ದಾಖಲೆಗಳ ಡಿಜಿಟಲೀಕರಣದಿಂದ ಕೈಗೊಳ್ಳುವ ಕ್ರಮಗಳು ಜನಸ್ನೇಹಿಯಾಗುವ ಬದಲು ದಿನದಿಂದ ದಿನಕ್ಕೆ ಜನವಿರೋಧಿಯಾಗಿ ಬದಲಾಗುತ್ತಿದೆ : ಡಿ ಎಸ್ ಅರುಣ್ , ಶಾಸಕರು ವಿಧಾನ ಪರಿಷತ್

ದಾಖಲೆಗಳ ಡಿಜಿಟಲೀಕರಣದಿಂದ ಕೈಗೊಳ್ಳುವ ಕ್ರಮಗಳು ಜನಸ್ನೇಹಿಯಾಗುವ ಬದಲು ದಿನದಿಂದ ದಿನಕ್ಕೆ ಜನವಿರೋಧಿಯಾಗಿ ಬದಲಾಗುತ್ತಿದೆ : ಡಿ ಎಸ್ ಅರುಣ್ , ಶಾಸಕರು ವಿಧಾನ ಪರಿಷತ್

ಅಶ್ವಸೂರ್ಯ/ಶಿವಮೊಗ್ಗ: ದಾಖಲೆಗಳ ಡಿಜಿಟಲೀಕರಣದಿಂದ ಕೈಗೊಳ್ಳುವ ಕ್ರಮಗಳು ಜನಸ್ನೇಹಿಯಾಗುವ ಬದಲು ದಿನದಿಂದ ದಿನಕ್ಕೆ ಜನವಿರೋಧಿಯಾಗಿ ಬದಲಾಗುತ್ತಿದೆ . ಸಿಬ್ಬಂದಿ ಮಾಡುವ ಎಡವಟ್ಟಿಗೆ ಬೆಲೆ ತೆರಬೇಕಾಗಿರುವುದು ಸಾಮಾನ್ಯ ಜನರು . ಇಂತಹದ್ದೇ ಒಂದು ಯೋಜನೆ ಗ್ರಾಪಂಗಳಲ್ಲಿ ಅಳವಡಿಕೆಯಾಗಿರುವ ಪಂಚತಂತ್ರ ಎಂಬ ಹೆಸರಿನಲ್ಲಿರುವ ತಂತ್ರಾಂಶ ಎಂಬುದನ್ನು ಹೇಳಲು ಬಯಸುತ್ತೇನೆ.
ಈ ತಂತ್ರಾಂಶದ ಉದ್ದೇಶವೇನೋ ಮಹೋನ್ನತವಾಗಿದೆ. ಗ್ರಾಪಂ ವ್ಯಾಪ್ತಿಯ ಎಲ್ಲ ಸ್ವತ್ತುಗಳ ದಾಖಲೆ, ಸರ್ಕಾರಿ ಜಾಗ, ಗ್ರಾಪಂಗೆ ಬಿಡುಗಡೆಯಾದ ಅನುದಾನ, ಗ್ರಾಪಂ ಸಭೆಯ ನಡಾವಳಿಗಳು, ಗ್ರಾಪಂ ಸದಸ್ಯರು, ಸಿಬ್ಬಂದಿ ವಿವರ ಎಲ್ಲವನ್ನೂ ಇದರಲ್ಲಿ ನಮೂದಿಸಬೇಕು. ಆಡಳಿತದಲ್ಲಿ ಪಾರದರ್ಶಕತೆ ತರಲು ಇದು ಉತ್ತಮ ಮಾರ್ಗವೆನ್ನುವ ನಂಬಿಕೆಯೇ ಹೌದು.

