಿ ನಡೆದಿದ್ದು ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.ಈ ಪ್ರಕರಣದ ಕುರಿತಂತೆ ಮಂಗಳೂರು ಪೊಲೀಸ್ ತನಿಖೆ ಚುರುಕು ಗೊಳಿಸಿದ್ದು ಪೋಲಿಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೆಚ್ಚಿನ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ಮುಲ್ಕಿ ಬಳಿಯ ಬೆಳ್ಳಾಯರು ಎಂಬಲ್ಲಿ ಯುವಕನೊಬ್ಬ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಬಿದ್ದ ಆತನ ದೇಹ ಚಿದ್ರವಾಗಿದ್ದು ಇದನ್ನು ಗಮನಿಸಿದ ಸ್ಥಳಿಯರು ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಮುಲ್ಕಿ ಪೊಲೀಸರಿಗೆ ಮುಟ್ಟಿತ್ತು.ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಸ್ಥಳ ಮಹಜರಿಗೆ ಮುಂದಾಗಿದ್ದಾರೆ.ಆದರೆ ಯುವಕನ ದೇಹ ಛಿದ್ರಗೊಂಡಿದ್ದರಿಂದ ಗುರುತು ಪತ್ತೆಮಾಡಲು ಸಾಧ್ಯವಾಗಿರಲಿಲ್ಲ. ಮುಲ್ಕಿ ರೈಲ್ವೇ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಯುವಕನ ಮೃತದೇಹ ಸಿಕ್ಕಿ ಸ್ವಲ್ಪ ದೂರದಲ್ಲೇ ಬೈಕ್ ಒಂದು ಪತ್ತೆಯಾಗಿತ್ತು. ಆತನ ದೇಹದಲ್ಲಿ ಬೇರಾವುದೇ ಗುರುತು ಪತ್ರಗಳಿರಲಿಲ್ಲ. ಶನಿವಾರ ಬೆಳಗ್ಗೆ ಸ್ಥಳದಲ್ಲಿ ಬೈಕ್ ಕೀ ಸಿಕ್ಕಿದ್ದು ಬೈಕನ್ನು ಚೆಕ್ ಮಾಡಿದಾಗ, ಅದರಲ್ಲಿ ಆರ್ ಸಿ ಕಾರ್ಡ್ ದೊರೆತಿದೆ.ಅದರಲ್ಲಿರುವ ವಿಳಾಸವನ್ನು ಪರಿಶೀಲಿಸಿದಾಗ ಪಕ್ಷಿಕೆರೆಯ ವಿಳಾಸವಿತ್ತು.!
ಪಕ್ಷಿಕೆರೆಯಲ್ಲಿ ಹೊಟೇಲ್ ನಡೆಸುತ್ತಿದ್ದು ಜನಾನುರಾಗಿ ವ್ಯಕ್ತಿಯಾಗಿದ್ದ ಜನಾರ್ದನ ಭಟ್ ಅವರ ಮಗನೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಕಾರ್ತಿಕ್ ಎಂದು ತಿಳಿದು ಪೊಲೀಸರಿಗೆ ತಿಳಿದಿದೆ.ತಕ್ಷಣವೇ ಪೊಲೀಸರು ಅವರ ಬಳಿಗೆ ತೆರಳಿದ್ದಾರೆ.
ಮಧ್ಯಾಹ್ನ 1.30ರ ಸುಮಾರಿಗೆ ಪೊಲೀಸರು ಜನಾರ್ದನ ಭಟ್ ಅವರ ಹೊಟೇಲಿಗೆ ತೆರಳಿ, ಕಾರ್ತಿಕ್ ಬಗ್ಗೆ ವಿಚಾರಿಸಿದಾಗ ನಿನ್ನೆ ಬೆಳಗ್ಗೆ ಮನೆಯಲ್ಲಿದ್ದರು. ಸಂಜೆ ಬಾಗಿಲು ಹಾಕ್ಕೊಂಡಿತ್ತು. ಇವತ್ತು ಬೆಳಗ್ಗೆ ಕಾಣಿಸಿರಲಿಲ್ಲ. ನಾವು ಬೆಳಗ್ಗೆಯೇ ಹೊಟೇಲಿಗೆ ಬಂದಿದ್ದೇವು ಎಂದು ತಿಳಿಸಿದ್ದಾರೆ. ಫೋನ್ ಮಾಡಿದರೆ ಮಗ ಮತ್ತು ಸೊಸೆಯ ಫೋನ್ ಸ್ವಿಚ್ ಆಫ್ ಬರುತ್ತಿತ್ತು. ಕೂಡಲೇ ಮನೆಗೆ ತೆರಳಿ, ಅವರಿದ್ದ ಕೋಣೆಯ ಬಾಗಿಲು ಒಡೆದು ನೋಡಿದಾಗ ಬೆಡ್ ನಲ್ಲಿ ಮಗು ಕೊಲೆಯಾದ ಸ್ಥಿತಿಯಲ್ಲಿ ಬಿದ್ದಿತ್ತು. ಅಲ್ಲಿಯೇ ಕೆಳಗಡೆ ಸೊಸೆ ಪ್ರಿಯಾಂಕ ಮೃತದೇಹ ಪತ್ತೆಯಾಗಿದೆ. ಕಾರ್ತಿಕನ ವೃದ್ಧ ತಂದೆ, ತಾಯಿ ಅದೇ ಮನೆಯಲ್ಲಿ ನಿನ್ನೆ ರಾತ್ರಿ ಕಳೆದಿದ್ದರೂ, ಮನೆಯಲ್ಲಿ ಸೊಸೆ, ಮಗು ಮೃತಪಟ್ಟಿರುವುದು ಅವರ ಗಮನಕ್ಕೆ ಬಂದಿರಲಿಲ್ಲ.
