ಮಹಿಳೆ-ಮಕ್ಕಳು-ಹಿಂದುಳಿದ ವರ್ಗಗಳ ಕಾನೂನುಗಳು ಸದುಪಯೋಗ ಆಗಬೇಕು : ನ್ಯಾ.ಮಂಜುನಾಥ ನಾಯಕ್

ಶಿವಮೊಗ್ಗ ದಸರಾ ಇಂದಿನ ಕಾರ್ಯಕ್ರಮ

ಮಹಿಳೆ-ಮಕ್ಕಳು-ಹಿಂದುಳಿದ ವರ್ಗಗಳ ಕಾನೂನುಗಳು ಸದುಪಯೋಗ ಆಗಬೇಕು : ನ್ಯಾ.ಮಂಜುನಾಥ ನಾಯಕ್

ಅಶ್ವಸೂರ್ಯ/ಶಿವಮೊಗ್ಗ : ಅಕ್ಟೋಬರ್ 04 : ಮಹಿಳೆಯರು ಮಕ್ಕಳು ಮತ್ತು ಹಿಂದುಳಿದ ವರ್ಗಗಳಿಗೆ ಸರ್ಕಾರ ಸಾಕಷ್ಟು ಕಾನೂನುಗಳನ್ನು ರೂಪಿಸಿದ್ದು ಈ ಕಾನೂನುಗಳ ಸದುಪಯೋಗ ಆಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯಕ್ ತಿಳಿಸಿದರು.
ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಸಿಮ್ಸ್ ಕಾಲೇಜಿನಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳು, ಲಿಂಗ ಆಯ್ಕೆ ನಿಷೇಧ(ಪಿಸಿಪಿಎನ್‌ಡಿಟಿ) ಕಾಯ್ದೆ 1994 ಹಾಗೂ ಪೋಕ್ಸೊ ಕಾಯ್ದೆ 2012 ರ ಕುರಿತಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು, ಮಕ್ಕಳು ಮತ್ತು ಹಿಂದುಳಿದವರಿಗಾಗಿ ರೂಪಿಸಲಾದ ಕಾನೂನುಗಳ ದುರುಪಯೋಗ ನಿಲ್ಲಬೇಕು. ಸದುಪಯೋಗ ಆಗಬೇಕು. ಎಲ್ಲರ ಸಹಕಾರದೊಂದಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಅವು ತಲುಪಬೇಕು ಎಂದು ಆಶಿಸಿದರು.

ಕಾನೂನು ಜಾರಿಗೊಳಿಸುವವರು ಕಾನೂನಿನ ಉದ್ದೇಶ ಅರಿತಾಗ ಮಾತ್ರ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ. ವೈದ್ಯರು ಸೇರಿದಂತೆ ಪಿಸಿಪಿಎನ್‌ಡಿಟಿ ಮತ್ತು ಪೋಕ್ಸೊ ಕಾಯ್ದೆ ಅನುಷ್ಟಾನಗೊಳಿಸುವ ಎಲ್ಲರೂ ಈ ಕಾಯ್ದೆಗಳನ್ನು ಸಮರ್ಪಕವಾಗಿ ತಿಳಿದುಕೊಳ್ಳಬೇಕು. ಮಕ್ಕಳ ಮೇಲಿನ ದೌರ್ಜನ್ಯ ಗಮನಕ್ಕೆ ಬಂದಾಗ ಸಂಬಂಧಿಸಿದ ಪೋಲೀಸರ ಗಮನಕ್ಕೆ ತರಬೇಕು. ದೌರ್ಜನ್ಯದ ಸಂಶಯ ಬಂದರೂ ಸಹ ವರದಿ ಮಾಡಬೇಕು. ಪೋಕ್ಸೋ ಕಾಯ್ದೆ ಕಲಂ 19 ರ ಪ್ರಕಾರ ಈ ರೀತಿ ವರದಿ ಮಾಡುವುದು ಕರ್ತವ್ಯವಾಗಿದೆ. ವರದಿ ಮಾಡದಿದ್ದರೆ ಕಲಂ 21 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗುತ್ತದೆ.
ಪೋಕ್ಸೋ ಕಾಯ್ದೆಯಡಿ ಸಂತ್ರಸ್ತೆ, ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದು, ವಿಚಾರಣೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ಮತ್ತು ಸಂವೇದನಾಶೀಲತೆಯಿಂದ ಅಧಿಕಾರಿಗಳು, ಸಿಬ್ಬಂದಿಗಳು ನಡೆದುಕೊಳ್ಳಬೇಕು. ಇದೊಂದು ಭಿನ್ನ ಅಪರಾಧ ಆದ ಕಾರಣ ಆರೋಗ್ಯ ಇಲಾಖೆಯ ಸುತ್ತೋಲೆಯಂತೆ ಅವರನ್ನು ಉಚರಿಸಬೇಕು. ಸಾಕ್ಷಿ ಹೇಳುವಾಗ ಸಹ ಸೂಕ್ಷ್ಮವಾಗಿರಬೇಕು. ನಮ್ಮ ಉದ್ದೇಶ ನ್ಯಾಯ ಒದಗಿಸುವುದು ಮಾತ್ರ ಆಗಿರುತ್ತದೆ. ಸಂತ್ರಸ್ತರ ಮನಸ್ಸಿಗೆ ನೋವಾಗದಂತೆ ಕಾನೂನು ಪ್ರಕ್ತಿಯೆಯನ್ನು ಎಚ್ಚರಿಕೆಯಿಂದ ಮಾಡಬೇಕೆಂದು ತಿಳಿಸಿದರು.
ಹೆಣ್ಣು ಭ್ರೂಣ ಹತ್ಯೆ ಒಂದು ದುಷ್ಕೃತ್ಯವಾಗಿದ್ದು, ಪಿಸಿಎನ್‌ಡಿಟಿ ಕಾಯ್ದೆ ಜಾರಿಯಿಂದ ಸಾಕಷ್ಟು ಸುಧಾರಣೆಯಾಗಿದೆ. ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಲಿಂಗಾನುಪಾತ 1000 ಪುರುಷರಿಗೆ 940 ಮಹಿಳೆ, ರಾಜ್ಯದಲ್ಲಿ 1000 ಕ್ಕೆ 973 ಮತ್ತು ಜಿಲ್ಲೆಯಲ್ಲಿ 1000 ಪುರುಷರಿಗೆ 991 ಲಿಂಗಾನುಪಾತವಿದ್ದು, ಇದನ್ನು ಸಮತೋಲನಗೊಳಿಸಲು ಇನ್ನಷ್ಟು ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್.ಎ.ಎಸ್ ಮಾತನಾಡಿ, ಒಂದು ಕೆಟ್ಟ ಆಚರಣೆ ಅಥವಾ ಪದ್ದತಿಯನ್ನು ಅಳಿಸಿ ಹಾಕಲು ಕಾನೂನನ್ನು ಜಾರಿ ಮಾಡಲಾಗುತ್ತದೆ. ಇಂತಹ ಒಂದು ಪದ್ದತಿ ಹೆಣ್ಣು ಭ್ರೂಣ ಹತ್ಯೆಯಾಗಿದೆ. ಇದೊಂದು ಹೇಯ ಮತ್ತು ಕ್ರೂರ ಕೃತ್ಯವಾಗಿದ್ದು, ಇದನ್ನು ತೊಡೆದುಹಾಕಲು ಪಿಸಿಪಿಎನ್‌ಡಿಟಿ 1994 ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

