ಆರೋಪಿ ನಟ ದರ್ಶನ್‍ಗೆ ವಿಡಿಯೋ ಕಾಲ್: ರೌಡಿಶೀಟರ್ ಬಂಧನ
ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ಜಾಮೀನಿನ ಮೇಲೆ ಹೊರಗೆ ಬಂದಿರುವ ರೌಡಿಶೀಟರ್ ಸತ್ಯ ಎಂಬಾತನೊಂದಿಗೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದು ಈಗ ದೊಡ್ಡ ಸುದ್ದಿಯಾಗಿದೆ , ಈ ಸಂಬಂಧ ರೌಡಿಶೀಟರ್ ಸತ್ಯನನ್ನು ಬ್ಯಾಡರಹಳ್ಳಿ ಠಾಣಾ ಪೊಲೀಸರು ಮಂಡ್ಯದಲ್ಲಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಆ.25ರಂದು ನಟ ದರ್ಶನ್ ರೌಡಿಶೀಟರ್ ಸತ್ಯನ ಜೊತೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು! ಕೂಡಲೇ ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಸತ್ಯನ ಹುಡುಕಾಟಕ್ಕೆ ಬ್ಯಾಡರಹಳ್ಳಿ ಠಾಣಾ ಪೊಲೀಸರು ಮುಂದಾಗಿದ್ದರು. ದರ್ಶನ್ ಜೊತೆಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ ಸತ್ಯನನ್ನು ಪೋಲಿಸರು ಮಂಡ್ಯದಲ್ಲಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದು ವಿಚಾರಣೆಗೆ ಒಳಪಡಿಸಿರುವುದಾಗಿ ತಿಳಿದು ಬಂದಿದೆ.
ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್‍ಗೆ ಪರಪ್ಪನ ಅಗ್ರಹಾರ ಜೈಲಿನೊಳಗೆ ರೌಡಿಶೀಟರ್ ಗಳ ಜೊತೆಗೆ ಸಂಪರ್ಕವಿದ್ದು,ಪರಪ್ಪನ ಅಗ್ರಹಾರ ಜೈಲಿನ ಉದ್ಯಾನವನದಲ್ಲಿ ಕುರ್ಚಿಯ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕೈನಲ್ಲಿ ಸಿಗರೇಟ್,ಟೀ ಕುಡಿಯುತ್ತಾ ರಾಜಾತಿಥ್ಯ ಲಭಿಸಿದೆ ಎಂದು ಸುದ್ದಿಯಾಗಿದೆ. ಈ ಆತಿಥ್ಯದ ಜೊತೆಗೆ ಜೈಲಿನ ಹೊರಗಿರುವ ವ್ಯಕ್ತಿಗೆ ವಿಡಿಯೋ ಕಾಲ್ ಮಾಡಿರುವುದು ಬಯಲಾಗಿದೆ.! ಇದು ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿದ್ದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳ ಲಂಚದ ರೆಂಜಿನ ರಾಜ ಆತಿಥ್ಯ ಆರೋಪಿಗಳಿಗೆ ಯಾವ ಮಟ್ಟಕ್ಕೆ ಸಿಗುತ್ತವೆ ಎನ್ನುವುದು ಬಯಲಾಗಿದೆ.
ಜೈಲಿನಲ್ಲಿರುವ ದರ್ಶನ್ ವಿಡಿಯೋ ಕಾಲ್ ಮಾಡಿದ್ದಾದರು ಹೇಗೆ ..?:
ದರ್ಶನ್ ವಿಡಿಯೋ ಕಾಲ್ ನಲ್ಲಿ ಜೈಲಿನಿಂದ ಮಾತನಾಡಿರುವುದು ಬ್ಯಾಡರಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಜಾನಿ ಯಾನೆ ಜನಾರ್ದನ್ ಎಂಬಾತನ ಮಗ ಸತ್ಯ. ಆತನಿಗೆ ಜೈಲಿನಿಂದ ವಿಡಿಯೋ ಕಾಲ್ ಮಾಡಿ ದರ್ಶನ್‍ರನ್ನು ತೋರಿಸಿದವನು ಕೂಡ ರೌಡಿಶೀಟರ್ ಮಾರ್ಕೆಟ್ ಧರ್ಮ.!
ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಮಾರಾಕಾಸ್ತ್ರಗಳಿಂದ ಹೊಡೆದು ಸತ್ಯ ಎಂಬಾತ ಜೈಲಿಗೆ ಹೋಗಿ ಜಾಮೀನು ಪಡೆದು ಹೊರಬಂದಿದ್ದ. ಹೊರಗೆ ಬಂದವನು ಮಾರ್ಕೆಟ್ ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ದರ್ಶನ್ ಇರುವುದು ನಮ್ಮ ಪಕ್ಕದ ಸೆಲ್‍ನಲ್ಲಿ ನಿನಗೂ ತೋರಿಸುತ್ತೀನಿ’ ಎಂದು ಸತ್ಯನಿಗೆ ಹೇಳಿದ್ದ ಮಾರ್ಕೆಟ್ ಧರ್ಮ ದರ್ಶನ್ ಕೈಯಲ್ಲಿ ಹಾಯ್ ಹೇಳಿಸಿದ್ದ.
