ಹೈದರಾಬಾದ್ TO ಮಡಿಕೇರಿ: ಪ್ರಿಯತಮೆ ಜೊತೆ ಸೇರಿ ಕೊಲೆ, ಸ್ಥಳ ಮಹಜರಿಗೆ ಕರೆತಂದ ವೇಳೆ ಆರೋಪಿ ಎಸ್ಕೇಪ್.!
ಅಶ್ವಸೂರ್ಯ/ಮಡಕೇರಿ: 8 ಕೋಟಿ ಆಸ್ತಿಗಾಗಿ ಗಂಡನನ್ನೇ ಹತ್ಯೆ ಮಾಡಿಸಿದ್ದ ಪತ್ನಿಯೊಬ್ಬಳ ಸಂಚು ಬಯಲುಮಾಡಿದ್ದ ಮಡಿಕೇರಿ ಪೊಲೀಸರು ಅಷ್ಟು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿಗಾಗಿ ವಿವಾಹಿತ ಪ್ರಿಯತಮೆಯೊಂದಿಗೆ ಸೇರಿ ಆಕೆಯ ಪತಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಕೊಡಗು ಪೊಲೀಸರು ಸ್ಥಳ ಮಹಜರಿಗೆ ಕರೆದೊಯ್ದಾಗ ಆರೋಪಿ ಎಸ್ಕೇಪ್ ಆಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕೊಲೆ ಆರೋಪಿ ಅಂಕುರ್ ಠಾಕೂರ್‌ನನ್ನ ತೆಲಂಗಾಣದ ಉಪ್ಪಳ್‌ನಲ್ಲಿ ಕೊಲೆ ನಡೆದ ಸ್ಥಳಕ್ಕೆ ಕರೆದೊಯ್ದು ಮಹಜರ್ ನಡೆಸುವ ವೇಳೆ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನಲೆ:
ಆಸ್ತಿಗಾಗಿ ಹೆಂಡತಿಯೊಬ್ಬಳು ತನ್ನ ಇಬ್ಬರು ಪ್ರಿಯಕರರ ಜೋತೆಗೆ ಸೇರಿ ಗಂಡನನ್ನು ಕೊಂದು ಅಂದರ್ ಆಗಿದ್ದರು. ಗಂಡ ರಮೇಶ್ ಕುಮಾರ್ ನನ್ನು ಹೈದರಾಬಾದ್ ನಲ್ಲಿ ಹತ್ಯೆಮಾಡಿ ಆತನ ಮೃತದೇಹವನ್ನು ಕರ್ನಾಟಕದ ಕೊಡಗಿಗೆ ತಂದು ನಿರ್ಜನ ಸ್ಥಳಗಳಲ್ಲಿ ಎಸೆಯಲಾಗಿತ್ತು.! ಪತ್ನಿಯೇ 8 ಕೋಟಿ ಆಸ್ತಿಗಾಗಿ ಇಬ್ಬರು ಪ್ರಿಯಕರರೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿಸಿದ್ದ ಸಂಚು ಬಯಲಾಗಿತ್ತು. ಆಸ್ತಿಗಾಗಿ ಪತಿಯನ್ನು ಕೊಲೆ ಮಾಡಿಸಿದ್ದ ಪತ್ನಿ ನಿಹಾರಿಕಾ ಬಳಿಕ ಕಾರಿನಲ್ಲಿ ಶವ ಇಟ್ಟುಕೊಂಡು ತೆಲಂಗಾಣದಿಂದ 900 ಕಿಮೀ ದೂರದ ಕೊಡಗಿಗೆ ಬಂದಿದ್ದಳು. ಶವ ಎಸೆದು ಪೆಟ್ರೋಲ್‌ನಿಂದ ಸುಟ್ಟುಹಾಕಿ ಪರಾರಿಯಾಗಿದ್ದಳು.
ಆರೋಪಿ ತಪ್ಪಿಸಿಕೊಂಡದ್ದು ಹೇಗೆ.!?
ಪ್ರಕರಣ ಸಂಬಂಧ ಮೃತ ರಮೇಶ್ ಪತ್ನಿ ನಿಹಾರಿಕಾ, ಆಕೆಯ ಪ್ರಿಯತಮ ನಿಖಿಲ್ ಹಾಗೂ ಇನ್ನೋರ್ವ ಆರೋಪಿ ಅಂಕುರ್‌ನನ್ನು ಬಂಧಿಸಲಾಗಿತ್ತು. ನಂತರ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು. ತನಿಖೆಯ ಭಾಗವಾಗಿ ಪೊಲೀಸರು ಆರೋಪಿ ಅಂಕುರ್ ಠಾಕೂರ್‌ನನ್ನ ತೆಲಂಗಾಣದ ಉಪ್ಪಲ್‌ನಲ್ಲಿ ಕೊಲೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಅರೋಪಿಯೊಂದಿಗೆ 13 ಜನ ಪೊಲೀಸರು ಸ್ಥಳ ಮಹಜರು ಮಾಡುವ ಸಂದರ್ಭದಲ್ಲಿ ಆರೋಪಿ ಅಂಕುರ್ ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಕೊಡಗು ಪೊಲೀಸರು ತೆಲಂಗಾಣದ ಉಪ್ಪಳ್ ಪೊಲೀಸ್ ಠಾಣೆಗೆ ದೂರು ನೀಡಿ ಅರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಒಂದು ತಂಡ ತೆಲಂಗಾಣದ ಸುತ್ತಮುತ್ತ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರೆ, ಮತ್ತೊಂದು ತಂಡ ದೆಹಲಿ ವಿಮಾನ ನಿಲ್ದಾಣದ ಬಳಿಯೂ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಎರಡರಿಂದ ಮೂರು ದಿನಗಳಲ್ಲಿ ಆರೋಪಿಯನ್ನು ಬಂಧಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.