
ಶಿವಮೊಗ್ಗ : ಸುಂದರ ನಗರ ನಿರ್ಮಾಣ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ವಿವಿಧ ಕಾಮಾಗಿರಗಳು : ಹೆಚ್ ಎಸ್ ಸುಂದರೇಶ್, ಸೂಡ ಅಧ್ಯಕ್ಷರು.
news.ashwasurya.in
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ನಗರವನ್ನು ಸುಂದರಗೊಳಿಸಲು ಹಾಗೂ ನಗರದ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಸೂಡಾ ವತಿಯಿಂದ ಪಾರ್ಕ್ಗಳ ಅಭಿವೃದ್ದಿ, ಕೆರೆಗಳ ಅಭಿವೃದ್ದಿ, ಅಪಾರ್ಟ್ಮೆಂಟ್ ನಿರ್ಮಾಣ ಹೀಗೆ ಸುಮಾರು ಅಂದಾಜು ವೆಚ್ಚ 500 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ನಗರದ ಗೋಪಾಳಗೌಡ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಹಾಗೂ ಫ್ರೀಡಂ ಪಾರ್ಕಿನಲ್ಲಿ ಓಪನ್ ಜಿಮ್ ಅವಳವಡಿಕೆ ಕಾಮಗಾರಿಗಳಿಗೆ ಗುರುವಾರ ಗುದ್ದಲಿಪೂಜೆ ನೆರವೇರಿಸಿದ ನಂತರ ಅವರು ಮಾತನಾಡಿದರು.
ನಗರದ ನಾಗರೀಕರು, ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈಗಾಗಲೇ 50 ಪಾರ್ಕ್ಗಳ ಉದ್ಘಾಟನೆ ಆಗಿದೆ. ಇನ್ನೂ 100 ಪಾರ್ಕ್ಗಳನ್ನು ಅಭಿವೃದ್ದಿಪಡಿಸುವ ಯೋಜನೆ ಇದೆ.
ಶಿವಮೊಗ್ಗ-ಭದ್ರಾವತಿ ವ್ಯಾಪ್ತಿಯಲ್ಲಿ ಅಂದಾಜು ರೂ.50 ಕೋಟಿ ರೂಪಾಯಿ ವೆಚ್ಚದಲ್ಲಿ 22 ಕೆರೆಗಳನ್ನು ಅಭಿವೃದ್ದಿ ಪಡಿಸುವ ಯೋಜನೆ ಸಿದ್ದಪಡಿಸಲಾಗಿದೆ. 10 ಕೆರೆಗಳ ಅಭಿವೃದ್ದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಹಾಗೂ ಇನ್ನುಳಿದ 12 ಕೆರೆಗಳ ಅಭಿವೃದ್ದಿಗೆ ಅಂದಾಜುಪಟ್ಟಿ ತಯಾರಿಸಲಾಗಿದೆ.


ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚುವುದು ಪ್ರಾಧಿಕಾರದ ಉದ್ದೇಶವಾಗಿದೆ. ಆದರೆ ನಗರದಲ್ಲಿ ಇತ್ತೀಚೆಗೆ ಭೂಮಿ ಸಿಗುತ್ತಿಲ್ಲ. ದರ ಹೆಚ್ಚಿರುವ ಕಾರಣ ಪ್ರಾಧಿಕಾರದ ವತಿಯಿಂದ ನಗರದಲ್ಲಿ 1000 ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ನೀಡುವ ಯೋಜನೆ ಇದೆ. ಊರುಗಡೂರಿನ 4 ಎಕರೆ ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಲು ಟೆಂಡರ್ ಕರೆಯಲು ಅನುಮೋದನೆಗೆ ಕಳುಹಿಸಲಾಗಿದೆ.

