ಆ ಪತ್ರದ ಕೊನೆಯಲ್ಲಿ ಸಾವಿತ್ತು…! 💔
ಅಶ್ವಸೂರ್ಯ/ಶಿವಮೊಗ್ಗ
ನಾನು ಯಾರನ್ನು ಪ್ರೀತಿಸಿಲ್ಲ ,ಆದರೆ ನಾನು ಅಪ್ಪ,ಅಮ್ಮ ನೋಡಿದ ಹುಡುಗನನ್ನು ಇಷ್ಟಪಟ್ಟಿದ್ದೇನೆ. ಅವನೇ ಈಗ ನನ್ನ ಬದುಕು, ಬವಣೆ, ಕನಸು ಅಂತ ಕನವರಿಸುತ್ತಿದ್ದೇನೆ. ಆತನ ಹೆಸರು ಮನೋಜ್. ನನ್ನ ಹೃದಯದಲ್ಲಿ ಅರಳಿದ ಮೊದಲ ಮಿಡಿತ.ಮದುವೆಗೂ ಮುನ್ನ ವಧು ಪರೀಕ್ಷೆಗೆಂದು ಅಂದು ಆತ ನನ್ನನ್ನು ನೋಡಲು ನಮ್ಮ ಮನೆಗೆ ಬಂದಿದ್ದ.ಆತನ ಕಣ್ಣುಗಳಲ್ಲಿ ಹೊಳಪಿತ್ತು. ಕೆನ್ನೆಯ ಮೇಲೆ ಹೆಮ್ಮೆಯಿಂದ ಬೀಗುತ್ತಿದ್ದ ಗುಳಿಯಿತ್ತು. ಆತ ನನ್ನನ್ನು ಎವೆಯಿಕ್ಕದೆ ಕಣ್ಣರಳಿಸಿ ನೋಡುತ್ತಿದ್ದ. ಸ್ವಲ್ಪ ಸಮಯದ ನಂತರ ನನ್ನನ್ನು ಇಷ್ಟಪಟ್ಟಿದ್ದ.! ನನಗೂ ಆತನನ್ನು ನೋಡಿದ ಮೇಲೆ ಇಷ್ಟವಾಗಿತ್ತು.ಹೆಣ್ಣು ನೋಡಲು ಬಂದ ದಿನವೆ ತಿರುಗಿ ಹೊದವನು ಸಂಜೆ ಹೊತ್ತಿಗೆ ಫೋನ್ ಕೂಡ ಮಾಡಿದ್ದ. ತುಂಬಾ ಹೊತ್ತು ಹಳೆಯ ಪರಿಚಯದವನಂತೆ ಮಾತಾನಾಡಿದ್ದ. ನಾನು ಕೂಡ ಅವನೊಂದಿಗೆ ಮಾತನಾಡುವಾಗ ರೋಮಾಂಚನಗೊಂಡು ಮನಸ್ಸು ಬಿಚ್ಚಿ ಮಾತನಾಡಿದ್ದೆ. ಇನ್ನೇನು ನಮ್ಮಿಬ್ಬರ ನಿಶ್ಚಿತಾರ್ಥದ ದಿನಕ್ಕೆ ಕೇವಲ ಹತ್ತು ದಿನ ಬಾಕಿಯಿತ್ತು. ಅದೊಂದು ದಿನ ಆದೇನು ಅನ್ನಿಸಿತ್ತೊ ಆತನಿಗೆ ಐ ಲವ್ ಯೂ ಅಂದುಬಿಟ್ಟಿದ್ದ. ನನಗೆ ಹೊಸ ಅನುಭವದ ಜೋತೆಗೆ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಗಿತ್ತು.! ನನ್ನ ಮನದಲ್ಲೂ ಹಾಗೇ ಹೇಳುವಾಸೆ! ಆದರೆ ನಾಚಿಕೆ, ಇನ್ನೇನು ನಿಶ್ಚಿತಾರ್ಥಕ್ಕೆ ದಿನಕ್ಕೆ ಎರಡು ದಿನ ಇದೆ ಅನ್ನುವಾಗ, ನಾನು ಕೂಡಾ ನಾ ಮದುವೆಯಾಗುವ ಹುಗನಿಗೆ “ಐ ಲವ್ ಯೂ” ಎಂದು ಹೇಳಿ ಬಿಟ್ಟಿದೆ,ಅ ಕ್ಷಣದಲ್ಲಿ ಆತನ ನಗು ಕೂಡ ಜೋರಾಗಿಯೆ ಇತ್ತು.! ಸಂತೋಷಕ್ಕೊ ಅಥವಾ ವಿಕೃತವೋ ನನಗೆ ಒಂದು ಅರ್ಥವಾಗಲಿಲ್ಲ.ನಾನು ಮುಗುಳು ನಕ್ಕಿ ಸುಮ್ಮನಾಗಿದ್ದೆ.
