ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆ: ಉರಿ ಬಿಸಿಲನ್ನು ಲೆಕ್ಕಿಸದೆ ರಸ್ತೆ ಉದ್ದಕ್ಕೂ ಸಾಗಿದ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ : ಶಿವಮೊಗ್ಗ ಕ್ಷೇತ್ರದ ಪ್ರಬಲ ಬಿಜೆಪಿಯ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಇಂದು ಸಾವಿರಾರು ಕಾರ್ಯಕರ್ತರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು. ನಗರದ ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಇಂದು (ಏ,18) ಬೆಳಿಗ್ಗೆ 11ಗಂಟೆಗೆ ಆರಂಭವಾದ ಬಿಜೆಪಿ-ಜೆಡಿಎಸ್ ಬೆಂಬಲಿಗರ ಬೃಹತ್ ಮೆರವಣಿಗೆ ಚುನಾವಣೆಯ ಮುನ್ನವೇ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿತ್ತು.
ಬೆಳಿಗ್ಗೆಯಿಂದಲೇ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಮುಂಬಾಗದ ವೃತ್ತದಲ್ಲಿ ಜಮಾವಣೆಗೊಂಡ ಬೆಂಬಲಿಗರು ಗಾಂಧಿ ಬಜಾರ್ ಮುಖ್ಯ ರಸ್ತೆಯ ಉದ್ದಗಲಕ್ಕೂ ಬಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಉರಿ ಬಿಸಿಲಿನ ತಾಪವನ್ನು ಲೆಕ್ಕಿಸದೇ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಬೆಂಬಲಿಗರು ಮೆರವಣಿಗೆಯಲ್ಲಿ ಭಾಗವಸಿದ್ದರು, ಶಿವಮೊಗ್ಗದ ಹೃದಯಭಾಗವಂತು ಕೇಸರಿಮಯವಾಗಿ ಮಾರ್ಪಟ್ಟಿತ್ತು. ಬಿಜೆಪಿ ಬೆಂಬಲಿಗರು ಕೇಸರಿ ಟೋಪಿ, ಹೆಗಲಿಗೆ ಶಾಲು ಹಾಕಿಕೊಂಡಿದ್ದರೆ ಜೆಡಿಎಸ್ ಬೆಂಬಲಿಗರು ಹಸಿರು ಶಾಲು ಧರಿಸಿ ರಸ್ತೆ ಉದ್ದಕ್ಕೂ ಹೆಜ್ಜೆ ಹಾಕಿದರು.
ಮೆರವಣಿಗೆಗೂ ಮುನ್ನ ಬಿ.ವೈ. ರಾಘವೇಂದ್ರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್, ಮಾಜಿ ಶಾಸಕ ಹರತಾಳು ಹಾಲಪ್ಪ ಜೋತೆಯಲ್ಲಿ ಇದ್ದರು.
ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಕೂಡ ಪಾಲ್ಗೊಂಡಿದ್ದರು
ಮೆರವಣಿಗೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಜನರು ಗುಂಪು ಗುಂಪಾಗಿ ಕಾಣಸುತ್ತಿದ್ದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬೆಂಬಲಿಗರ ಬಾಯಾರಿಕೆ ತಣಿಸಲು ವಾಹನಗಳಲ್ಲಿ ನೀರು, ಮಜ್ಜಿಗೆಯನ್ನು ವಿತರಿಸಲಾಗುತ್ತಿತ್ತು.
ಮೆರವಣಿಗೆ ಗಾಂಧಿ ಬಜಾರ್ ಮುಖ್ಯರಸ್ತೆಯ ಮೂಲಕ ಶಿವಪ್ಪ ನಾಯಕ ವೃತ್ತಕ್ಕೆ ಬಂದಾಗ ಅಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೇರಿದಂತೆ ಮುಖಂಡರಿಗೆ ಬೃಹತ್ ಸೇಬಿನ ಹಾರ ಹಾಕಲಾಯಿತು. ಅಲ್ಲಿಂದ ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ ಮೂಲಕ ಗೋಪಿ ವೃತ್ತಕ್ಕೆ ಬಂದನಂತರದಲ್ಲಿ ಅಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು.
ಮೆರವಣಿಗೆಯಲ್ಲಿ ವಾದ್ಯ ಮೇಳ,ಕೀಲು ಗೊಂಬೆ, ಮೇಳ, ಡೊಳ್ಳು ತಂಡದವರು ಸಾಥ್ ನೀಡಿದರು.
ಬಿಜೆಪಿಯ ಶಾಸಕ ಆರಗ ಜ್ಞಾನೇಂದ್ರ,ಅರುಣ್ ಕುಮಾರ್ ಪುತ್ತಿಲ, ರುದ್ರೆ ಗೌಡ್ರು ಮತ್ತು ಆಶೋಕ್ ನಾಯಕ ಉಪಸ್ಥಿತಿಯಲ್ಲಿ ಬಿ ವೈ ರಾಘವೇಂದ್ರ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಿದರು. ನಾಮ ಪತ್ರ ಸಲ್ಲಿಸುವ ಮುನ್ನ ಬಿ.ವೈ.ರಾಘವೇಂದ್ರ ಕೋಟೆ ಆಂಜನೇಯ ಸ್ವಾಮಿ, ಮಾರಿಕಾಂಬೆ ಹಾಗೂ ರಾಮಣ್ಣ ಶ್ರೇಷ್ಠಿ ಪಾರ್ಕಿನ ಗಣೇಶನಿಗೆ ಪೂಜೆ ಸಲ್ಲಿಸಿದ್ದರು.