ರಾಮನಗರ: ಪೊಲೀಸರ ನಿರ್ಲಕ್ಷ್ಯ RSS ಕಾರ್ಯಕರ್ತ ಪುನೀತ್ ಕೊಲೆ ಆರೋಪಿಗಳ ಬಿಡುಗಡೆ.!

{

ಅಶ್ವಸೂರ್ಯ/ರಾಮನಗರ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಕೋರಿ ಪೊಲೀಸರು ಅರ್ಜಿ ಸಲ್ಲಿಸಬೇಕಿತ್ತು. ಆದರೆ ನ್ಯಾಯಾಲಯದ ಕಲಾಪ‌ ಪ್ರಾರಂಭವಾದರೂ ಸರ್ಕಾರಿ ಪರ ವಕೀಲ ಹಾಗೂ ಪೊಲೀಸರು ಕೋರ್ಟ್ ಗೆ ಹಾಜರಾಗಿರಲಿಲ್ಲ.ಈ ಹಿನ್ನೆಲೆಯಲ್ಲಿ ಪೊಲೀಸರ ವರ್ತನೆಗೆ ಗರಂ ಅದ ನ್ಯಾಯಧೀಶರು, ಕೊಲೆ ಆರೋಪ ಎದುರಿಸುತ್ತಿದ್ದ ಮೂವರನ್ನು ಬಿಟ್ಟು ಕಳಿಸುವಂತೆ ಆದೇಶ ನೀಡಿದ್ದಾರೆ. 
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ ಪೊಲೀಸರ ನಡೆಯಿಂದ ಬೇಸರಗೊಂಡ ನ್ಯಾಯಾಧೀಶರು ಪ್ರಕರಣದ ಮೂವರು ಆರೋಪಿಗಳನ್ನು ಬಿಡುಗಡೆಗೊಳಿಸಿ ಆದೇಶ ಹೊರಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಮನಗರದ ಚಂದು, ಮುರಳಿ ಹಾಗೂ ನಾಗೇಶ್ ಕಾರಾಗೃಹದಿಂದ ಹೊರ ಬಂದ ಆರೋಪಿಗಳು. ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗುಲ್ಜಾರ್ ಲಾಲ್ ಡಿ ಮಹಾವರ್ಕರ್ ಆದೇಶ ಹೊರಡಿಸಿದವರು.
ರಾಮನಗರದ ಹೊರ ವಲಯದ ರೆಸಾರ್ಟ್ ನಲ್ಲಿ 21 ವರ್ಷದ ಬಿಕಾಂ ವಿದ್ಯಾರ್ಥಿ ಪುನೀತ್ ಕೊಲೆ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಚಂದು, ಮುರಳಿ, ನಾಗೇಶ್ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಈ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಕೋರಿ ಪೊಲೀಸರು‌ ಮತ್ತೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ನ್ಯಾಯಾಲಯದ ಕಲಾಪ‌ ಪ್ರಾರಂಭವಾದರೂ ಸರ್ಕಾರಿ ಪರ ವಕೀಲರಾಗಲಿ ಹಾಗೂ ಪೊಲೀಸರಾಗಲಿ ಕೋರ್ಟ್ ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆ ಪೊಲೀಸರ ನಡೆಗೆ ಸಿಟ್ಟಾದ ನ್ಯಾಯಧೀಶರು, ಕೊಲೆ ಆರೋಪ ಎದುರಿಸುತ್ತಿದ್ದ ಮೂವರನ್ನು ಬಿಟ್ಟು ಕಳಿಸುವಂತೆ ಆದೇಶ ನೀಡಿದ್ದಾರೆ ಎಂದು ಹೇಳಲಾಗಿದೆ.

