TOXIC
ಬೆಂಗಳೂರು : “ಟಾಕ್ಸಿಕ್” ನಿರ್ದೇಶಕಿ ಗೀತು ಮೋಹನ್ ದಾಸ್ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹೀಗೆ ಹೇಳಿದ್ರು.!?
ಅಶ್ವಸೂರ್ಯ/ಬೆಂಗಳೂರು : “ಟಾಕ್ಸಿಕ್” ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು ಮಾರ್ಚ್ 19 ರಂದು ಬೆಳ್ಳಿ ತೆರೆಗೆ ಅಪ್ಪಳಿಸಲಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ದಕ್ಷಿಣ ಮತ್ತು ಬಾಲಿವುಡ್ನ ದೊಡ್ಡ ತಾರಾಗಣವೇ ಇದೆ.ಪ್ರಮುಖವಾಗಿ ಐವರು ನಾಯಕಿಯರು ಈ ಚಿತ್ರದಲ್ಲಿ ನಟಿಸಿದ್ದಾರೆ. ಯಶ್ ಹುಟ್ಟುಹಬ್ಬದ ಈ ಸಮಯದಲ್ಲಿ “ಟಾಕ್ಸಿಕ್” ನಿರ್ದೇಶಕಿ ಗೀತೂ ಮೋಹನ್ದಾಸ್ ಹೇಳಿದ್ದೇನು? ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ..
ಯಶ್ ಹುಟ್ಟುಹಬ್ಬದಂದು ಟಾಕ್ಸಿಕ್ ನಿರ್ದೇಶಕಿ ಗೀತೂ ಮೋಹನ್ದಾಸ್ ಮಾತು..

ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ‘ರಾಕಿಂಗ್ ಸ್ಟಾರ್’ ಯಶ್ ಅವರಿಗೆ ಇಂದು 40ನೇ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿ ಅವರ ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ (Toxic) ತಂಡದಿಂದ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ಚಿತ್ರದ ಟೀಸರ್ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಬೆನ್ನಲ್ಲೇ, ಚಿತ್ರದ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಕುರಿತು ಬರೆದುಕೊಂಡಿರುವ ಭಾವುಕ ಪೋಸ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರತಿಭೆ ಮತ್ತು ಸೂಪರ್ ಸ್ಟಾರ್ ಡಮ್ ನ ಅಪರೂಪದ ಸಂಗಮವೆ ಯಶ್.!

ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ, ಅವರ ವ್ಯಕ್ತಿತ್ವ ಮತ್ತು ವೃತ್ತಿಪರತೆಯ ಬಗ್ಗೆ ಮೆಚ್ಚುಗೆಯ ಮಾತುಗಳ ಸುರಿಮಳೆ ಸುರಿಸಿದ್ದಾರೆ. “ಪ್ರತಿಭೆ ಮತ್ತು ಸೂಪರ್ ಸ್ಟಾರ್ ಡಮ್ ಈ ಎರಡರ ಅಪರೂಪದ ಸಮ್ಮಿಲನವೇ ಯಶ್. ಇದು ಅತ್ಯಂತ ಬಲಿಷ್ಠವಾದ ಕಾಂಬಿನೇಷನ್. ‘ಟಾಕ್ಸಿಕ್’ ಚಿತ್ರದಲ್ಲಿ ಅವರು ನಿಭಾಯಿಸಿರುವ ‘ರಾಯ’ ಎಂಬ ಪಾತ್ರದ ಅದ್ಭುತ ನಟನೆಯನ್ನು ಜಗತ್ತು ಇನ್ನೂ ನೋಡಬೇಕಿದೆ. ಆದರೆ, ಚಿತ್ರೀಕರಣದ ಪ್ರತಿ ದಿನವೂ ಅವರು ತೋರಿಸಿದ ಶಿಸ್ತು ಮತ್ತು ಸಿನಿಮಾದ ಮೇಲಿನ ಪ್ರೀತಿಯ ಬಗ್ಗೆ ನನಗೆ ಹೆಮ್ಮೆಯಿದೆ,” ಎಂದು ಗೀತು ಬಣ್ಣಿಸಿದ್ದಾರೆ.
‘ರಾಯ’ ಕೇವಲ ಪಾತ್ರವಲ್ಲ, ಅದೊಂದು ಕಲಾಕೃತಿ
ಯಶ್ ಅವರು ‘ಟಾಕ್ಸಿಕ್’ ಚಿತ್ರಕ್ಕಾಗಿ ಮಾಡಿರುವ ಸಿದ್ಧತೆಗಳ ಬಗ್ಗೆ ಮಾತನಾಡಿದ ಅವರು, “ಯಶ್ ಅವರು ಚಿತ್ರಕಥೆಯನ್ನು ಕೇವಲ ನಟನೆಯ ಮೂಲಕ ಪ್ರಸ್ತುತಪಡಿಸಲಿಲ್ಲ ಬದಲಾಗಿ ಆ ಪಾತ್ರವನ್ನು ತಮ್ಮ ಕಲಾತ್ಮಕ ಪರಂಪರೆಯಲ್ಲಿ ಒಂದು ಅಧ್ಯಾಯದಂತೆ ಕೆತ್ತಿದ್ದಾರೆ. ಅವರು ಕಥೆಯನ್ನು ಪ್ರಶ್ನಿಸಿದರು, ಸವಾಲು ಹಾಕಿದರು, ಅನ್ವೇಷಿಸಿದರು ಮತ್ತು ಕಥೆಯ ಸತ್ಯಕ್ಕೆ ಕಲೆಯು ಮುಖಾಮುಖಿಯಾದಾಗ ಸಂಪೂರ್ಣವಾಗಿ ಶರಣಾದರು,” ಎಂದು ಹೊಗಳಿದ್ದಾರೆ.