ದರ್ಶನ್ ಜೊತೆಗೆ ಮಾತನಾಡಿದ ವಿಡಿಯೋ ಕಾಲ್ ತುಣುಕನ್ನು ಸತ್ಯ ತನ್ನ ಸಹಚರರಿಗೆ ವಾಟ್ಸಪ್ ಮೂಲಕ ಕಳುಹಿಸಿದ್ದ. ಈ ವಿಡಿಯೋ ತುಣುಕನ್ನು ಆತನ ಸಹಚರರ ವಾಟ್ಸಪ್ ಸ್ಟೇಟಸ್‍ನಲ್ಲಿ ಅಪ್‍ಲೋಡ್ ಮಾಡಿದ್ದರು. ಆದ್ದರಿಂದ ದರ್ಶನ್ ಜೊತೆಗಿನ ಆತನ ವಿಡಿಯೋ ಕಾಲ್ ಎಲ್ಲ ಕಡೆಗಳಲ್ಲಿ ವೈರಲ್ ಆಯಿತು ಎಂದು ತಿಳಿದುಬಂದಿದೆ.
ಎಲ್ಲೆಡೆ ವಿಡಿಯೋ ವೈರಲ್ ಆಗುತ್ತಿದ್ದಹಾಗೆ ದರ್ಶನ್ ರೆಸಾರ್ಟ್‍ನಲ್ಲಿದ್ದಾರೋ..!?ಜೈಲಿನಲ್ಲಿದ್ದಾರೋ ಎಂದು ಬಯಲಾದ ವಿಡಿಯೋ, ಪೋಟೊಗಳನ್ನು ನೋಡಿದವರು. ಜೈಲಿನಲ್ಲಿ ಈ ಮಟ್ಟದ ಆತಿಥ್ಯವಾ ಎಂದು ಮಾತನಾಡಿಕೊಳ್ಳುವಂತೆ ದೊಡ್ಡ ಸುದ್ದಿಯಾಗಿದೆ. ನಟ ದರ್ಶನ್‍ನ ಫೋಟೋ ಹಾಗೂ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಅವರು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದು, ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಜೈಲಿನಲ್ಲಿದ್ದಾರೋ ಅಥವಾ ರೆಸಾರ್ಟ್‍ನಲ್ಲಿದ್ದಾರೋ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದಿದ್ದಾರೆ.
ಜೈಲಿನಲ್ಲಿ ಆರೋಪಿಗಳಿಗೆ ರಾಜ್ಯಾತಿಥ್ಯ ದೊರೆಯುತ್ತಿದ್ದು ಆರೋಪಿಗಳು ಚರ್ಚೆ ಮಾಡಲು ಕುರ್ಚಿ ಟೇಬಲ್‍ಗಳನ್ನು ಹಾಕಲಾಗಿದೆ. ಟೀ ಕಪ್, ಸಿಗರೇಟ್‍ಗಳನ್ನು ಹಿಡಿದಿದ್ದಾರೆ ಎಂದು ಕಾಶಿನಾಥಯ್ಯ ಅಸಹನೆ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿಗಳ ತನಿಖೆಯ ಬಗ್ಗೆ ನಮಗೆ ನಂಬಿಕೆ ಇತ್ತು. ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಜೈಲಿನ ವಾತಾವರಣ ಗಾಬರಿಯಾಗುವಂತಿದೆ. ಕೈದಿಗಳಲ್ಲಿ ಶ್ರೀಮಂತ, ಬಡವ, ರಾಜಕಾರಣಿ ಎಂಬ ಬೇಧಭಾವ ಇರಬಾರದು. ಆದರೆ, ದರ್ಶನ್ ಪ್ರಕರಣದಲ್ಲಿ ಲೋಪವಾಗಿದೆ. ಮುಖ್ಯಮಂತ್ರಿಯವರು ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕಾಶಿನಾಥಯ್ಯ ಹೇಳಿದರು.
ಜೈಲಿನಲ್ಲಿ ರಾಜಾತಿಥ್ಯ ಇರುವುದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾತ್ರ ಅಂದುಕೊಳ್ಳಬೇಡಿ. ರಾಜ್ಯದ ಅಷ್ಟು ಜೈಲುಗಳ ಹಣೆಬರಹವು ಒಂದೆಯಾಗಿದೆ. ಹಣವಿದ್ದರೆ ಎಲ್ಲವೂ ಜೈಲಿನಲ್ಲಿ ಸಿಗುತ್ತದೆ ಎನ್ನುವುದು ಯಾವಾಗಲೂ ತಿಳಿದು ಬಂದಿದೆ. ಜೈಲೂಗಳು ಖೈದಿಗಳ ಮನಪರಿವರ್ತನೆ ಮಾಡಬೇಕಾದ ಸ್ಥಳವಾಗುವುದರ ಬದಲಾಗಿ ಪ್ರವಾಸಿ ತಾಣದಂತೆ ಗೋಚರಿಸುತ್ತಿದೆ