Bantwala: ಅಕ್ರಮ ಸಿಮ್ ಕಾರ್ಡ್ ಪ್ರಕರಣ ತನಿಖೆ ವೇಳೆ ವಿದೇಶಿ ಕರೆನ್ಸಿ ದಂಧೆ ಬಯಲು.! ಇಡಿಯಿಂದ ಐವರು ಖದೀಮರ ವಿಚಾರಣೆ.
News.Ashwasurya.in
ಬಂಟ್ವಾಳ: 42 ಅಕ್ರಮ ಸಿಮ್ ಕಾರ್ಡ್ ಜೊತೆ ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದ ಐವರು ಆರೋಪಿಗಳ ವಿಚಾರಣೆಯನ್ನು ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಗೆ ವಿದೇಶಿ ಕರೆನ್ಸಿ ದಂಧೆಯ ನಂಟಿರುವ ಅನುಮಾನದ ಹಿನ್ನೆಲೆಯಲ್ಲಿ ಇಡಿ ತನಿಖೆ ಆರಂಭಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ತೋಟತ್ತಾಡಿ ಎಂಬಲ್ಲಿ ಬೇರೆ ಬೇರೆಯವರ ಹೆಸರಿನಲ್ಲಿ ಅಕ್ರಮವಾಗಿ ಸಿಮ್ ಖರೀದಿಸಿ ಬೆಂಗಳೂರಿಗೆ ಹೊರಟಿದ್ದವರನ್ನು ಧರ್ಮಸ್ಥಳ ಪೊಲೀಸರು ಅನುಮಾನಗೊಂಡು ಬಂಧಿಸಿದ್ದರು. ಫೆ.1 ರಂದು ಆರೋಪಿಗಳನ್ನು ಬಂಧಿಸಲಾಗಿದ್ದು ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಅವರನ್ನು ಪಡೆದುಕೊಳ್ಳಲಾಗಿತ್ತು.ಅ ನಂತರದಲ್ಲಿ ಪೋಲಿಸರು ತನಿಖೆ ಚುರುಕುಗೊಳಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳಿಗೆ ವಿದೇಶಿ ಕರೆನ್ಸಿ ದಂಧೆಯ ನಂಟಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಇಡಿ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿ ಪತ್ರ ಬರೆದಿದ್ದರು.
ಇದೀಗ ಇಡಿ ಅಧಿಕಾರಿಗಳು ಬಂಟ್ವಾಳದ ಡಿವೈಎಸ್‌ಪಿ ಕಚೇರಿಗೆ ಆರೋಪಿಗಳನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಇಡಿ ಅಧಿಕಾರಿಗಳು ಕೂಡಾ ಈ ಐವರ ಮೇಲೆ ಪ್ರಕರಣ ದಾಖಲಿಸಿಕೊಂಡು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಐವರು ಯುವಕರು ಅಕ್ರಮವಾಗಿ ಸಿಮ್ ಕಾರ್ಡ್ ಖರೀದಿಸಿದ ಖಚಿತ ಮಾಹಿತಿ ಪಡೆದು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಫೆ.1 ರಂದು ಸಂಜೆ 4 ಗಂಟೆ ಸುಮಾರಿಗೆ ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಹುಡುಕಾಟ ನಡೆಸಿದಾಗ ಐವರು ಪತ್ತೆಯಾಗಿದ್ದು, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಈ ವೇಳೆ ಯುವಕರ ಬ್ಯಾಗ್ ನಲ್ಲಿದ್ದ ಬೇರೆ ಬೇರೆ ವಿಳಾಸದ ಹೆಸರಿನಲ್ಲಿ ಅಕ್ರಮವಾಗಿ ಪಡೆದುಕೊಂಡಿದ್ದ 42 ಸಿಮ್ ಕಾರ್ಡ್ ಮತ್ತು ಅವರ ಬಳಿ ಇದ್ದ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಂಡಿದ್ದರು.ಐವರನ್ನು ವಶಕ್ಕೆ ಪಡೆದಿದ್ದರು.