T20W : ಭಾರತ ತಂಡದ ವಿರುದ್ಧ ಸೋಲು, ತಪ್ಪಿದ ಸೆಮಿಫೈನಲ್ ಹಾದಿ, ಅಂತರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿಧಾಯ ಹೇಳಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್
ಅಶ್ವಸೂರ್ಯ/ಶಿವಮೊಗ್ಗ: ಆಸ್ಟ್ರೇಲಿಯಾದ ನಂಬಿಕೆಯ ಬ್ಯಾಟ್ಸ್‌ಮನ್ ವಿಶ್ವ ಕಂಡ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮ್ಯಾನ್ ಡೇವಿಡ್ ವಾರ್ನರ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟಿ20 ವಿಶ್ವಕಪ್ 2024ರ ಟೂರ್ನಿಯಿಂದ ಆಸ್ಟ್ರೇಲಿಯಾ ತಂಡ ಹೊರಬೀಳುತ್ತಿದ್ದಂತೆ ವಾರ್ನರ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಈ ಟೂರ್ನಿ ಆರಂಭಕ್ಕೂ ಮುನ್ನವೇ ಡೇವಿಡ್ ವಾರ್ನರ್ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು. ಚುಟುಕು ವಿಶ್ವ ಕ್ರಿಕೆಟ್ ನ ಕಪ್ ಗೆದ್ದು ವಿಧಾಯ ಹೇಳಬೇಕೆಂದು ಕೊಂಡಿದ್ದ ವಾರ್ನರ್ ಆಸೆ ನಿರಾಸೆಯಾಗಿದೆ. ಇದೀಗ ಆಸಿಸ್ ತಂಡ ಭಾರತ ತಂಡದ ವಿರುದ್ಧ ಸೋತು ಸೆಮಿಫೈನಲ್ ಹಾದಿ ಕೈಚೆಲ್ಲುತ್ತಿದ್ದಂತೆ ಡೇವಿಡ್ ವಾರ್ನರ್ ತಮ್ಮ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
ಈ ಮೊದಲು 2023ರ ಏಕದಿನ ವಿಶ್ವಕಪ್ ಅನ್ನು ಗೆದ್ದ ನಂತರ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಗೆ ಡೇವಿಡ್ ವಾರ್ನರ್ ವಿಧಾಯ ಹೇಳಿದ್ದರು. ಇದೀಗ 2024ರ T20 ಚುಟುಕು ವಿಶ್ವಕಪ್ ಕ್ರಿಕೆಟ್ ಪಂದಾವಳಿಯಿಂದ ಆಸ್ಟ್ರೇಲಿಯಾ ತಂಡ ಹೊರಬೀಳುತ್ತಿದ್ದಂತೆ ವಾರ್ನರ್ ಅಂತರಾಷ್ಟ್ರೀಯಾ ಕ್ರಿಕೆಟ್‌ಗೂ ಗುಡ್ ಬೈ ಹೇಳಿದ್ದಾರೆ.
ಭಾರತದ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಆಸಿಸ್ ಪರ ಡೇವಿಡ್ ತಮ್ಮ ಕೊನೆಯ ಪಂದ್ಯನ್ನು ಆಡಿದರು. 6 ಎಸೆತಗಳಲ್ಲಿ ಕೇವಲ 6 ರನ್ ಗಳಿಸಿದ್ದರು. ಈ ಮೂಲಕ ಆಸಿಸ್ ತಂಡ ಭಾರತದ ಎದುರು ಸೋಲಿಗೆ ಶರಣಾಯಿತು. ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನ ತಂಡ ಭರ್ಜರಿ ಪ್ರದರ್ಶನ ನೀಡುವ ಮೂಲಕ ಸೆಮಿಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡಿತು. ಈ ಮೂಲಕ ಆಸಿಸ್ ತಂಡ ಟೂರ್ನಿಯಿಂದ ಹೊರಬಿದ್ದಿದ್ದು. ಡೇವಿಡ್‌ಗೆ ಭಾರತ ವಿರುದ್ಧದ ಪಂದ್ಯ ಕೊನೆಯ ಪಂದ್ಯವಾಗಿದೆ.
2009ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ವಾರ್ನರ್, 15 ವರ್ಷಗಳ ಕಾಲ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯಾ ಪರ 112 ಟೆಸ್ಟ್, 161 ODI ಮತ್ತು 110 T20 ಗಳನ್ನು ಡೇವಿಡ್ ವಾರ್ನರ್ ಆಡಿದ್ದಾರೆ.
ಇವರು ಆಡಿರುವ ಒಟ್ಟು 112 ಟೆಸ್ಟ್ ಪಂದ್ಯಗಳಲ್ಲಿ 8786 ರನ್ ಕಲೆಹಾಕಿದ್ದಾರೆ ಡೇವಿಡ್ ವಾರ್ನರ್ ಇನ್ನೂ 161 ಏಕದಿನ ಪಂದ್ಯವನ್ನು ಆಡಿ 6932 ರನ್ ಗಳಿಸಿದ್ದಾರೆ ಹಾಗೂ 110 T20 ಗಳನ್ನು ಆಡಿರುವ ವಾರ್ನರ್ 3277 ರನ್ ಕಲೆ ಹಾಕಿದ್ದಾರೆ.
ವಿಶ್ವ ಕ್ರಿಕೆಟ್ ಲೋಕದಲ್ಲಿ ತನ್ನದೆ ಚಾಪು ಮೂಡಿಸಿ ಉತ್ತಮ ಪ್ರದರ್ಶನ ನೀಡಿರುವ ವಾರ್ನರ್ ವಿಶ್ವದ ಮೂಲೆ ಮೂಲೆಯಲ್ಲೂ ಅಭಿಮಾನಿಗಳನ್ನು ಹೊಂಡಿದ್ದಾರೆ.
ಇನ್ನು ಮುಂದೆ ಫ್ರಾಂಚೈಸಿ ಕ್ರಿಕೆಟ್ ಪಂದ್ಯಾವಳಿಗಳನ್ನು ಮಾತ್ರ ಡೇವಿಡ್ ಆಡಲಿದ್ದು. ಮಾಜಿ ಕ್ರಿಕೆಟಿಗರು ಮತ್ತು ಸಹ ಆಟಗಾರರು ವಾರ್ನರ್ ನಿವೃತ್ತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ವಿಶ್ವದ ಶ್ರೇಷ್ಠ ಕ್ರೆಕೆಟಿಗನೊಬ್ಬ ಸುದೀರ್ಘ ಕ್ರಿಕೆಟ್ ಬದುಕಿಗೆ ಅಂತ್ಯ ಹಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳನ್ನು ವಿಶ್ವದಾದ್ಯಂತ ಹೊಂದಿರುವ ಡೇವಿಡ್ ವಾರ್ನರ್ ಅವರ ಕ್ರಿಕೆಟ್ ಜೀವನದ ವಿಧಾಯದ ವಿಷಯವನ್ನು ಕೇಳಿ ಅಭಿಮಾನಿಗಳು ಮೌನಕ್ಕೆ ಜಾರಿದ್ದಾರೆ..