ಈ ಕಾಯ್ದೆ ಅನುಷ್ಟಾನದಿಂದ ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಶೇ.95 ರಷ್ಟು ಸಫಲವಾಗಿದ್ದೇವೆ. ಅನುಷ್ಟಾನದಲ್ಲಿ ಅಲ್ಲಿ ಇಲ್ಲಿ ಕೆಲ ಲೋಪದೋಷ ಮತ್ತು ತಪ್ಪು ಕಲ್ಪನೆಗಳಿದ್ದು ಅದನ್ನು ಹೋಗಲಾಡಿಸಲು ಇಂತಹ ತರಬೇತಿ ಹಮ್ಮಿಕೊಂಡಿದ್ದು ಈ ಮೂಲಕ ಸಮರ್ಪಕ, ಸಮಗ್ರ ಮಾಹಿತಿ ನೀಡಲಾಗುವುದು. ವೈದ್ಯರು, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ತಂತ್ರಜ್ಞರು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಡಿಹೆಚ್‌ಓ ಡಾ.ನಾಗರಾಜ್ ಮಾತನಾಡಿ, ಲಿಂಗ ಅನುಪಾತ ಸಮತೋಲನದಲ್ಲಿ ನಾವು ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡುತ್ತೇವೆ. ಈಗಲೂ ಗಂಡು ಬೇಕೆಂಬ ಬೇಡಿಕೆ ಇದೆ. ಆದರೆ ಮೊದಲಿನಷ್ಟು ಇಲ್ಲ. ಹರಿಯಾಣ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆ ಇದೆ. ಕೇರಳದಲ್ಲಿ ಹೆಣ್ಣಿನ ಸಂಖ್ಯೆ ಹೆಚ್ಚಿದೆ. ಹೆಣ್ಣಿಗೆ ಶಿಕ್ಷಣ ಮತ್ತು ಸುರಕ್ಷತೆಯ ವಾತಾವರಣ ನೀಡಬೇಕು ಎಂದ ಅವರು ಲಿಂಗಾನುಪಾತ ಸಮಗೊಳಿಸವುಲ್ಲಿ ನಾವೆಲ್ಲ ಒಗ್ಗೂಡಿ ಕೆಲಸ ಮಾಡೋಣ ಎಂದರು.
ಐಎಂಎ ಅಧ್ಯಕ್ಷ ಡಾ. ಶ್ರೀಧರ್ ಮಾತನಾಡಿ, ಪಿಸಿಪಿಎನ್‌ಡಿಟಿ ಕಾಯ್ದೆ ಮೊದಲಿಗಿಂತ ಹೆಚ್ಚಿನ ರೀತಿಯಲ್ಲಿ ಈಗ ಪರಿಣಾಮಕಾರಿಯಾಗಿದೆ. ಇದರ ಅನುಷ್ಟಾನದಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಿದೆ ಎಂದ ಅವರು ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕುಸುವ ನಿಟ್ಟಿನಲ್ಲಿ ವೈದ್ಯರು ಸೇರಿದಂತೆ ಎಲ್ಲ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೃಷ್ಣಪ್ಪ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಡಿವೈಎಸ್‌ಪಿ ಬಾಬು ಅಂಜನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರೂಪಣಾಧಿಕಾರಿ ಸಂತೋಷ್ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿ ಶಶಿರೇಖಾ, ರೇಡಿಯಾಲಜಿಸ್ಟ್ಗ ಳು, ವೈದ್ಯ ವಿದ್ಯಾರ್ಥಿಗಳು, ತಂತ್ರಜ್ಞರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!