ಇನ್ನೇನು ಎಂಗೇಜ್ ಮೆಂಟ್‌ಗೆ ಒಂದು ದಿನವಿದೆ ಎನ್ನುವಾಗ ನಾನು ತುಂಬಾ Excite ಆಗಿದ್ದೆ. ಆ ದಿನದ ಕನವರಿಕೆಯಲ್ಲಿದ್ದೆ ಪ್ರತಿ ಕ್ಷಣ ಕಳೆಯುತ್ತಿದ್ದೆ. ಕೊನೆಗೂ ನಿಶ್ಚಿತಾರ್ಥದ ದಿನ ಬಂದೇಬಿಟ್ಟಿತ್ತು. ನನ್ನ ಎಲ್ಲಾ ಸ್ನೇಹಿತರು, ಆತ್ಮೀಯರು, ಸಂಬಂಧಿಕರು ನಿಶ್ಚಿತಾರ್ಥದ ಸಂಭ್ರಮದಲ್ಲಿ ಸೇರಿದ್ದರು. ಆತ ನನಗೆ ಉಂಗುರ ತೊಡಿಸಿದ ಕ್ಷಣ ಒಂದೊಮ್ಮೆ ರೊಮಾಂಚನಗೊಂಡಿದ್ದೆ. ಮೈಯಲ್ಲಿ ಏನು ಒಂದು ರೀತಿಯ ಅನುಭವವಾಗಿತ್ತು.
ಅದೇ ದಿನ ನಮ್ಮ ಮದುವೆಯ ಡೇಟ್ ಕೂಡ ಫಿಕ್ಸ್ ಮಾಡಿ ವರನ ಮನೆಯವರು ಹೋಗಿದ್ದರು.ನಾನು ಎಲ್ಲೋ ಕಳೆದು ಹೋಗಿದ್ದೆ. ನನ್ನ ಗಂಡನೊಂದಿಗೆ ಹೊಸ ಜೀವನದ ಕನಸು ಕಂಡಿದ್ದೆ.ನಾನು ಬಯಸಿದಹಾಗೆ ನನ್ನವನು ಸಿಕ್ಕ ಎನ್ನುವ ಖುಷಿಯಲ್ಲಿ ತೇಲಿಹೋಗಿತ್ತು ನನ್ನ ಮನಸ್ಸು.ನನ್ನ ಬದುಕಿನಲ್ಲಿ ಯಾವುದೇ ಹುಡುಗನನ್ನು ಕಣ್ಣೆತ್ತಿಯೂ ನೋಡದ ನಾನು ಮದುವೆಯಾಗುವ ಹುಡುಗನನ್ನು ಮನಸಾರೆ ಪ್ರೀತಿಸತೊಡಗಿದ್ದೆ ಆತನೊಂದಿಗೆ ಹೇಗೆಲ್ಲಾ ಜೀವನ ನೆಡೆಸಬೇಕೆನ್ನುವ ಕನಸು ಕಾಣುತ್ತಿದ್ದೆ. ಇನ್ನೇನು ಮದುವೆಗೆ ಇನ್ನೊಂದು ವಾರ ಇದೆ ಎನ್ನುವಾಗ ಆತ ನನಗೆ ಫೋನ್ ಮಾಡಿ ಹೇಳಿದ್ದ.ಡಿಯರ್ ಇನ್ನೂ ನಾವು ಮದುವೆಯಾಗುವ ವರೆಗೂ ನಾವಿಬ್ಬರು ಮಾತಾನಾಡೋದು ಬೇಡ, ಹೊಸತನ ಇರುತ್ತೆ.! ಅಂತ ಹೇಳಿದ್ದ ನನಗೆ ಕಷ್ಟವಾದರೂ ಅಂಥದೊಂದು ಅನುಭವಕ್ಕೆ ನನ್ನ ಮನಸ್ಸು ಸಿದ್ಧವಾಗಿತ್ತು. ಆದರೆ ಎರಡು ದಿನ ಕಳೆಯುವಷ್ಟರಲ್ಲಿ ನನಗೇನೋ ಕಳೆದುಕೊಂಡಂಥ ಅನುಭವ!