ಆದರೆ ಲಿಖಿತ ರೂಪದಲ್ಲಿದ್ದ ದಾಖಲೆಗಳನ್ನು ಪಂಚತಂತ್ರ-1ಕ್ಕೆ ಸೇರ್ಪಡೆ ಮಾಡುವಾಗ ಸಿಬ್ಬಂದಿಗಳು ಬೇಜವಾಬ್ದಾರಿಯಿಂದ ಒಂದು ಗ್ರಾಮದ ಆಸ್ತಿಗಳನ್ನು ಇನ್ನೊಂದು ಗ್ರಾಮಕ್ಕೆ ವರ್ಗಾಯಿಸುವ ಮೂಲಕ ಲೋಪ ಮಾಡಿದರು. ಅದರ ಪರಿಣಾಮ ಜನರು ಅನುಭವಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ.
ಒಮ್ಮೆ ಲೋಪ ಮಾಡಿದ ಸಿಬ್ಬಂದಿ ಎರಡನೇ ಬಾರಿಯೂ ಎಚ್ಚೆತ್ತುಕೊಳ್ಳಲಿಲ್ಲ. ಪಂಚತಂತ್ರ-2 ತಂತ್ರಾಂಶ ಜಾರಿಗೆ ಬಂದಾಗಲಾದರೂ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು ದಾಖಲೆಗಳಿಗೆ ಮುಕ್ತಿ ನೀಡಬಹುದಾಗಿತ್ತು. ಆದರೆ ಆಗಲೂ ಸಿಬ್ಬಂದಿ ನಿರಾಸಕ್ತಿ ಮುಂದುವರೆಸಿ, ಹಳೆಯ ತಪ್ಪುಗಳನ್ನೇ ಈ ತಂತ್ರಾಂಶಕ್ಕೂ ಸೇರಿಸಿ ಎಡವಟ್ಟುಗಳನ್ನು ಮುಂದುವರೆಸಿರುವುದನ್ನು ಗಮನಿಸಿದ್ದೇನೆ.

ಮೊದಲೇ ಅರಣ್ಯ ಹಾಗೂ ಕಂದಾಯ ಭೂಮಿ ಸಮಸ್ಯೆ ಎದುರಿಸುತ್ತಿರುವ ಮಲೆನಾಡಿನ ಗ್ರಾಮೀಣ ಭಾಗದ ಜನರಿಗೆ ಇ-ಗವರ್ನೆನ್ಸ್ ಕಂಟಕವಾಗಿ ಪರಿಣಮಿಸಿದೆ. ಇ-ಆಡಳಿತ ವಿಭಾಗ ಇನ್ನೂ ಒಂದು ಹೆಜ್ಜೆ ಮುಂದುವರಿದು ಗ್ರಾಮೀಣ ಭಾಗದ ಜನರು ಇ-ಸ್ವತ್ತು ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಆದೇಶ ಜಾರಿ ಮಾಡಿದ ಬಳಿಕ ಈ ತಂತ್ರಾಂಶದಲ್ಲಿ ಆಗಿದ್ದ ಲೋಪಗಳು ಒಂದೊಂದಾಗಿ ಹೊರಬರುತ್ತಲೇ ಇವೆ.

ಇ-ಸ್ವತ್ತು ಮಾಡಿಸಿಕೊಳ್ಳಲು ಅಡ್ಡಿ

ಗ್ರಾಪಂ ವ್ಯಾಪ್ತಿಯಲ್ಲಿನ ವಾಸದ ಮನೆ, ವಾಣಿಜ್ಯ ಕಟ್ಟಡ, ನಿವೇಶನಗಳನ್ನು ಈಗ ಇ-ಸ್ವತ್ತು ಮೂಲಕ ನೋಂದಣಿ ಮಾಡಿಕೊಳ್ಳಬೇಕಾದ್ದು ಕಡ್ಡಾಯ. ಆದರೆ ಇಡೀ ಗ್ರಾಮದ ಹೆಸರೇ ಪಂಚತಂತ್ರದಲ್ಲಿ ಸೇರದೇ ಇರುವಾಗ ಇ-ಸ್ವತ್ತು ಸಿಗುವುದಾದರೂ ಹೇಗೆ? ಒಂದು ಹಳ್ಳಿಯ ಅಷ್ಟೂ ಆಸ್ತಿಗಳನ್ನು ಇನ್ನೊಂದು ಗ್ರಾಮದ ಹೆಸರಿಗೆ ವರ್ಗಾಯಿಸಿರುವುದರಿಂದ ಇ-ಸ್ವತ್ತು ಪೋರ್ಟಲ್‌ನಲ್ಲಿ ನೋಂದಣಿ ಸಾಧ್ಯವೇ ಇಲ್ಲ. ಇಲ್ಲಿಂದ ಶುರುವಾಗಿದ್ದೆ ನಿಜವಾದ ಸಮಸ್ಯೆ.

ಗ್ರಾಪಂ ಸದಸ್ಯರ ಪರದಾಟ

ಕಳೆದ 10 ವರ್ಷಗಳಲ್ಲಿ ಗ್ರಾಪಂ ಸದಸ್ಯರಾದ ಬಹುತೇಕರು ಪಂಚತಂತ್ರ ತಂತ್ರಾಶದಲ್ಲಿನ ಲೋಪದ ಪರಿಣಾವನ್ನು ಎದುರಿಸಿದ್ದಾರೆ. ನ್ಯೂನತೆ ಸರಿಪಡಿಸಿಕೊಳ್ಳಲು ತಾಪಂ ಇಒ, ಜಿಪಂ ಸಿಇಒ ಕಚೇರಿ ಅಲೆದಾಡಿ ಅಂತಿಮವಾಗಿ ಕೈಚೆಲ್ಲಿದ್ದಾರೆ. ಗ್ರಾಪಂಗಳ ಅನೇಕ ಸಭೆಗಳಲ್ಲಿ ನಿರ್ಣಯಗಳನ್ನು ಮಾಡಿ ತಂತ್ರಾಂಶದ ಲೋಪ ಸರಿಪಡಿಸಿ ಇ-ಸ್ವತ್ತು ಮಾಡಿಸಿಕೊಳ್ಳಲು ಅವಕಾಶ ನೀಡಬೇಕೆಂದು ನಿರ್ಣಯ ಕೈಗೊಂಡಿದ್ದಾರೆ. ಆದರೆ ಇದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಆಸಕ್ತಿಯಿಂದ ಕೆಲಸ ಮಾಡಬೇಕಾದ ಇಲಾಖೆಗಳಲ್ಲಿ ನಿರಾಸಕ್ತಿ ಕಾಣುತ್ತಿದೆ.

ಇ-ಸ್ವತ್ತಿಗೇಕೆ ಮಹತ್ವ?

ಸರ್ಕಾರದ ಆದೇಶದ ಪ್ರಕಾರ ಇ-ಸ್ವತ್ತು ಮಾಡಿಕೊಳ್ಳದ ಯಾವ ಆಸ್ತಿಯನ್ನೂ ಮಾರಾಟ ಮಾಡುವುದು, ಇಲ್ಲವೇ ಅದನ್ನು ಖರೀದಿಸುವುದು ಸಾಧ್ಯವೇ ಇಲ್ಲ. ಇ-ಸ್ವತ್ತು ಆಗಿದ್ದರೆ ಮಾತ್ರ ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಸಾಧ್ಯ. ಇಲ್ಲದೇ ಹೋದರೆ ಖರೀದಿಸಿದ ಆಸ್ತಿಗೆ ಕಾನೂನಿನ ಮಾನ್ಯತೆಯೇ ಸಿಗುವುದಿಲ್ಲ. ತುರ್ತಾಗಿ ಹಣದ ಅವಶ್ಯಕತೆಯಿದ್ದವರು ಅಸ್ತಿ ಮಾರಾಟ ಮಾಡಲು ಇದರಿಂದ ತೀವ್ರ ತೊಂದರೆ ಎದುರಿಸಬೇಕಾಗುತ್ತದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ವಿಷಯಗಳನ್ನು ಗ್ರಹಿಸುವಾಗ , ಈ ಸಮಸ್ಯೆಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ವಿವಿಧ ಹಂತಗಳಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಅವರ ಕಚೇರಿಯಲ್ಲೇ ಕುಳಿತು ಸಮಸ್ಯೆಗಳನ್ನು ವಿವರಿಸಿದಾಗ. ಆಗಿರುವ ಲೋಪದ ಬಗ್ಗೆ ಗಮನ ಸೆಳೆದಾಗ, ತೀರ್ಥಹಳ್ಳಿ ತಾಲೂಕು ತ್ರಿಯಂಬಕಪುರ ಗ್ರಾಪಂನ ಅಕ್ಲಾಪುರ, ಶಿವಮೊಗ್ಗ ತಾಲೂಕು ಮಲ್ಲಾಪುರ ಗ್ರಾಪಂನ ಸುತ್ತುಕೋಟೆ, ರಟ್ಟೀಹಳ್ಳಿ, ನ್ಯಾಮತಿ ತಾಲೂಕಿನ ಬಸವನಹಳ್ಳಿ ಗ್ರಾಮದ ದಾಖಲೆಗಳನ್ನು ಪಂಚತಂತ್ರಕ್ಕೆ ಸೇರಿಸಿ ಅಲ್ಲಿನ ಗ್ರಾಮಸ್ಥರು ಇ-ಸ್ವತ್ತು ಪಡೆಯಲು ಅನುಕೂಲ ಕಲ್ಪಿಸಿ ಸದರಿ ಗ್ರಾಮ ಪಂಚಾಯಿತಿಯ ಜನರಿಗೆ ಕೆಲಸಗಳು ಸರಾಗವಾಗಿ ನಡೆಯಲು ಅನುಕೂಲ ಆಗಿರುತ್ತದೆ.

