11-12-2021ರಲ್ಲಿ ಅಕ್ರಮ ಗಾಂಜಾ ಸಾಗಿಸಿ ಪೋಲಿಸರ ಭಲೇಗೆ ಸಿಕ್ಕಿ ಬಿದ್ದಿದ್ದ ನಾಲ್ವರಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 1,05,000/- ದಂಡ ವಿಧಿಸಿ ತೀರ್ಪು ನೀಡಿದೆ.
ಅಶ್ವಸೂರ್ಯ/ಶಿವಮೊಗ್ಗ: ದಿನಾಂಕ 11-12-2021ರಂದು
ಮಧ್ಯಾಹ್ನ ಶಿವಮೊಗ್ಗ ನಗರದ ವಾಸಿಗಳಾದ ದೌಲತ್ ಅಲಿಯಾಸ್ ಗುಂಡು, ಮುಜೀಬ್ ಅಲಿಯಾಸ್ ಬಸ್ಟ್, ಶೋಹೇಬ್ ಅಲಿಯಾಸ್ ಚೂಡಿ ಮತ್ತು ಮಹಮ್ಮದ್ ಜಫ್ರುಲ್ಲಾ ಎನ್ನುವ ಅಕ್ರಮ ಗಾಂಜಾ ಮಾರಾಟಗಾರರ ಗ್ಯಾಂಗ್ ಅಕ್ರಮವಾಗಿ ಮಾದಕ ವಸ್ತು ಗಾಂಜಾವನ್ನು ತಮ್ಮ ಇನೋವಾ ಕಾರಿನಲ್ಲಿ ಸಂಗ್ರಹಿಸಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಆಂದ್ರಪ್ರದೇಶದಿಂದ ಶಿವಮೊಗ್ಗ ನಗರದ ಕಡೆಗೆ ಹೊರಟಿದ್ದರು.
ಅಕ್ರಮವಾಗಿ ಮಾದಕವಸ್ತು ಕಳ್ಳ ಸಾಗಣೆದಾರರ ಗ್ಯಾಂಗ್ ಇನೋವಾ ಕಾರಿನಲ್ಲಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ದೀಪಕ್ ಎಂ ಎಸ್, ಪಿಐ ತುಂಗಾನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪೋಲಿಸರ ತಂಡವು ಅಕ್ರಮ ಮಾದಕವಸ್ತು ದಂಧೆಕೋರರನ್ನು ಹೆಡೆಮುರಿಕಟ್ಟಲು ಶಿವಮೊಗ್ಗ ನಗರದ ಲಕ್ಕಿನಕೊಪ್ಪ ಕ್ರಾಸ್ಸಿನ ಹತ್ತಿರ ಹಾಲು ಲಕ್ಕವಳ್ಳಿ ಕಡೆಗೆ ಹೋಗುತ್ತಿದ್ದ ಇನೋವಾ ಕಾರನ್ನು ತಡೆದು ಪರಿಶೀಲಿಸಿದ್ದಾರೆ.
ಪೋಲಿಸರ ತಪಾಸಣೆ ವೇಳೆ ಕಾರಿನ ಸ್ಟೆಪ್ನಿ ಹಿಂಬಾಗದ ಡೋರ್ ಗಳು, ಮುಂಬಾಗದ ಡೋರ್ ಗಳು ಮತ್ತು ಬಾನೆಟ್ ನ ಒಳಗೆ ಗಾಂಜಾ ಪ್ಯಾಕೇಟ್ ಗಳು ಅತಿ ಬುದ್ಧಿವಂತಿಕೆಯಿಂದ ಸಂಗ್ರಹಿಸಿಟ್ಟಿದ್ದರು.ಅದರೂ ತುಂಗಾ ನಗರದ ಪೊಲೀಸರ ತಂಡ ಕಾರಿನಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದರು. ಈ ಅಕ್ರಮ ಮಾದಕವಸ್ತು ದಂಧೆಯ ರೂವಾರಿಗಳಾದ ಸದರಿ ನಾಲ್ಕು ಜನ ಆರೋಪಿತರನ್ನು ದಸ್ತಗಿರಿ ಮಾಡಿ, ಅಂದಾಜು ಮೌಲ್ಯ 6,50,000/- ರೂಗಳ 21 ಕೆ.ಜಿ. 315 ಗ್ರಾಂ ತೂಕದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ವಶಪಡಿಸಿಕೊಂಡಿದ್ದರು.
ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0403/2021 ಕಲಂ 8(c),20(b),20(ii) (C)) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು
ಈ ಪ್ರಕಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಶ್ರೀಮತಿ ಭಾರತಿ, ಬಿ ಹೆಚ್, ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆರವರು ಪ್ರಕರಣದ ತನಿಖೆ ಪೂರೈಸಿ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀ ಸುರೇಶ್ ಕುಮಾರ್ ಎ. ಎಂ. ಸರ್ಕಾರಿ ಅಭಿಯೋಜಕರವರು, ಪ್ರಕರಣದ ವಾದ ಮಂಡಿಸಿದ್ದು, ಘನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ, ಮಾನ್ಯ ನ್ಯಾಯಾಧಿಶರಾದ ಶ್ರೀ ಮಂಜುನಾಥ್ ನಾಯಕ್ ರವರು ದಿನಾಂಕಃ 15-06-2024 ರಂದು ಆರೋಪಿತರಾದ 1) ದೌಲತ್ @ ಗುಂಡು, 27 ವರ್ಷ, ಇಂದಿರಾನಗರ್, ಶಿವಮೊಗ್ಗ ಟೌನ್, 2) ಮುಜೀಬ್ @ ಬಸ್ಟ್, 27 ವರ್ಷ, ಇಂದಿರಾನಗರ, ಶಿವಮೊಗ್ಗ ಟೌನ್, 3) ಶೋಹೇಬ್ @ ಚೂಡಿ, 24 ವರ್ಷ, ಕಡೇಕಲ್, ಶಿವಮೊಗ್ಗ ಟೌನ್ ಮತ್ತು 4) ಮಹಮ್ಮದ್ ಜಫ್ರುಲ್ಲಾ, 24 ವರ್ಷ, ಕಡೇಕಲ್ ಶಿವಮೊಗ್ಗ ಟೌನ್, ಇವರುಗಳಿಗೆ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ತಲಾ ರೂ 1,05,000/- ದಂಡ, ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ 01 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ.