ಮಾಹಿತಿ ಮತ್ತು ತಂತ್ರಜ್ಞಾನದ ಸದ್ಬಳಕೆ ಮೂಲಕ ಅಭಿವೃದ್ದಿ : ಸುಪ್ರೀತ್
ಅಶ್ವಸೂರ್ಯ/ಶಿವಮೊಗ್ಗ : ಪ್ರಸ್ತುತ ಅಗಾಧವಾದ ಮಾಹಿತಿ ಮತ್ತು ತಂತ್ರಜ್ಞಾನ ನಮಗೆ ಲಭ್ಯವಿದ್ದು ಯುವಜನತೆ ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಮೂಲಕ ಅಭಿವೃದ್ದಿ ಹೊಂದಬಹುದು ಎಂದು ಮೈಸೂರಿನ ಪರಂಪರೆ-ಪರಿಸರ ಪಾಠಶಾಲಾ ಸಂಸ್ಥೆಯ ಸ್ಥಾಪಕರಾದ ಸುಪ್ರೀತ್ ಎಂ ಎಸ್ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಸೇಯೋ, ಬೆಂಗಳೂರು, ಕುವೆಂಪು ವಿಶ್ವವಿದ್ಯಾಲಯ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿರುವ ರಾಜ್ಯ ಮಟ್ಟದ ಗಾಂಧಿತತ್ವ ಪ್ರಣೀತ ಯುವಜನ ಶಿಬಿರದ 4 ನೇ ದಿನದಂದು(ಆ.12) ‘ಸೇವಾಸ್ಪಂದನ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
3 ‘ಟಿ’ ಕೌಶಲ್ಯಗಳಾದ ಟೂಲ್ಸ್, ಟೆಕ್ನಿಕ್ ಮತ್ತು ಟ್ಯಾಲೆಂಟ್ ಅಂದರೆ ಸಾಧನಗಳು, ತಾಂತ್ರಿಕತೆ ಮತ್ತು ಪ್ರತಿಭೆಯು ಬಹುಮುಖ್ಯವಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ಇವನ್ನು ಬಳಸಿಕೊಂಡು ಮುಂದೆ ಬರಬಹುದು.
ಭಾರತೀಯರಾದ ನಾವು ನಮ್ಮಲ್ಲೇ ತಯಾರಿಸಲಾದ ದೇಸೀ ಉತ್ಪನ್ನಗಳನ್ನು ಬಳಸುವ ಕಡೆ ಹೆಚ್ಚು ಗಮನ ಹರಿಸಬೇಕು ಹಾಗೂ ಈ ಮೂಲಕ ದೇಶದ ಆರ್ಥಿಕಾಭಿವೃದ್ದಿಗೆ ನಮ್ಮದೇ ಕೊಡುಗೆಗಳನ್ನು ನೀಡಲು ಮುಂದಾಗಬೇಕಿದೆ ಇದೇ ವೇಳೆ ಕರೆ ನೀಡಿದ ಅವರು ಅಂತರಾಷ್ಟ್ರೀಯ ಯುವ ದಿನಾಚರಣೆಯ ಶುಭ ಕೋರಿದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭ ಮರವಂತೆ ಮಾತನಾಡಿ, ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹಬಾಳ್ವೆ, ಸಂಯಮ ಮತ್ತು ಮಾತನಾಡುವ ಕೌಶಲ್ಯವನ್ನು ಅಭಿವೃದ್ದಿಪಡಿಸಿಕೊಳ್ಳಲು ಸೂಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಕನ್ನಡ ಭಾಷೆಯ ಸರಿಯಾದ ಉಚ್ಚಾರಣೆ, ಸಮನ್ವಯತೆಯನ್ನು ಅರ್ಥ ಮಾಡಿಕೊಂಡು ಬಳಸಬೇಕು. ಶಿಬಿರವು ಒಂದು ಶಿಸ್ತಿನ ವಾತಾವರಣವನ್ನು ಹೊಂದಿದ್ದು ಬೆಳಗಿನಿಂದ ರಾತ್ರಿವರೆಗೆ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುತ್ತಾರೆ. ವಿಶೇಷವಾಗಿ ಬೆಳಗಿನ ಸೌಂದರ್ಯ ಮತ್ತು ಉತ್ತಮ ಪರಿಸರವನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದರು.
ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ಭಾಗ್ಯ ಎಂ ಟಿ ಶಿಬಿರದ 4ನೇ ದಿನದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇದೇ ವೇಳೆ ಎನ್‌ಎಸ್‌ಎಸ್ ಶ್ರಮದಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಎಟಿಎನ್‌ಸಿಸಿ ಪ್ರಾಂಶುಪಾಲರಾದ ಪ್ರೊ ಮಮತ ಪಿ ಆರ್, ಎಟಿಎನ್‌ಸಿಸಿ ಕಾಲೇಜಿನ ಸಂಚಾಲಕ ಪ್ರೊ ಕೆ.ಎಂ.ನಾಗರಾಜ, ಶಿಬಿರಾಧಿಕಾರಿಗಳು, ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.