ಶಾಲಾ ಸಮವಸ್ತ್ರ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ : ಶಿಕ್ಷಣ ಸಚಿವ ಮಧು ಬಂಗಾರಪ್ಪ
ಶಾಲೆಗಳಲ್ಲಿ ಇನ್ನುಮುಂದೆ ಯಾವುದೇ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳುವಂತಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದಲೆ ಈ ಆದೇಶ ಜಾರಿಗೆ ಬರಲಿದೆ. ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ನವರು ಶಿವಮೊಗ್ಗದಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
news.ashwasurya.in
ಈಗಾಗಲೇ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಸಮವಸ್ತ್ರ ಧರಿಸದಂತೆ ನಿಷೇಧಕ್ಕೆ ಸಂಬಂದಿಸಿದಂತೆ ವಿಚಾರಣೆ ನ್ಯಾಯಾಲಯದ ಹಂತದಲ್ಲಿ ನಡೆಯುತ್ತಿದೆ. ಈಗ ನಿಷೇಧವನ್ನು ವಾಪಸ್ ಪಡೆಯಬೇಕೋ, ಬೇಡವೋ ಎಂಬ ಬಗ್ಗೆ ಸಿಎಂ ಯಾವಾಗ ಸಭೆ ನಿಗದಿ ಮಾಡುತ್ತಾರೋ ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ಧಿ ಗೋಷ್ಠಿಯಲ್ಲಿ ಹೇಳಿದರು.
ಶಿವಮೊಗ್ಗ (ಡಿ.25): ನಾವು ಚುನಾವಣೆಗೆ ಸಂಧರ್ಭದಲ್ಲಿ ಅಧಿಕಾರಕ್ಕೆ ಬರುವ ಮೊದಲೇ ಘೋಷಣೆ ಮಾಡಿದಂತೆ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇನ್ನುಳಿದಂತೆ ಯುವನಿಧಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದ್ದು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜನವರಿ 12 ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಯುವನಿಧಿಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತ ಸ್ವಾಮಿ ವಿವೇಕಾನಂದ ಜಯಂತಿ ದಿನವಾದ ಜ.12ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಚಾಲನೆ ದೊರೆಯಲಿದೆ . ಚಾಲನೆಗೆ ಖುದ್ದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೆ ಆಗಮಿಸುತ್ತಿದ್ದಾರೆ.
ಡಿ.26ರಿಂದಲೇ ಯುವನಿಧಿ ಫಲಾನುಭವಿಗಳ ನೋಂದಣಿ ಕಾರ್ಯ ಆರಂಭವಾಗಲಿದೆ. ನೋಂದಣಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕುವುದರೊಂದಿಗೆ ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಅಂದು ಶಿವಮೊಗ್ಗದಲ್ಲಿ ನೆಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೋತೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉನ್ನತ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಸಚಿವ ಸಂಪುಟದ ಹಲವಾರು ಸಚಿವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಸರ್ಕಾರದಿಂದ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳ ಸೌಲಭ್ಯ ಇನ್ನಷ್ಟೂ ಫಲಾನುಭವಿಗಳಿಗೆ ತಲುಪಿಲ್ಲವೋ, ಅದರ ವಿಷಯವಾಗಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪರಿಶೀಲಿಸಿ ಪರಿಹರಿಸಲಾಗುತ್ತಿದೆ. ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳೇ ಹೋಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು. ಶಕ್ತಿ ಯೋಜನೆಯಡಿ ಸರ್ಕಾರಿ ಬಸ್ ತಲುಪದ ಊರಿಗೆ ಬಸ್ ಸಂಚಾರ ಆರಂಭಿಸುವ ಬಗ್ಗೆ ಗಮನಹರಿಸಲಾಗುತ್ತಿದೆ. ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ರಾಜ್ಯಮಟ್ಟದಲ್ಲಿ ಸಾರಿಗೆ ಸಚಿವರು ಚರ್ಚೆ ನಡೆಸಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿ ಕೆಲವು ಊರುಗಳಿಗೆ ಬಸ್ ವ್ಯವಸ್ಥೆ ಕಲ್ಫಿಸಲಾಗುವುದು ಎಂದರು.
ಶಾಲೆಯನ್ನು ಮಕ್ಕಳ ಮೂಲಕ ಸ್ವಚ್ಛಗೊಳಿಸುವ ಹಾಗಿಲ್ಲ: ಸರ್ಕಾರಿ ಶಾಲೆಗಳನ್ನು ಮಕ್ಕಳ ಮೂಲಕ ಸ್ವಚ್ಛಗೊಳಿಸುವ ಹಾಗಿಲ್ಲ. ಈ ಬಗ್ಗೆ ಸ್ಪಷ್ಟವಾಗಿ ಸೂಚಿಸಲಾಗಿದೆ. ಈ ರೀತಿಯ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಂಡರೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ಡಿ ದರ್ಜೆ ನೌಕರರ ಮೂಲಕ ಈ ಕೆಲಸ ಮಾಡಿಸಬೇಕು. ಅಗತ್ಯ ಬಿದ್ದರೆ ಪ್ರತಿ ಶಾಲೆಯಲ್ಲಿ ಡಿ ದರ್ಜೆ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ನೆಲದ ಮೇಲೆ ಕುಳಿತು ಪಾಠ ಕೇಳುವಂತಿಲ್ಲ: ಶಾಲಾ ಮಕ್ಕಳು ನೆಲದ ಮೇಲೆ ಕುಳಿತು ಪಾಠ ಕೇಳಬಾರದು. ಇದಕ್ಕಾಗಿ ಎಲ್ಲ ಶಾಲೆಗಳಿಗೂ ಅಗತ್ಯವಾದ ಡೆಸ್ಕ್ ಸೌಲಭ್ಯ ಕಲ್ಪಿಸಲಾಗುವುದು. ಇನ್ನೆರಡು ವರ್ಷದಲ್ಲಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಶಾಲೆಗಳ ಮಕ್ಕಳಿಗೆ ಕಡ್ಡಾಯವಾಗಿ ಡೆಸ್ಕ್ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬೇಕು ಅಂದಿತ್ತು. ಬಿಜೆಪಿಯವರು ಬೇಡ ಅಂದಿದ್ರು. ಸರ್ಕಾರ ಬಂದ ಕಾರಣಕ್ಕೆ ಕೆಲವರು ಹಿಜಾಬ್ ಹಿಜಾಬ್ ಬಗ್ಗೆ ಕೇಳಿದ್ದಾರೆ ನಿಷೇಧ ವಾಪಸ್ ಪಡೆಯುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ತೀರ್ಮಾನ ಕೂಡ ಮಾಡಿಲ್ಲ. ಸದ್ಯಕ್ಕೆ ಸಮವಸ್ತ್ರದ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೊದಲಿನಂತೆ ನಡೆಯುತ್ತದೆ. ಮಕ್ಕಳು ಯಾವುದೇ ಗೊಂದಲಕ್ಕೆ ಒಳಗಾಗುವುದು ಬೇಡ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆರ್.ಪ್ರಸನ್ನಕುಮಾರ್, ಎಸ್.ಪಿ. ದಿನೇಶ್ ಮತ್ತು ಇನ್ನಿತರ ಕಾಂಗ್ರೆಸ್ ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು