

BREAKING NEWS : ರಾಜ್ಯ ಸರ್ಕಾರದಿಂದ 31 ಮಂದಿ ತಹಶೀಲ್ದಾರ್ ಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

news.ashwasurya.in
ಅಶ್ವಸೂರ್ಯ/ಬೆಂಗಳೂರು: ರಾಜ್ಯ ಕಂದಾಯ ಇಲಾಖೆಯಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳ ಭಾರಿ ಮಟ್ಟದ ಸ್ಥಳನಿಯುಕ್ತಿ ಹಾಗೂ ವರ್ಗಾವಣೆ ಮಾಡಲಾಗಿದೆ. ಸರ್ಕಾರ ಹೊರಡಿಸಿರುವ ಆದೇಶದಂತೆ ಒಟ್ಟು 31 ಅಧಿಕಾರಿಗಳಿಗೆ ಹೊಸ ಹುದ್ದೆ ಹಾಗೂ ಸ್ಥಳಗಳನ್ನು ನಿಗದಿಪಡಿಸಲಾಗಿದ್ದು, ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಭಾಗ-2ರಲ್ಲಿ 21 ಮಂದಿ ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳನ್ನು ವಿವಿಧ ತಾಲೂಕುಗಳು, ಉಪವಿಭಾಗಾಧಿಕಾರಿಗಳ ಕಚೇರಿಗಳು, ವಿಶೇಷ ತಹಶೀಲ್ದಾರ್ ಹುದ್ದೆಗಳು ಹಾಗೂ ಜಿಲ್ಲಾ ತರಬೇತಿ ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿದೆ. ಅದೇ ವೇಳೆ, ಭಾಗ-3ರಲ್ಲಿ ಸ್ಥಳ ನಿರೀಕ್ಷೆಯಲ್ಲಿದ್ದ 7 ಮಂದಿ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳಿಗೆ ವಿವಿಧ ಜಿಲ್ಲೆಗಳಲ್ಲಿ ಹೊಸ ನಿಯೋಜನೆ ನೀಡಲಾಗಿದೆ.
ಕಲಬುರಗಿ, ವಿಜಯಪುರ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಮೈಸೂರು, ಕೋಲಾರ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ತಹಶೀಲ್ದಾರ್ಗಳ ವರ್ಗಾವಣೆ ನಡೆದಿದೆ. ಕೆಲವು ಅಧಿಕಾರಿಗಳ ಹಿಂದಿನ ವರ್ಗಾವಣೆ ಆದೇಶಗಳನ್ನು ಸರ್ಕಾರ ತಿದ್ದುಪಡಿ ಅಥವಾ ರದ್ದುಪಡಿಸಿದ್ದು, ಕೆಲವರನ್ನು ಈಗಿರುವ ಹುದ್ದೆಯಲ್ಲೇ ಮುಂದುವರಿಸಲಾಗಿದೆ.
ಹಾಸನ ತಾಲೂಕು ಕಚೇರಿಯ ತಹಶೀಲ್ದಾರ್ ಗ್ರೇಡ್-2 ಎಂ.ಎ. ನಾಗರಾಜ್ ಅವರ ಹಿಂದಿನ ವರ್ಗಾವಣೆ ಆದೇಶವನ್ನು ಸರ್ಕಾರ ರದ್ದುಪಡಿಸಿ, ಅದೇ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡಿದೆ. ಭದ್ರಾವತಿ, ದೇವರ ಹಿಪ್ಪರಗಿ, ಬಂಗಾರಪೇಟೆ, ಕಮಲಾಪುರ, ಹಾನಗಲ್ ಸೇರಿದಂತೆ ಹಲವು ತಾಲೂಕುಗಳಿಗೆ ಹೊಸ ತಹಶೀಲ್ದಾರ್ಗಳನ್ನು ನಿಯೋಜಿಸಲಾಗಿದೆ.
ಸರ್ಕಾರದ ಆದೇಶದ ಪ್ರಕಾರ, ವರ್ಗಾವಣೆಗೊಂಡ ಹಾಗೂ ಸ್ಥಳನಿಯುಕ್ತಿಗೊಂಡ ಅಧಿಕಾರಿಗಳು ತಕ್ಷಣವೇ ಹೊಸ ಹುದ್ದೆಗಳಲ್ಲಿ ಅಧಿಕಾರ ಸ್ವೀಕರಿಸಿ, ಸಿಟಿಸಿ (Charge Transfer Certificate) ವರದಿಯನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಇ-ಮೇಲ್ ಮೂಲಕ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಸ್ಥಳ ನಿರೀಕ್ಷೆಯಲ್ಲಿದ್ದ ಅಧಿಕಾರಿಗಳು ಮೊದಲು ಕಂದಾಯ ಇಲಾಖೆ (ಸೇವೆಗಳು-3) ಶಾಖೆಯಲ್ಲಿ ಕಾರ್ಯವರದಿ ಮಾಡಿಕೊಳ್ಳುವಂತೆ ನಿರ್ದೇಶಿಸಲಾಗಿದೆ.
ರಾಜ್ಯ ಕಂದಾಯ ಇಲಾಖೆಯ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಈ ವರ್ಗಾವಣೆ ಮತ್ತು ಸ್ಥಳನಿಯುಕ್ತಿ ಆದೇಶ ಹೊರಡಿಸಲಾಗಿದೆ. ಹೊಸ ಹುದ್ದೆಗಳಿಗೆ ನಿಯೋಜನೆಯಾದ ಅಧಿಕಾರಿಗಳು ತಕ್ಷಣವೇ ಕರ್ತವ್ಯಕ್ಕೆ ಹಾಜರಾಗುವಂತೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ.








