ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳು ಈ ಬಾರಿಯ ಲೋಕಸಭಾ ಚುನಾವಣೆಯ ಗೆಲುವಿಗೆ ನನಗೆ ಸಹಕಾರಿಯಾಗಲಿವೆ : ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ : ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯಗಳು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳು ಈ ಬಾರಿಯ ಲೋಕಸಭಾ ಚುನಾವಣೆಯ ಗೆಲುವಿಗೆ ನನಗೆ ಸಹಕಾರಿಯಾಗಲಿವೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಹೇಳಿದರು.
ಜಿಲ್ಲೆಯಾದ್ಯಂತ ಪ್ರತಿ ಮನೆಗಳಿಗೆ ತೆರಳಿ ಮತಯಾಚನೆ ನಡೆಸಲಾಗಿದೆ. ಅದೇ ರೀತಿ ಕ್ಷೇತ್ರದೆಲ್ಲೆಡೆ ಜನರು ಹೆಚ್ಚಿನ ಪ್ರೀತಿ, ವಿಶ್ವಾಸ ತೋರುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಗೆಲುವು ನಿಶ್ಚಿತ ಎನ್ನುವ ನಂಬಿಕೆ ಇದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಗಂಭೀರವಾಗಿ ಪರಿಗಣಿಸಬೇಕಾದ ಸಮಸ್ಯೆಗಳು ಸಾಕಷ್ಟಿವೆ. ಈ ಎಲ್ಲಾ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಕ್ಷೇತ್ರದ ಜನರಿಗೆ ಶಕ್ತಿಯಾಗಿ ನಿಲ್ಲುತ್ತೇನೆ. ಕ್ಷೇತ್ರದ ಎಲ್ಲಾ ಭಾಗದಲ್ಲಿ ಸಂಚರಿಸುವಾಗ ಯುವಜನರು, ಹಿರಿಯ ನಾಗರೀಕರು ಸೇರಿ ಎಲ್ಲಾ ವರ್ಗದವರು ಹೆಚ್ಚು ಕಾಳಜಿ ತೋರ್ಪಡಿಸುತ್ತಿದ್ದಾರೆ ಎಂದರು.
ಕ್ಷೇತ್ರದ ಪ್ರತಿ ಬೂತ್ ಮಟ್ಟದ ಕಾರ್ಯಕರ್ತರು ಶಕ್ತಿ ಮೀರಿ ಮತಯಾಚನೆಯ ಕಾರ್ಯದಲ್ಲಿ ತೊಡಗಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮುಖಂಡರು ಮುಂದೆ ನಿಂತು ಪ್ರಚಾರ ನಡೆಸುತ್ತಿದ್ದಾರೆ. ಆದ್ದರಿಂದ, ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ
ಎಸ್. ಮಧುಬಂಗಾರಪ್ಪ ಮಾತನಾಡಿ, ಭದ್ರಾವತಿ ತಾಲ್ಲೂಕಿನ ವಿಐಎಸ್ ಎಲ್ ಕಾರ್ಖಾನೆಯ ಮರುಸೃಷ್ಠಿ, ಬಿಜೆಪಿಯ ದುರಾಡಳಿತದಿಂದ ಕ್ಷೇತ್ರದ ರಕ್ಷಣೆ ಸೇರಿದಂತೆ ಬಗರ್ ಹುಕುಂ, ಮುಳುಗಡೆ ಸಂತ್ರಸ್ತರ ಪರ ಕೇಂದ್ರದಲ್ಲಿ ದ್ವನಿಗೂಡಿಸಲು ಗೀತಕ್ಕ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅದೇ ರೀತಿ, ಬಿಜೆಪಿಯ ಸುಳ್ಳು ಆಶ್ವಾಸನೆಗಳಿಂದ ಕ್ಷೇತ್ರದ ರಕ್ಷಣೆ ಅಸಾಧ್ಯವೆಂದು ಸಾರಲು ಗೀತಕ್ಕ ಅವರ ಗೆಲುವು ಅನಿವಾರ್ಯ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಹತ್ತು ಮನೆ ನಿರ್ಮಾಣ ಮಾಡುವ ಶಕ್ತಿ ಇದೆ. ಆದರೆ, ಇಲ್ಲಿ ಜನ ಸಾಮಾನ್ಯರ ಹೃದಯದಲ್ಲಿ ಮನೆ ಮಾಡಬೇಕು. ಅದನ್ನು ಗೀತಕ್ಕ ಮಾಡಿದ್ದಾರೆ. ರಾಜ್ಯದಲ್ಲಿ ಶೇ 40% ಕಮಿಷನ್ ಹಗರಣ ಸೇರಿದಂತೆ ಕಳಪೆ ಗುಣ ಮಟ್ಟದ ಸ್ಮಾರ್ಟ್ ಸಿಟಿ ಕಾಮಗಾರಿ, ಕರೋನ ಸಂದರ್ಭದಲ್ಲಿ ಕೋಟಿ ಕೋಟಿ ಹಣ ಲೂಟಿ ಸೇರಿದಂತೆ, ಹತ್ತಾರು ಹಗರಣಗಳ ಸತ್ಯಾಂಶ ಜನ ಸಮಾನ್ಯರಿಗೆ ಮನವರಿಕೆ ಆಗಿದೆ. ಈ ಬಾರಿ ಬಿಜೆಪಿಯವರು ಗಂಟುಮೂಟೆ ಕಟ್ಟುವುದು ನಿಶ್ಚಿತ ಎಂದರು.
ನಟ ಶಿವರಾಜಕುಮಾರ್ ಮಾತನಾಡಿ ಕ್ಷೇತ್ರದ ಜನರು ಭಾವನಾತ್ಮಕ ಭಾವನೆಯನ್ನು ಹೊಂದಿದ್ದಾರೆ. ಇಲ್ಲಿ ಜನಸಾಮಾನ್ಯರ ಬೇಡಿಕೆಗಳು ಇಂಗಿತಗೊಂಡಿಲ್ಲ. ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಜನ ಸಾಮಾನ್ಯರ ಹತ್ತಿರದಿಂದ ಮಾತನಾಡಿದ್ದೇವೆ. ಕೆಲವು ಸಮಸ್ಯಗಳ ಬಗ್ಗೆ ಅಳಲು ತೋಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಕ್ಷೇತ್ರದಲ್ಲಿ ಇಲ್ಲಿಯವರೆಗೆ ನಮ್ಮ ಸಮಸ್ಯೆ ಆಲಿಸಲು ಯಾರೂ ಕೂಡ ಬಂದಿಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ. ಆದ್ದರಿಂದ ಇಲ್ಲಿ ಕೆಲಸ ಮಾಡಲು ಮನಸ್ಸು ಬೇಕು. ಆ ಮನಸ್ಸು ಪತ್ನಿ ಗೀತಾಗೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜಿ.ಡಿ.ಮಂಜುನಾಥ, ಪದ್ಮನಾಭ, ಶೀ.ಜು.ಪಾಶ ಇದ್ದರು.