ಪ್ರಕರಣದ ಹಿನ್ನೆಲೆ:
ಕಳೆದ ನವೆಂಬರ್ 26ರಂದು ಪುನೀತ್ ಹಾಗೂ ಸ್ನೇಹಿತರು ರಾಮನಗರ ಹೊರ ವಲಯದ ಚಿಕ್ಕೇನಹಳ್ಳಿಯಲ್ಲಿರುವ ರೆಸಾರ್ಟ್ ನಲ್ಲಿ ಬ್ಯಾಚುಲರ್ ಪಾರ್ಟಿ ಮಾಡಲು ಹೋಗಿದ್ದರು.ಅ ರಾತ್ರಿ 10.30ರ ಸುಮಾರಿಗೆ ಚಂದು, ನಾಗೇಶ್ ಹಾಗೂ ಮುರಳಿ ರೆಸಾರ್ಟ್‌ಗೆ ಏಕಾಏಕಿ ನುಗ್ಗಿ ನೈತಿಕ ಪೊಲೀಸ್ ಗಿರಿ ತೋರಿಸಿದ್ದರು.
ಸ್ವಿಮ್ಮಿಂಗ್ ಪೂಲ್​ನಲ್ಲಿ ಆಟವಾಡುತ್ತಿದ್ದ ಯುವತಿಯರ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಮೂವರಿಗು ಪುನೀತ್ ಹಾಗೂ ಸ್ನೇಹಿತರು ವಿಡಿಯೋ ಮಾಡಬೇಡಿ ಎಂದು ಹೇಳಿದ್ದಾರೆ. ಆಗ ಮೂವರು ನಾವು ಲೋಕಲ್ ಹುಡುಗರು, ಇಲ್ಲಿ ನಮ್ಮದೇ ಹವಾ ಎಂದು ವಾಗ್ವಾದಕ್ಕೆ ಇಳಿದಿದ್ದಾರೆ. ನಾವು ಏನು ಬೇಕಾದರೂ ಮಾಡುತ್ತೇವೆ. ಇಲ್ಲಿಗೆ ಯಾರ ಪರ್ಮಿಷನ್ ತಗೊಂಡು ಬಂದಿದ್ದೀರಾ ಎಂದು ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಅಲ್ಲದೇ ಮೂವರು ಯುವಕರನ್ನು ಹೊರಗೆ ಹೋಗಿ ಎಂದು ಪುನೀತ್ ಹೇಳುತ್ತಿದ್ದಂತೆ ಓರ್ವ ಹೊರಗಿಂದ ದೊಣ್ಣೆ ತಂದು ಹಲ್ಲೆ ಮಾಡಲು ಯತ್ನಿಸಿದ್ದಾನೆ. ಆಗ ಹಲ್ಲೆ ಮಾಡುವುದನ್ನು ಪುನೀತ್ ವಿಡಿಯೋ ಮಾಡಲು ಮುಂದಾಗಿದ್ದಾನೆ. ವಿಡಿಯೋ ಮಾಡುತ್ತಿದ್ದಂತೆ ದೊಣ್ಣೆಯಿಂದ ಪುನೀತ್​ಗೆ ಹಲ್ಲೆ ಮಾಡಿದ್ದಾರೆ. ಪುನೀತ್ ತಲೆ​ಗೆ ಜೋರಾಗಿ ಪೆಟ್ಟಾಗಿದ್ದು ಅಲ್ಲೇ ಕುಸಿದು ಬಿದ್ದಿದ್ದಾನೆ. ಅವನನ್ನ ಬಿಡಬೇಡ ಹೊಡೆದು ಸಾಯಿಸು ಎಂದು ಜೊತೆಯಲ್ಲಿದ್ದ ಇಬ್ಬರು ಹೇಳಿದ್ದಾರೆ. ಅಷ್ಟೊತ್ತಿಗಾಗಲೇ ಪುನೀತ್​ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆನಂತರ ಪುನೀತ್ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲೂ ಬಿಟ್ಟಿಲ್ಲ. ಆನಂತರ ಪೊಲೀಸರಿಗೆ ಕರೆ ಮಾಡಿ ಅವರ ಸಹಾಯದಿಂದ ಪುನೀತ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕೆಂಗೇರಿಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಪುನೀತ್ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಪೊಲೀಸರು ರಿಮ್ಯಾಂಡ್ (ಪೊಲೀಸ್​ ಬಂಧನ ವಿಸ್ತರಣಾ) ಅರ್ಜಿಯನ್ನು ರಾಮನಗರದ ಅಪರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಸಲ್ಲಿಸಬೇಕಿತ್ತು. ಆದರೆ, ರಿಮ್ಯಾಂಡ್​ ಅರ್ಜಿಯನ್ನು ಸಲ್ಲಿಸಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮತ್ತು ನ್ಯಾಯಾಲಯದ ಕಲಾಪ‌ ಪ್ರಾರಂಭವಾದರೂ ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಪೊಲೀಸರು ಹಾಜರಾಗಲಿಲ್ಲ. ಇದರಿಂದ ಕೋಪಗೊಂಡು ತನಿಖೆ ಏಕೆ ಬೇಕು ಅಂತ‌ ಪ್ರಶ್ನಿಸಿ ಕೊಲೆ ಆರೋಪ ಎದುರಿಸುತ್ತಿದ್ದ ಮೂವರನ್ನೂ ಬಿಟ್ಟು ಕಳಿಸುವಂತೆ ನ್ಯಾಯಾಧೀಶ ಗುಲ್ಜಾರ್ ಲಾಲ್ ಡಿ ಮಹಾವರ್ಕರ್ ಡಿಸೆಂಬರ್​ 6ರಂದು ಆದೇಶ ಹೊರಡಿಸಿದರು.

ಒಂದು ವೇಳೆ, ಪೊಲೀಸರು ಅರ್ಜಿ ಸಲ್ಲಿಸಿದರೆ ಆಗ ಬಂಧಿಸುವಂತೆ ಆದೇಶಿಸಿದರು. ನ್ಯಾಯಾಲಯದ ಆದೇಶ ಸಿಕ್ಕ ಬೆನ್ನಲ್ಲೆ ಮೂವರು ಕೊಲೆ ಆರೋಪಿಗಳನ್ನು ರಾಮನಗರ ಕಾರಾಗೃಹ ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ. ಜಾಮೀನಿಗೆ ಅರ್ಜಿ ಸಲ್ಲಿಸದೆಯೇ ಮೂವರು ಆರೋಪಿಗಳು ಜೈಲಿನಿಂದ ಹೊರ ಬಂದಿದ್ದಾರೆ. ನ್ಯಾಯಾಧೀಶರ ಈ ಆದೇಶ ದೇಶದಲ್ಲೇ ಅತಿ ಅಪರೂಪ ಎನ್ನಲಾಗಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!