
ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಸಹಪಾಠಿಗಳಿಂದಲೇ ಎಸ್ಎಸ್ಎಲ್ಸಿ ವಿದ್ಯಾರ್ಥಿಯ ಹತ್ಯೆ.!
news.ashwasurya.in

ಶಿವಮೊಗ್ಗದ ಸೂಳೆಬೈಲಿನಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಬರುತ್ತಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್ ಎಂಬಾತನನ್ನು ಸಹಪಾಠಿಗಳು/ಇತರ ಬಾಲಕರು ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಫೆಬ್ರವರಿ 24, 2026 ರಂದು ನಡೆದಿದೆ. ಗೆಳೆಯನನ್ನು ಉಳಿಸಲು ಹೋದ ಸಂಕೇತ್ನ ಎದೆಗೆ ಬಲವಾಗಿ ಹೊಡೆದಿದ್ದರಿಂದ ಆತ ಕುಸಿದು ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ….
ಅಶ್ವಸೂರ್ಯ/ ಶಿವಮೊಗ್ಗ : ಶಿವಮೊಗ್ಗದ ಸೂಳೆಬೈಲು ಬಡಾವಣೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿ ಸಂಕೇತ್ (16) ಕೊಲೆಯಾಗಿದ್ದಾನೆ. ಸೂಳೆಬೈಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಂಕೇತ್ ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಹೊರಬಂದಾಗ ಇತರ ಕೆಲ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅವರ ಜಗಳವನ್ನು ಬಿಡಿಸಲು ಹೋದಾಗ ಸಂಕೇತ್ ಮೇಲೆ ನಾಲ್ವರು ವಿದ್ಯಾರ್ಥಿಗಳು ಮನಸ್ಸೊ ಇಚ್ಚೆ ಹಲ್ಲೆ ಮಾಡಿದ್ದಾರೆ. ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ ಸಂಕೇತ್ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ವಿಧ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆಗೊಳಗಾದ ಗಿರೀಶ್ ಹೇಳಿದ್ದೇನು?
ಸ್ಕೂಲಿಂದ ಹೊರಗಡೆ ಬಂದಾಗ ಫೀಲ್ಡ್ ಗೆ ಕರೆದುಕೊಂಡು ಹೋಗಿ ಐದಾರು ಜನರು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ನನಗೆ ಹೊಡೆತ ಬಿದ್ದ ತಕ್ಷಣ ಪ್ರಜ್ಞೆ ತಪ್ಪಿದಂತಾಯಿತು. ಪ್ರಜ್ಞೆ ಬಂದ ನಂತರ ಸಂಕೇತ ಕೆಳಗಡೆ ಬಿದ್ದಿದ್ದನ್ನು ನೋಡಿ ಸರ್ ಅವರನ್ನು ಕರೆದುಕೊಂಡು ಬಂದೆ. ಸರ್ ಕೂಡಲೇ ಸಂಕೇತ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಸೂಳೇಬೈಲು ಈದ್ಗಾ ನಗರದ ಹುಡುಗರಿಂದ ಹಲ್ಲೆ ನಡೆದಿದೆ. 10ನೇ ತರಗತಿ ಫೇಲ್ ಆಗಿರುವ ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ ಕುಳಿತುಕೊಂಡು ಗಲಾಟೆ ಮಾಡುತ್ತಾರೆ. ಶಾಲೆಯ ಹೆಡ್ ಮಾಸ್ಟರ್ ಇದ್ರೂ ಗಲಾಟೆ ಮಾಡ್ತಾರೆ. ಬೆಳಗ್ಗೆ 8:30 ಗೆ ಹೋದವರು ರಾತ್ರಿ 9:30ವರೆಗೂ ಶಾಲೆ ಇರುತ್ತದೆ. ಸ್ಪೆಷಲ್ ಕ್ಲಾಸ್ ಇರುವ ಹಿನ್ನೆಲೆಯಲ್ಲಿ ಪೋಷಕರು ಬಂದು ಕರೆದುಕೊಂಡು ಹೋಗುತ್ತಾರೆ ಎಂದು ಗಿರೀಶ್ ಹೇಳಿದ್ದಾನೆ.
ಪೊಲೀಸ್ ಇಲಾಖೆಯ ಬೇಜವಾಬ್ದಾರಿಯೇ ಕಾರಣ
ಇನ್ನು ಘಟನೆ ಕುರಿತು ಶಾಸಕ ಚನ್ನಬಸಪ್ಪ ಪ್ರತಿಕ್ರಿಯೆ ನೀಡಿದ್ದು, ರಾತ್ರಿ 9:30ವರೆಗೆ ಗಲಾಟೆ ನಡೆದು ಸಂಕೇತ ಸಾವನ್ನಪ್ಪಿದ್ದಾನೆ. ಹಲ್ಲೆಗೊಳಗಾದ ಗಿರೀಶ್ ಘಟನೆಯ ವಿಷಯಗಳನ್ನು ತಿಳಿಸುತ್ತಿದ್ದಾನೆ. ಶಾಲೆಯ ವಿದ್ಯಾರ್ಥಿಗಳಲ್ಲಿ ಗಲಾಟೆ ನಡೆಯುತ್ತಿರುತ್ತದೆ. ಶಾಲೆಯ ಶಿಕ್ಷಕರು ಮತ್ತು ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ಇದೆ ಎನ್ನುತ್ತಾರೆ. ಹಿಂದುಗಳ ಹಣವನ್ನು ಹೊರಲಿಕ್ಕೆ ಇರುವ ಪೊಲೀಸ್ ಇಲಾಖೆ ಇದೆಯಾ ಎಂದು ಪ್ರಶ್ನೆ ಮಾಡಿದರು.

9ನೇ ತರಗತಿ ಫೇಲ್ ಆದವರು ಬಂದು ಅಲ್ಲಿ ಆಟ ಆಡುತ್ತಾರೆ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದ ಶಾಸಕರು, ಪೊಲೀಸ್ ಇಲಾಖೆಯ ಬೇಜವಾಬ್ದಾರಿ ನಡೆಯಿಂದ ಸಂಕೇತನ ಜೀವ ಹೋಗಿದೆ. ಅಪ್ರಾಪ್ತನ ಹೆಸರು ಹೇಳಬೇಡಿ ಎನ್ನುತ್ತಾರೆ. ಹುಟ್ಟಬೇಕಾದರೆ ನಾವು ನಾಮಕರಣ ಮಾಡಿರುತ್ತೇವೆ ನಿಮ್ಮ ಕಾನೂನು ತೆಗೆದುಕೊಂಡು ಹೋಗಿ ತಿಪ್ಪೆ ಗುಂಡಿಗೆ ಬಿಸಾಕಿ ಎಂದು ಆಕ್ರೋಶ ಹೊರ ಹಾಕಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರು ಮಾಹಿತಿ ನೀಡಿದ್ದಾರೆ. ಮೃತ ಸಂಕೇತ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಂಕೇತ್ ಶಾಲೆಯಲ್ಲಿ ಒಳ್ಳೆಯ ವಿಧ್ಯಾರ್ಥಿಯಾಗಿದ್ದು ಓದಿನಲ್ಲೂ ಮುಂದಿದ್ದನಂತೆ.! ಈಗ ಮನೆಯ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ದಿಕ್ಕೆ ತೋಚದಂತಾಗಿದ್ದಾರೆ.