ನನ್ನವನು ಎಂದು ಕೊಂಡವನು ನನ್ನಿಂದ ದೂರಾದಂತಹ ನೋವು.ಅವನ ಜೊತೆ ಮಾತನಾಡದೇ ಇರಲು ಸಾಧ್ಯವಿಲ್ಲ ಎಂದು ಅನಿಸುತ್ತಿತ್ತು. ಅವನಿಗೂ ಹೀಗೇ ಅನಿಸುತ್ತಿರಬಹುದಾ ಎನ್ನುವ ಪ್ರಶ್ನೆ ನನ್ನನ್ನು ಕಾಡಿತ್ತು.? ಅಷ್ಟರಲ್ಲಿ ಅವನಿಂದ ಫೋನ್ ಬಂದೆ ಬಿಟ್ಟಿತ್ತು. ಅ ಕ್ಷಣದ ಸಂತೋಷವನ್ನು ಹೇಳಲಾಗದು ತಡ ಮಾಡದೆ ಫೋನ್ ರಿಸೀವ್ ಮಾಡಿ ಹಲೋ ಅಂದೆ.ತಕ್ಷಣವೇ ಆತ ನಿನ್ನ ಬಳಿ ಒಂದು ವಿಷಯವನ್ನು ಹೇಳಬೇಕು ಅಂದ. ಏನು ಅಂದೆ.?
ನನಗೆ ರಮ್ಯಾ ಅನ್ನುವ ಹುಡುಗಿಯ ಜೊತೆಗೆ ಸಂಬಂಧವಿದೆ. ಅವಳನ್ನು ನಾನು ಬಿಟ್ಟಿರಲು ಸಾಧ್ಯವಿಲ್ಲ.!ಆಕೆಯ ಜೋತೆಗೆ ಹೊಂದುಕೊಳ್ಳುತ್ತಿಯಾ ಅಂದ.! ನನಗೆ ಒಮ್ಮೆ ಶಾಕ್ ಆದರೂ ಅ ಕ್ಷಣದಲ್ಲಿ ‘ಓಕೆ’ ಅಂದೆ. ಆದರೆ ಆತ ರಮ್ಯಾಳನ್ನು ಮರೆಯೋ ಹಾಗೆ ಪ್ರೀತಿ ಕೊಡಬೇಕು ಅಂತ ನಾನು ಮನಸ್ಸಿನಲ್ಲಿ ನಿರ್ಧಾರ ಮಾಡಿಬಿಟ್ಟಿದ್ದೆ ಹೊರತು ಅವನಿಂದ ದೂರಾಗುವ ಯೋಚನೆ ಮಾಡಿರಲಿಲ್ಲ. ಅದೊಂದು ದಿನ
ಮದುವೆಯು ಆಯ್ತು, ನನ್ನ ಕನಸುಗಳೆಲ್ಲಾ ಸಾಕಾರ ಆಗೋ ದಿನವಾಗಿತ್ತು ಎಂದು ಅಂದುಕೊಂಡಿದ್ದೆ.ಆದರೆ ಮದುವೆಯ ದಿನದ ರಾತ್ರಿಯೇ ನನ್ನ ಎಲ್ಲಾ ಕನಸುಗಳು ನುಚ್ಚು ನೂರಾಗಿತ್ತು.! ಮೊದಲ ರಾತ್ರಿಯೆ ಆತ ಈ ಹಾಸಿಗೆಯ ಮೇಲೆ ಮಲಗಬೇಡ.! ಅದು ನನ್ನ ರಮ್ಯಾಳಿಗೆ ಮೀಸಲು ಅಂದ. ಹೊಸ ಹಾಸಿಗೆ ಬರೋವ ವರೆಗೂ ನಾನು ಕಾರ್ಪೆಟ್‌ನಲ್ಲಿ ಮಲಗುವಂತಾಯ್ತು. ಅಲ್ಲೇ ನಮ್ಮಿಬ್ಬರ ಮಿಲನ ಮಹೋತ್ಸವ ನಡೆಯಿತು. ಆದರೆ ಮಾರನೇ ದಿನದಿಂದಲೆ ಆತ ನನ್ನನ್ನು ಕಡೆಗಣಿಸತೊಡಗಿದ.