ಬೆಂಗಳೂರು: ತ್ರಿಮೂರ್ತಿಗಳ ಅಬ್ಬರಕ್ಕೆ ಗಲ್ಲಾಪೆಟ್ಟಿಗೆ ಧೂಳಿಪಟ.! ’45’ ಚಿತ್ರ ದಾಖಲೆಯ ಓಟ.!

news.ashwasurya.in
ಅಶ್ವಸೂರ್ಯ/ಬೆಂಗಳೂರು :ಹೊಸ ವರ್ಷದ ಆರಂಭದ ಮೊದಲೇ ಸ್ಯಾಂಡಲ್ವುಡ್ನಲ್ಲಿ ಸುನಾಮಿ ಎದ್ದಿದೆ.!ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ’45’ ಅದ್ಧೂರಿಯಾಗಿ ಬಿಡುಗಡೆಯಾಗಿ ರಾಜ್ಯಾದ್ಯಂತ ತೆರೆಕಂಡು ಅಬ್ಬರಿಸುತ್ತಿದೆ.! ಮೊದಲ ಪ್ರದರ್ಶನದಿಂದಲೇ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.
ಸಂಗೀತ ಲೋಕದಲ್ಲಿ ಮೋಡಿ ಮಾಡಿದ್ದ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಮೊದಲ ಪ್ರಯತ್ನದಲ್ಲೇ ಮೂವರು ಬಲಿಷ್ಠ ನಟರನ್ನು ತನ್ನ ಚಿತ್ರದಲ್ಲಿ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದು, ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದಾರೆ. ಚಿತ್ರದ ವಿನೂತನ ಕಥೆ ಮತ್ತು ನಿರೂಪಣೆ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.

ಬೆಂಗಳೂರು ನಗರದ ತ್ರಿವೇಣಿ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ನಗರ ಪಟ್ಟಣಗಳ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣವೆ ಸೃಷ್ಟಿಯಾಗಿದೆ.!ಸ್ವತಃ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡದೊಂದಿಗೆ ಆಗಮಿಸಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು. ಶಿವಣ್ಣನ ಎನರ್ಜಿ, ಉಪೇಂದ್ರ ಅವರ ವಿಭಿನ್ನ ಶೈಲಿ ಹಾಗೂ ರಾಜ್ ಬಿ ಶೆಟ್ಟಿಯವರ ನೈಸರ್ಗಿಕ ನಟನೆಗೆ ಅಭಿಮಾನಿಗಳು ತಲೆಬಾಗಿದ್ದಾರೆ.
ರಮೇಶ್ ರೆಡ್ಡಿ ಅವರ ನಿರ್ಮಾಣದ ಈ ಚಿತ್ರ 2025ರ ವರ್ಷಾಂತ್ಯಕ್ಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಬೂಸ್ಟ್ ನೀಡಿದೆ. ಟ್ರೈಲರ್ ಸೃಷ್ಟಿಸಿದ್ದ ಕುತೂಹಲಕ್ಕೆ ನ್ಯಾಯ ಒದಗಿಸಿರುವ ’45’, ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ಮುನ್ಸೂಚನೆ ನೀಡಿದೆ. ಕನ್ನಡಿಗರ ಪ್ರೀತಿಯನ್ನು ಬಾಚಿಕೊಳ್ಳುತ್ತಿರುವ ಈ ಸಿನಿಮಾ, ಹೊಸ ವರ್ಷದ ಸ್ವಾಗತಕ್ಕೆ ಸಜ್ಜಾಗಿರುವ ಸಿನಿಮಾ ಪ್ರಿಯರಿಗೆ ಒಳ್ಳೆಯ ಚಿತ್ರವೊಂದನ್ನು ನೋಡಿದ ಖುಷಿಯಾಗಿದೆ.