ಸಮನ್ವಯದ ಕೊರತೆ

ಗ್ರಾಪಂಗಳಲ್ಲಿ ಇ-ಆಡಳಿತ ಸರಿಯಾಗಿ ಅನುಷ್ಟಾನಗೊಳ್ಳಲು ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಮತ್ತು ಇ-ಆಡಳಿತ ಇಲಾಖೆ ನಡುವೆ ಸಮನ್ವಯ ಅಗತ್ಯ. ಈಗ ಮೂರು ಇಲಾಖೆಗಳು ಮೂರು ದಿಕ್ಕುಗಳಿಗೆ ಮುಖ ಮಾಡಿವೆ. ದಾಖಲೆಗಳ ತಪ್ಪುಗಳನ್ನು ಸರಿಪಡಿಸಲು ಮೊದಲು ಕಂದಾಯ ಇಲಾಖೆ ದಾಖಲೆಗಳನ್ನು ಸರಿ ಮಾಡಬೇಕು. ಬಳಿಕ ಅದನ್ನು ಇ-ಆಡಳಿತದ ಮೂಲಕ ಸಾಫ್ಟ್‌ವೇರ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಅಂತಿಮವಾಗಿ ಪಂಚಾಯತ್‌ರಾಜ್ ದಾಖಲೆಗಳು ಸರಿಯಾಗಿ ಅನುಷ್ಟಾನವಾಗಬೇಕು. ಈಗ ಇ-ಆಡಳಿತಕ್ಕೆ ತಿದ್ದುಪಡಿಗೆಂದು ಬರುವ ದಾಖಲೆಗಳ ಕಡತಗಳು ಮೂಲೆ ಸೇರುತ್ತಿರುವುದೇ ಸಮಸ್ಯೆಯ ಮೂಲ.

ಇಲಾಖೆಗಳ ನಡುವೆ ಸಮನ್ವಯದ ಸಮಸ್ಯೆಯಿಂದ ಜನರು ಪರಿತಪಿಸುವಂತಾಗಿದೆ. ಎಲ್ಲಿ ದಾಖಲೆಗಳನ್ನು ಸರಿ ಮಾಡಿಕೊಳ್ಳಬೇಕು ಎಂಬುದು ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಿಗೂ ತಿಳಿಯುತ್ತಿಲ್ಲ. ಇನ್ನೂ ನೂರಾರು ಕಡೆ ಪಂಚತಂತ್ರ ಸಮಸ್ಯೆಯಿಂದ ಇ-ಸ್ವತ್ತು ಕೈಗೆಟುಕದಂತಾಗಿದೆ. ನಿರಂತರ ಫಾಲೋಅಪ್ ಒಂದೇ ಇದಕ್ಕೆ ಪರಿಹಾರ, ಎಂದು ನನ್ನ ನಂಬಿಕೆ

ಡಿ.ಎಸ್.ಅರುಣ್ ,

ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು

ಅಕ್ಲಾಪುರ ಗ್ರಾಮದ ಅಷ್ಟೂ ಆಸ್ತಿಗಳನ್ನು ಹುಲ್ಲತ್ತಿ ಗ್ರಾಮಕ್ಕೆ ಸೇರಿಸುವ ಮೂಲಕ ಲೋಪವಾಗಿತ್ತು. ಇದನ್ನು ಸರಿಪಡಿಸಲು 15 ವರ್ಷಗಳಿಗೂ ಹೆಚ್ಚು ಕಾಲದಿಂದ ಪ್ರಯತ್ನ ನಡೆಯುತ್ತಲೇ ಇತ್ತು. ಕಳೆದ ಮೂರು ವರ್ಷಗಳಲ್ಲಿ ಎಲ್ಲ ಕಚೇರಿಗೂ ಅಲೆದಾಡಿದ್ದೆವು. ಆದರೆ ಈಗ ಎಂಎಲ್‌ಸಿ ಡಿ.ಎಸ್.ಅರುಣ್ ಅವರು ಇದಕ್ಕೆ ಮುಕ್ತಿ ನೀಡಿದ್ದಾರೆ.

ಎ.ಎಸ್.ರವೀಂದ್ರ, ತ್ರಿಯಂಬಕಪುರ ಗ್ರಾಪಂ ಸದಸ್ಯ.

Leave a Reply

Your email address will not be published. Required fields are marked *

Optimized by Optimole
error: Content is protected !!