ನಿರ್ಮಾಪಕನಾಗಿ ಯಶ್ ಜವಬ್ದಾರಿ.:
ಯಶ್ ಕೇವಲ ನಟನಾಗಿ ಮಾತ್ರವಲ್ಲದೆ, ಓರ್ವ ನಿರ್ಮಾಪಕನಾಗಿಯೂ ಚಿತ್ರದ ಮೇಲೆ ಎಷ್ಟು ಜವಬ್ದಾರಿ ಹೊಂದಿದ್ದಾರೆ ಎಂಬುದನ್ನು ಗೀತು ವಿವರಿಸಿದ್ದಾರೆ. “ನಮ್ಮ ಸಹಯೋಗದ ಮೂಲಕ ನಾನು ಕೇವಲ ಕಥೆ ಹೇಳುವ ಆಳವನ್ನು ಮಾತ್ರವಲ್ಲದೆ, ಒಬ್ಬ ಅದ್ಭುತ ನಿರ್ಮಾಪಕನನ್ನು ಕಂಡುಕೊಂಡಿದ್ದೇನೆ. ಅವರ ಖ್ಯಾತಿಯ ಬಿರುಗಾಳಿಯ ನಡುವೆ, ಅವರೊಳಗಿರುವ ಗಂಭೀರವಾದ ಪ್ರತಿಭೆಯನ್ನು ಗುರುತಿಸುವುದು ಸುಲಭ. ಅವರ ಮುಂದಿನ ನಿರ್ದೇಶಕರು ಅವರೊಳಗಿನ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಧೈರ್ಯ ಮಾಡಲಿ ಎಂಬುದು ನನ್ನ ಆಸೆ. ನಮ್ಮಿಬ್ಬರ ಸ್ನೇಹ ಮತ್ತು ನಂಬಿಕೆ ಕ್ಯಾಮರಾ ಆಫ್ ಆದ ಮೇಲೂ ಮುಂದುವರಿಯುತ್ತದೆ,” ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
ನಕ್ಷತ್ರಗಳ ದಂಡು ಮತ್ತು ತಾಂತ್ರಿಕ ಶ್ರೀಮಂತಿಕೆ
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು ಮಾರ್ಚ್ 19 ರಂದು ಬೆಳ್ಳಿಪರದೆಗೆ ಅಪ್ಪಳಿಸಲಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ದಕ್ಷಿಣ ಮತ್ತು ಬಾಲಿವುಡ್ನ ದೊಡ್ಡ ತಾರಾಗಣವೇ ಇದೆ. ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಾಂತ್ರಿಕವಾಗಿ ಸಿನಿಮಾ ಅತ್ಯಂತ ಶ್ರೀಮಂತವಾಗಿ ಮೂಡಿಬರುತ್ತಿದ್ದು, ರಾಜೀವ್ ರವಿ ಅವರ ಸಿನಿಮಾಟೋಗ್ರಫಿ, ರವಿ ಬಸ್ರೂರ್ ಅವರ ಸಂಗೀತ ಮತ್ತು ಉಜ್ವಲ್ ಕುಲಕರ್ಣಿ ಅವರ ಸಂಕಲನ ಚಿತ್ರಕ್ಕಿದೆ. ಆಕ್ಷನ್ ದೃಶ್ಯಗಳಿಗಾಗಿ ಅಂತರಾಷ್ಟ್ರೀಯ ಮಟ್ಟದ ಸಾಹಸ ನಿರ್ದೇಶಕರಾದ ಜೆಜೆ ಪೆರ್ರಿ, ಅನ್ಬರಿವ್ ಮತ್ತು ಕೇಚಾ ಖಾಂಫಕ್ಡೀ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ಯಶ್ ಅವರ 40ನೇ ವರ್ಷದ ಹುಟ್ಟುಹಬ್ಬವು ‘ಟಾಕ್ಸಿಕ್’ ಮೂಲಕ ಹೊಸ ಇತಿಹಾಸ ಸೃಷ್ಟಿಸುವ ಮುನ್ಸೂಚನೆ ನೀಡಿದೆ. ಒಟ್ಟಿನಲ್ಲಿ, ಗೀತು ಮೋಹನ್ದಾಸ್ ಅವರು ‘ರಾಕಿಂಗ್ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಸಿಂಪಲ್ ಅಗಿ ಹೇಳದೇ ಅವರ ಗುಣಗಾನ ಮಾಡುವ ಮೂಲಕ ಹೊಸತನ ಮೆರೆದಿದ್ದಾರೆ.