ಒಂದೇ ಮನೆಯಲ್ಲಿದ್ದರೂ ಮಗ, ಸೊಸೆ, ದಿನವೂ ಹೊಟೇಲ್ ತಮ್ಮ ಬದುಕು ಅಂದುಕೊಂಡಿದ್ದ ತಂದೆ ಜನಾರ್ದನ ಭಟ್ ಮತ್ತು ತಾಯಿ ಶ್ಯಾಮಲಾ ಜೊತೆಗೆ ಮಾತುಕತೆ ಇರಲಿಲ್ಲ. ಹೀಗಾಗಿ ಕೆಲವೊಮ್ಮೆ ಮಗ, ಸೊಸೆ ಮನೆಯಿಂದ ಹೊರಗೆ ಹೋಗುತ್ತಿದ್ದರೂ, ತಡವಾಗಿ ಮನೆಗೆ ಬರುತ್ತಿದ್ದರೂ, ಇವರು ಚಿಂತೆ ಮಾಡುತ್ತಿರಲಿಲ್ಲ. ಪೊಲೀಸರ ಮಾಹಿತಿ ಪ್ರಕಾರ, ಶುಕ್ರವಾರ (ನ.8) ಬೆಳಗ್ಗೆ 11 ಗಂಟೆ ಸುಮಾರಿಗೆ ಪತ್ನಿ ಮತ್ತು ಮಗುವನ್ನು ಗ್ಲಾಸಿನ ಪೀಸ್ ನಿಂದ ತಿವಿದು ಹತ್ಯೆ ಮಾಡಲಾಗಿದೆ. ಅಲ್ಲದೆ, ಮನೆಯ ಕೋಣೆಯಲ್ಲಿ ಸೀರೆಯನ್ನು ಬಿಗಿದ ರೀತಿ ಕಂಡುಬಂದಿದ್ದು, ಕಾರ್ತಿಕ್ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ ಎನ್ನುವ ಸಂಶಯ ವ್ಯಕ್ತವಾಗಿದೆ. ಅಲ್ಲದೆ ಪೊಲೀಸರು ಮನೆಯಲ್ಲಿ ಹುಡುಕಾಡಿದಾಗ ಸಿಕ್ಕ ಡೈರಿಯಲ್ಲಿ ಸುದೀರ್ಘ ಡೆತ್ ನೋಟ್ ಇದ್ದು, ಅದರಲ್ಲಿ ಹಲವು ವಿಚಾರಗಳನ್ನು ಕಾರ್ತಿಕ್ ಬರೆದಿಟ್ಟಿದ್ದಾನೆ.!
ಅದರಲ್ಲಿ ಪ್ರಮುಖವಾಗಿ ತಮ್ಮ ಶವಗಳನ್ನು ಪತ್ನಿಯ ತಂದೆ, ತಾಯಿಗೆ ನೀಡುವಂತೆ ಹೇಳಿದ್ದು, ತಂದೆ, ತಾಯಿ ತಮ್ಮ ಅಂತ್ಯ ಸಂಸ್ಕಾರ ಮಾಡಬಾರದು ಎಂದು ಬರೆದಿಟ್ಟಿದ್ದಾನೆ.! ಅಲ್ಲದೆ ತನಗೆ ಸೇರಬೇಕಾದ ಆಸ್ತಿಯ ವಿಚಾರವನ್ನೂ ಯಾರಿಗೆ ಸೇರಬೇಕು ಎನ್ನುವ ಬಗ್ಗೆ ಬರೆಯಲಾಗಿದೆ. ತನ್ನ ಸಾವಿಗೆ ಯಾರೂ ಕಾರಣರಲ್ಲ ಎಂಬುದನ್ನೂ ಬರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾರ್ತಿಕ್ ಪತ್ನಿ ಪ್ರಿಯಾಂಕ ಶಿವಮೊಗ್ಗ ಮೂಲದವರಾಗಿದ್ದಾರೆ. ಆಕೆಯ ಹೆತ್ತವರು ಬಂದ ಬಳಿಕವೇ ನೊಂದ ದಂಪತಿಗಳ ಸಾವಿಗೆ ಕಾರಣವೇನು? ಎನು ಪ್ರಕರಣ ದಾಖಲಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕು.