ಒಂದೇ ಮಂಟಪದಲ್ಲಿ ನಡೆಯಿತು ಒಂದೇ ಕುಟುಂಬದ 14 ಗಂಡುಮಕ್ಕಳ ಮದುವೆ ಒಂದೇ ಮಂಟಪದಲ್ಲಿ.!! ವೀಡಿಯೋ ವೈರಲ್.!
news.ashwasurya.in
ಅಶ್ವಸೂರ್ಯ/ಮಧ್ಯಪ್ರದೇಶ : ಇತ್ತೀಚಿನ ದಿನಗಳಲ್ಲಿ ಮದುವೆ ಎಂದ ತಕ್ಷಣ ಅದ್ಧೂರಿಯಾಗಿ ಮಾಡುವ ಸಲುವಾಗಿ ಹೆಚ್ಚು ಖರ್ಚು ಮಾಡಿ ಹಣವನ್ನು ವ್ಯರ್ಥ ಮಾಡುತ್ತಿರುವವರೆ ಹೆಚ್ಚು, ಇನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾಲದ ಸಿಲುಕಿ ಒದ್ದಾಡುವವರ ಮಧ್ಯೆ. ಮಧ್ಯಪ್ರದೇಶದಲ್ಲಿ ನಡೆದ ಅಪರೂಪದ ಮದುವೆಯ ವೀಡಿಯೋವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಜಂಟಿ ರೈತ ಕುಟುಂಬವೊಂದು ಒಂದೇ ಮಂಟಪದಲ್ಲಿ ತಮ್ಮ ಕುಟುಂಬದ 14 ಮಂದಿ ಗಂಡು ಮಕ್ಕಳಿಗೆ ಮದುವೆ ಮಾಡಿಸುವ ಮೂಲಕ ಮದುವೆಗೆ ತಗಲುವ ಹೆಚ್ಚು ಪ್ರಮಾಣದ ಖರ್ಚನ್ನು ಉಳಿಸಿದ್ದಾರೆ.
ಈ ರೈತ ಕುಟುಂಬ ತಮ್ಮ ಜೀವನಾಧಾರವಾಗಿರುವ ಕೃಷಿ ವಾಹನವನ್ನೇ ಮದುವೆಯ ರಥವನ್ನಾಗಿ ಮಾಡಿಕೊಂಡಿದ್ದು, ಟ್ರ್ಯಾಕ್ಟರ್ ಟ್ರಾಲಿಯನ್ನು ವಿಶೇಷವಾಗಿ ಅಲಂಕರಿಸಿದ್ದಾರೆ. ಬಳಿಕ ಅದರಲ್ಲಿ ಇಡೀ 14 ಜನ ವರರು-ವಧುಗಳು ಒಟ್ಟಿಗೆ ಕುಳಿತು ಮದುವೆ ಮಂಟಪಕ್ಕೆ ರಾಜಗಾಂಭೀರ್ಯದಿಂದ ಎಂಟ್ರಿ ಕೊಟ್ಟಿದ್ದಾರೆ.
ಈ ಅಪರೂಪದ ದೃಶ್ಯವನ್ನು ನೋಡಲು ಇಡೀ ಊರಿನ ಜನ ನೆರೆದಿದ್ದರು. ಮದುವೆಯ ಎಲ್ಲ ಶಾಸ್ತ್ರಗಳು ಮುಗಿದ ನಂತರ, ಹೊಸ ಬದುಕಿಗೆ ಹೆಜ್ಜೆ ಇಟ್ಟ 14 ಹೆಣ್ಣುಮಕ್ಕಳು ಮತ್ತೊಂದು ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಅತ್ಯಂತ ಸರಳವಾಗಿ, ಯಾವುದೇ ಆಡಂಬರವಿಲ್ಲದೆ ಗಂಡನ ಮನೆಗೆ ಮರಳಿದ್ದಾರೆ.
ಒಂದೇ ಮಂಟಪದಲ್ಲಿ ಇಡೀ ಕುಟುಂಬದ 14 ಜೋಡಿಗಳು ಹೊಸ ಬದುಕಿಗೆ ಹೆಜ್ಜೆ ಇಟ್ಟಿರುವುದು ಇಡೀ ಜಿಲ್ಲೆಯ ಜನರಲ್ಲಿ ಅಚ್ಚರಿ ಮೂಡಿಸಿದ್ದು, ಮದುವೆಗೆ ಬಂದಿದ್ದ ಅತಿಥಿಗಳು ಕೂಡ ಕುಟುಂಬದ ಈ ನಿರ್ಧಾರವನ್ನು ಮೆಚ್ಚಿಕೊಂಡಿದ್ದಾರೆ .
ಇನ್ನು ವೀಡಿಯೋ ವೈರಲ್ ಆದ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆಗಳು ನಡೆಯುತ್ತಿದ್ದು, ಇದು ಬರೀ ಹಣ ಉಳಿಸುವ ಮದುವೆಯಲ್ಲ, ಬದಲಿಗೆ ಮದುವೆಯ ಹೆಸರಿನಲ್ಲಿ ಸಾಲದ ಸುಳಿಗೆ ಸಿಲುಕುವ ಲಕ್ಷಾಂತರ ಮಧ್ಯಮ ವರ್ಗದ ಕುಟುಂಬಗಳಿಗೆ ಕಣ್ಣು ತೆರೆಸುವಂತಹ ಪಾಠವಿದ್ದಂತೆ ಎಂದು ನೆಟ್ಟಿಗರು ಈ ರೈತ ಕುಟುಂಬದ ಜಾಣ್ಮೆಗೆ ಸಲಾಂ ಎನ್ನುತ್ತಿದ್ದಾರೆ.