ಹಾಗೂ ಜೆ ಹೆಚ್ ಪಟೇಲ್ ಬಡಾವಣೆಯ ಒಂದೂಕಾಲು ಎಕರೆಯಲ್ಲಿ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆಯಿದ್ದು ಖಾಸಗಿ ಅಪಾರ್ಟ್ಮೆಂಟ್ನಲ್ಲಿರುವಂತೆ ಸ್ವಿಮ್ಮಿಂಗ್ ಪೂಲ್, ಪಾರ್ಕ್, ಕ್ಲಬ್ ಹೌಸ್, ಸಭಾಂಗಣ ಇತರೆ ಎಲ್ಲಾ ಸೌಲಭ್ಯ ಹೊಂದಿರುವ ರೂ.30 ರಿಂದ 40 ಲಕ್ಷ ಮೊತ್ತದಲ್ಲಿ 2 ಬಿಹೆಚ್ಕೆ ಮತ್ತು 50 ರಿಂದ 60 ಲಕ್ಷ ಮೊತ್ತದಲ್ಲಿ 3 ಬಿಹೆಚ್ಕೆ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಲಾಗುವುದು.
ಗೋಪಾಲಗೌಡ ಬಡಾವಣೆಯ ವಿವೇಕಾನಂದ ಬಡಾವಣೆಯಲ್ಲಿ ಒಂದೂಕಾಲು ಎಕರೆ ಜಾಗದಲ್ಲಿ 01 ಮಾಲ್ ಮತ್ತು ಸೋಮಿನಕೊಪ್ಪ 200 ರಸ್ತೆಯಲ್ಲಿ 01 ಒಟ್ಟು 02 ಮಾಲ್ಗಳನ್ನು ನಿರ್ಮಿಸುವ ಉದ್ದೇಶವಿದೆ.

ಹಾಗೂ ವಾಜಪೇಯಿ ಲೇಔಟಿನಲ್ಲಿ ಪ್ರಾಧಿಕಾರದ ಕಚೇರಿ ನಿರ್ಮಾಣ ಮಾಡುವ ಯೋಜನೆಯಿದೆ.
ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿನಿತ್ಯ ಸಾವಿರಾರು ಜನರು ವಾಯುವಿಹಾರಕ್ಕೆ ಬರುವುದರಿಂದ ಇಲ್ಲಿ ಓಪನ್ ಜಿಮ್ ನಿರ್ಮಿಸಿದರೆ ಅವರಿಗೆಲ್ಲ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ರೂ.25 ಲಕ್ಷ ವೆಚ್ಚದಲ್ಲಿ ಜಿಮ್ನ್ನು ಅಳವಡಿಸಲು ಗುದ್ದಲಿ ಪೂಜೆ ನೆರವೇರಿಸಿದ್ದು,

ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಗೋಪಾಳ 2ನೇ ಹಂತದಲ್ಲಿ ರೂ.2.5 ಕೋಟಿ ಮೊತ್ತದಲ್ಲಿ ಒಳಚರಂಡಿ(ಯುಜಿಡಿ)ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಹಾಗೂ ಗೋಪಾಳದ ಕೆಹೆಚ್ಬಿ ಕಾಲೋನಿಯ ಕನಕ ಸರ್ಕಲ್ ಬಳಿ ರೂ.5 ಲಕ್ಷ ಮೊತ್ತದ ಆಟೋ ಸ್ಟ್ಯಾಂಡ್, ವಿನೋಬನಗರದ ಶಿವಾಲಯ ಎದುರು ರೂ.5 ಲಕ್ಷ ಮೊತ್ತದಲ್ಲಿ ಆಟೋಸ್ಟ್ಯಾಂಡ್ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಾಲಿಕೆ ಮಾಜಿ ಮೇಯರ್ ನಾಗರಾಜ್ ಕಂಕಾರಿ ಮಾತನಾಡಿ, ಫ್ರೀಡಂ ಪಾರ್ಕಿನಲ್ಲಿ ಪ್ರತಿದಿನ ಸುಮಾರು 1 ಸಾವಿರ ಜನರು ವಾಕ್ ಮಾಡುತ್ತಾರೆ. ಇಂತಹ ಕಡೆ ಓಪನ್ ಜಿಮ್ ಅಳವಡಿಸಿದರೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಸೂಡಾ ಅಧ್ಯಕ್ಷರಿಗೆ ಮನವಿ ಮಾಡಿದ್ದು ಅವರು ಇಂದು ಜಿಮ್ ಅಳವಡಿಕೆಗೆ ಗುದ್ದಲಿ ಪೂಜೆ ನೆರವೇರಿಸಿರುವುದು ಸಂತಸ ವಿಷಯ. ಹಾಗೆಯೇ ಇಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೆ ಇನ್ನೂ ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಎಇ ಗಂಗಾಧರ್, ಎಇಇ ಬಸವರಾಜಪ್ಪ, ಕೆ ರಂಗನಾಥ್, ಫ್ರೀಡಂ ಪಾರ್ಕ್ ವಾಯುವಿಹಾರಿ ಮತ್ತು ಸಾಂಸ್ಕೃತಿಕ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.


