ಅವಮಾನಿಸಿದವರೆ ಸನ್ಮಾನಿಸಿ ಗೌರವಿಸಿದರು: ಪಂಚೆ ಧರಿಸಿ ಬಂದ ರೈತನಿಗೆ ಅವಮಾನಿಸಿದ ಜಿಟಿ ಮಾಲ್ ನವರು ಎಚ್ಚೆತ್ತುಕೊಂಡು ಸನ್ಮಾನಿಸಿದರು
ಅಶ್ವಸೂರ್ಯ/ಶಿವಮೊಗ್ಗ: ಬೆಂಗಳೂರಿನಲ್ಲಿ ಜಿಟಿ ಮಾಲ್ ಗೆ ಪಂಚೆ ಧರಿಸಿ ಹೊದಂತ ರೈತನನ್ನು ಮಾಲ್‌ನೊಳಗೆ ಬಿಡದೆ ರೈತನಿಗೆ ಅಪಮಾನ ಮಾಡಿದ್ದ ಮಾಲ್‌ನವರು ಎಚ್ಚೆತ್ತುಕೊಂಡು ಕರೆದು ಸನ್ಮಾನಿಸಿದ ಅಪರೂಪದ ಘಟನೆ ಬೆಂಗಳೂರು ನಗರದ ಪ್ರತಿಷ್ಠಿತ ಜಿಟಿ ಮಾಲ್ ನಲ್ಲಿ ನಡೆದಿದೆ.
ಮಂಗಳವಾರ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್‌ಗೆ ಹಾವೇರಿ ಮೂಲದ ಕುಟುಂಬವೊಂದು ಕಲ್ಕಿ ಸಿನಿಮಾ ವೀಕ್ಷಿಸಲು ಆಗಮಿಸಿತ್ತು. ಇದೇ ವೇಳೆ ಅವರ ಜೊತೆಗೆ ಫಕೀರಪ್ಪ ಎಂಬ ರೈತರು ಕೂಡ ಬಂದಿದ್ದರು.
ಸೆಕ್ಯುರಿಟಿ ಗಾರ್ಡ್‌ಗಳು, ಪಂಚೆ ಉಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಮಾಲ್ ಒಳಗೆ ಬಿಡದೆ ಅವಮಾನಿಸಿ ಹೊರಗೆ ಕಳುಹಿಸಿದ್ದರು. ಇದನ್ನು ಅವರ ಪುತ್ರ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಇದಕ್ಕೆ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಲ್‌ನವರು ಕೂಡಲೇ ರೈತನ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಮಾಲ್ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಘಟನೆಯನ್ನು ವಿರೋಧಿಸಿದ ಕನ್ನಡ ಸಂಘಟನೆಯ ಕಾರ್ಯಕರ್ತರು ರೈತರ ಗೆಟಪ್‌ನಲ್ಲಿ ಬೆಳಗ್ಗೆ ಮಾಲ್ ಮುಂದೆ ಜಮಾಯಿಸಿದ್ದರು.
ಕುರುಬೂರು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರು ಈ ಘಟನೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿ, ಇಂಥ ಘಟನೆಯ ಮೂಲಕ ರೈತರಿಗೆ ಅವಮಾನ ಮಾಡಲಾಗಿದೆ ಎಂದು ಖಂಡಿಸಿದ್ದಾರೆ. ಕೂಡಲೇ ಮಾಲ್ ಮಾಲೀಕರ ವಿರುದ್ಧ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ನಿನ್ನೆ ಮಾಡಿದ ತಪ್ಪಿನ ಅರಿವಾದ ನಂತರ ಎಚ್ಚೆತ್ತುಕೊಂಡ ಮಾಲ್ ಸಿಬ್ಬಂದಿಗಳು ಇಂದು ಪಂಚೆ ಉಟ್ಟವರನ್ನು ಒಳಗೆ ಬಿಡುತ್ತಿರುವುದಷ್ಟೇ ಅಲ್ಲದೆ, ಪಂಚೆ ಉಟ್ಟವರಿಗೆ ಕೈಮುಗಿದು ಬರಮಾಡಿಕೊಳ್ಳುತ್ತಿದ್ದಾರೆ!
ಜೋತೆಗೆ ಅವಮಾನಿಸಿದ್ದ ರೈರ ಫಕೀರಪ್ಪ ನವರನ್ನು ಕರೆದುಕೊಂಡು ಬಂದು ಗೌರವಿಸಿ ಸನ್ಮಾನಿಸಿ ಕ್ಷಮೆ ಯಾಚಿಸಿದ್ದಾರೆ.