ಆತನ ವರ್ತನೆಯೆ ವಿಚಿತ್ರವಾಗಿತ್ತು. ಅವನ ಮನೆಯವರು ನನ್ನನ್ನು ಶತ್ರು ತರ ನೋಡುತ್ತಿದ್ದರು. ನೂರಾರು ಕನಸು ಹೊತ್ತು ಹಸೆಮಣೆ ಏರಿದ ನನಗೆ ದಿನಕಳೆದಂತೆ ನನ್ನ ಒಂದೊಂದು ಕನಸುಗಳು ಒದೊಂದಾಗಿಯೆ ಕಮರ ತೊಡಗಿತು. ಆತ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಕೇಳಿದಾಗ ಮುಲಾಜಿಲ್ಲದೆ ರಮ್ಯಾ ಜೊತೆಯಲ್ಲಿ ಇದ್ದೇ ಅನ್ನುತ್ತಿದ್ದ. ದಿನಾ ಅಳುವುದೊಂದು ಬಿಟ್ಟರೆ ಬೇರೆ ಏನು ಇರಲಿಲ್ಲ. ಈ ಬದುಕು ಸಾಕು ಎಂದು ಅನ್ನಿಸತೊಡಗಿತ್ತು.ಅದೆಷ್ಟು ಕಷ್ಟಪಟ್ಟು ಅಪ್ಪ, ಅಮ್ಮ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದು ನೀರಿನಲ್ಲಿ ಹೋಮಮಾಡಿದ ಹಾಗಾಯ್ತು. ನನ್ನ ಬದುಕಿನಲ್ಲಿ ಎಲ್ಲಾ ಮುಗಿದು ಹೋಯಿತು ಎಂದು ನಾನು ಯೋಚಿಸುತ್ತಿದ್ದರೆ, ನನ್ನ ಗಂಡ ಅನಿಸಿಕೊಂಡ ಪ್ರಾಣಿಗೆಮಾತ್ರ ಸದಾ ರಮ್ಯಾಳದ್ದೇ ಕನವರಿಕೆ.ಗಂಡನ ಮನೆಯಲ್ಲಿ ನನ್ನ ಬಗ್ಗೆ ಯಾರಿಗೂ ಕಿಂಚಿತ್ತೂ ಚಿಂತೆಯಿರಲಿಲ್ಲ. ಒಂದು ದಿನ ಆತ ನಿನ್ನಿಂದ ನನ್ನ ಜೀವನ ಹಾಳಾಯ್ತು.! ಡೈವೋರ್ಸ್ ಕೊಡು ಅಂದ. ನಾನು ನಿರ್ಲಿಪ್ತಳಾಗಿ ನಕ್ಕೆ! ದಿನಗಳು ಕಳೆಯುತ್ತಿದ್ದಂತೆ ನಾನು ಅವರ ಪಾಲಿಗೆ ಕಾಲಿನ ಕಸವಾಗಿದ್ದೆ.ಅವರ ಮನೆಯಲ್ಲಿ ಯಾರೂ ನನ್ನ ಬಳಿ ಮಾತಾನಾಡುತ್ತಿರಲಿಲ್ಲ. ಯಾಕೋ ಬದುಕು ಗೊಂದಲದ ಗೂಡಾಗಿ.ನಿತ್ಯ ಕಣ್ಣಿರೆ ಜೀವನವಾಗಿತ್ತು.
