ಹೆಂಡತಿ ಮೇಲೆ ಸಂಶಯ.! ಆಡಿಯೋ ಕೇಳಿದ ಗಂಡನಿಂದ ಹೆಂಡತಿಯ ಬರ್ಬರ ಹತ್ಯೆ.!
ಅಶ್ವಸೂರ್ಯ/ಶಿವಮೊಗ್ಗ: ಹೆಂಡತಿಯ ಮೇಲಿನ ಅನುಮಾನದಿಂದ ಗಂಡನೇ ಆಕೆಯನ್ನು ಚಾಕುವಿನಿಂದ ಇರಿದು ಹತ್ಯೆಮಾಡಿದ ಪ್ರಕರಣವೊಂದು ಶಿವಮೊಗ್ಗ ನಗರದ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹತ್ಯೆಯಾದ ಮಹಿಳೆಯನ್ನು ರುಕ್ಸನಾ (38) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ಯೂಸುಫ್ ಎಂದು ಗುರುತಿಸಲಾಗಿದೆ. ಆರೋಪಿ ರುಕ್ಸನಾಳನ್ನು ಕಳೆದ 13 ವರ್ಷದ ಹಿಂದೆ ಮದುವೆಯಾಗಿದ್ದ. ಇತ್ತೀಚೆಗೆ ಪತ್ನಿ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದ ಆರೋಪಿ ಗಂಡ ನಿತ್ಯ ಮಡದಿಯ ಜೊತೆಗೆ ಗಲಾಟೆ ಮಾಡುತ್ತಿದ್ದನಂತೆ.! ಅಲ್ಲದೇ ಕಳೆದ ಮೂರು ದಿನಗಳ ಹಿಂದೆ ಗಂಡ-ಹೆಂಡತಿಯ ನಡುವೆ ಮನೆಯಲ್ಲಿ ಗಲಾಟೆ ನಡೆದಿತ್ತು ಎಂದು ತಿಳಿದು ಬಂದಿದೆ.
ಆರೋಪಿ ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ಫೋನಿನಲ್ಲಿ ಆಡೀಯೊ ರೆಕಾರ್ಡಿಂಗ್ ಇಟ್ಟು ಹೊರಗಡೆ ಹೋಗಿದ್ದ. ಮನೆಗೆ ವಾಪಸ್ ಬಂದು ನೋಡಿದಾಗ ರುಕ್ಸಾನ ಬೇರೆ ವ್ಯಕ್ತಿಯ ಜೊತೆ ಮಾತನಾಡಿದ ಆಡಿಯೋ ಆತನಿಗೆ ಸಿಕ್ಕಿತ್ತು. ಇದರಿಂದ ಕೋಪಗೊಂಡ ಯುಸೂಫ್ ಆಕೆಗೆ ಪ್ರಶ್ನೆ ಮಾಡಿದ್ದಾನೆ. ರುಕ್ಸಾನ ಕೂಡ ತನ್ನದು ತಪ್ಪಾಗಿದೆ ಎಂದು ಹೇಳಿದ್ದಳು. ಬಳಿಕ ತವರು ಮನೆಗೆ ತೆರಳಿದ್ದಳು ಎಂದು ತಿಳಿದು ಬಂದಿದೆ.
ತವರು ಮನೆಗೆ ಹೋಗಿದ್ದ ಪತ್ನಿಯನ್ನು ಆರೋಪಿ ಇಂದು (ಭಾನುವಾರ) ಬೆಳಗ್ಗೆ ತನ್ನ ಮಗುವಿಗೆ ಆರೋಗ್ಯ ಸರಿಯಿಲ್ಲವೆಂದು ಮನೆಗೆ ಕರೆಸಿಕೊಂಡಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಆರೋಪಿ ಆಕೆಗೆ ಚಾಕುವಿನಿಂದ ಇರಿದಿದ್ದು, ಆಕೆ ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಈ ಸಂಬಂಧ ಆರೋಪಿಯನ್ನು ತುಂಗಾ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.