ಒಂದು ಮಗುವಾದ್ರೆ ಎಲ್ಲಾ ಸರಿಹೋಗ ಬಹುದು ಅಂದುಕೊಂಡೆ, ಅ ದೇವರು ಕೂಡ ದಯೆ ತೋರಲಿಲ್ಲ. ನನ್ನ ಗರ್ಭ ನಿಲ್ಲಲಿಲ್ಲ. ಆಸ್ಪತ್ರೆಗೆ ತಿರುಗಿದ್ದು ಬಿಟ್ಟರೆ ಪ್ರಯೋಜನವಾಗಲಿಲ್ಲ. ದೊಡ್ಡ ಆಘಾತವೆ ಆಗಿ ಹೋಗಿತ್ತು.ಈ ಶಾಕ್ ನಿಂದ ಹೊರಬರಲು ಸಾಧ್ಯವಾಗಲಿಲ್ಲ.ಜೀವನದಲ್ಲಿ ನೂರಾರು ಕನಸು ಕಂಡ ನನಗೆ ಸಾಧಾರಣ ಜೀವನವೂ ಸಿಗಲಿಲ್ಲ.? ಅದಕ್ಕೆ ನಾನು ಒಂದು ನಿರ್ಧಾರಕ್ಕೆ ಬಂದಿದ್ದೀನಿ, ಆತ್ಮಹತ್ಯೆ ಬಿಟ್ಟರೆ ಬೇರೆ ದಾರಿ ನನಗಿಲ್ಲ. ನನ್ನ ಅಪ್ಪ , ಅಮ್ಮ, ಅಣ್ಣನಿಗೆ ಖಂಡಿತಾ ನನ್ನ ಸಾವು ಭರಿಸಲಾಗದ ದುಃಖವನ್ನುಂಟು ಮಾಡುತ್ತದೆ. ಆದರೆ ನಾನು ಅಸಹಾಯಕಳು. ನನಗೆ ಬೇರೆ ದಾರಿಯೆ ಇಲ್ಲಾ. ನಾನು ನನ್ನ ಗಂಡನನ್ನು ಈ ಕ್ಷಣವೂ ಕೂಡ ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸ್ತೀನಿ. ಅವನಂದ್ರೆ ನಂಗೆ ತುಂಬಾ ಇಷ್ಟ. ಆದರೆ ಅವನಿಗೆ ರಮ್ಯಾ ಮುಖ್ಯ. ನನ್ನ ಪ್ರೀತಿ ಅವನಿಗೆ ಅರ್ಥ ವಾಗುತ್ತಿಲ್ಲ. ಮಗು ಆಗುವುದು ಅಂದುಕೊಂಡಿದ್ದೆ, ಆ ಭಾಗ್ಯವು ಕೂಡ ನನಗೆ ದೇವರು ಕೊಡಲಿಲ್ಲ. ನಾನು ಸಾಯಲೇಬೇಕು, ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾನೇ ಹೊಣೆ! ಕೊನೆಯದಾಗಿ ನನ್ನ ಗಂಡ ಅಜಿತ್ ಗೆ ಐ ಲವ್ ಯೂ ಸೋ ಮಚ್ ಹೇಳ್ತಾ ಇದ್ದೀನಿ. ಆತ ಚೆನ್ನಾಗಿರಬೇಕು. ನನ್ನ ಸಾವಿಗೆ ನಾನೇ ಕಾರಣ. ನಾನು ನಿಮ್ಮೆಲ್ಲರಿಂದ ದೂರ ಹೋಗ್ತಾ ಇದ್ದೀನಿ, ಕಣ್ಣೀರಿನ ಜೊತೆಗೆ. ಗುಡ್ ಬೈ….!
- ಮಾನಸ….